‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆ ಅಡಿಯಲ್ಲಿ 8 ವಿಷಯಗಳ ಕುರಿತು ಈಗಾಗಲೇ ತಜ್ಞರು, ಪರಿಸರವಾದಿಗಳು ಸೇರಿದಂತೆ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲಾಗಿದೆ. ಇದೀಗ, ಬಂದಿರುವ ಸಲಹೆಗಳನ್ನು ಸಂಗ್ರಹಿಸಿ ಒಟ್ಟುಗೂಡಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ಸಿದ್ದಪಡಿಸಿರುವ ವರದಿಯನ್ನು ಸಲ್ಲಿಸಬೇಕು ಎಂದು ಬ್ರ್ಯಾಂಡ್ ಬೆಂಗಳೂರು ಸಮಾವೇಶ ಸಮಿತಿಯ ಅಧ್ಯಕ್ಷ ಹಾಗೂ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬ್ರ್ಯಾಂಡ್ ಬೆಂಗಳೂರಿನ ಸಮಾವೇಶವನ್ನು ನಡೆಸುವ ಸಂಬಂಧ ಪಾಲಿಕೆ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, “ಬ್ರ್ಯಾಂಡ್ ಬೆಂಗಳೂರು ಯೋಜನೆಯ ಅನುಷ್ಠಾನಕ್ಕಾಗಿ ಈಗಾಗಲೇ ಸಾಕಷ್ಟು ಸಿದ್ದತೆ ಮಾಡಿಕೊಳ್ಳಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಸರ್ವಪಕ್ಷಗಳ ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಲಾಗಿದೆ” ಎಂದರು.
“ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರು, ಸ್ಥಳೀಯ ಎನ್‌ಜಿಒ/ಆರ್.ಡಬ್ಲ್ಯೂ.ಎ ಗಳ ಜತೆ ಸಭೆ ನಡೆಸಿ ಸಲಹೆ/ಅಭಿಪ್ರಾಯ ಪಡೆಯಲಾಗಿದೆ. ಜತೆಗೆ ಸಾರ್ವಜನಿಕರಿಂದ ವೆಬ್ ಪೋರ್ಟಲ್ ಮೂಲಕ ಸಲಹೆ ಪಡೆಯಲಾಗಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು ಹಾಗೂ ಜಲಸುರಕ್ಷಾ ಬೆಂಗಳೂರು ಸೇರಿದಂತೆ ಒಟ್ಟು 7 ವಿಷಯಗಳ ಕುರಿತು 70 ಸಾವಿರಕ್ಕೂ ಹೆಚ್ಚು ಅಭಿಪ್ರಾಯ/ಅನಿಸಿಕೆ/ಸಲಹೆಗಳು ಬಂದಿವೆ. 8ನೇ ವಿಷಯವಾದ ಶೈಕ್ಷಣಿಕ ಬೆಂಗಳೂರು ವಿಷಯವಾಗಿ ಸಭೆ ನಡೆಸಲಾಗಿದೆ. ಅದರಂತೆ 8 ವಿಷಯಗಳ ಕುರಿತು ಸಿದ್ದಪಡಿಸಿರುವ ವರದಿಯನ್ನು ಕೂಡಲೇ ಸಲ್ಲಿಸಬೇಕು” ಎಂದು ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
“ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ 8 ವಿಷಯಗಳ ಕುರಿತಾಗಿ ಸಿದ್ದಪಡಿಸಿರುವ ವರದಿಗಳ ಆಧಾರದ ಮೇಲೆ 8 ವಿಷಯಗಳನ್ನೊಳಗೊಂಡ ಸಂಕ್ಷಿಪ್ತ ಪ್ರಾತ್ಯಕ್ಷಿಕೆಯನ್ನು ಸಿದ್ದಪಡಿಸಿಕೊಳ್ಳಬೇಕು. ಸಾರ್ವಜನಿಕರಿಂದ ಬಂದಿರುವ ಅಭಿಪ್ರಾಯಗಳ ಬಗ್ಗೆ ಹಾಗೂ ತಜ್ಞರೊಂದಿಗೆ ವಿಚಾರ ವಿನಿಮಯ ನಡೆಸುವ ಬಗ್ಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಮಾವೇಶ ಸಭೆ ನಡೆಸಬೇಕು. ಈ ಸಭೆ ಏರ್ಪಡಿಸುವ ಸಲುವಾಗಿ ಅಗತ್ಯವಿರುವ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು” ಎಂದು ಆಡಳಿತ ವಿಭಾಗದ ಉಪ ಆಯುಕ್ತರಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಣೇಶ ಪ್ರತಿಷ್ಠಾಪನೆಗೆ ಒಂದೇ ಸೂರಿನಡಿ ಸಿಗಲಿದೆ ಅನುಮತಿ: ಬಿಬಿಎಂಪಿ ಆಯುಕ್ತ
ಬ್ರ್ಯಾಂಡ್ ಬೆಂಗಳೂರು ಕಲ್ಪನೆಯ ಬಗ್ಗೆ 8 ಸಮಿತಿಗಳು ಸಿದ್ದಪಡಿಸುತ್ತಿರುವ ವರದಿಗಳ ಆಧಾರದ ಮೇಲೆ ಮುಂದಿನ ಕಾರ್ಯಯೋಜನೆಯನ್ನು ಸೂಚಿಸುವಂತೆ ಹಾಗೂ ಅಗತ್ಯ ಆಡಳಿತಾತ್ಮಕ ಸಿದ್ದತೆಗಳ ಬಗ್ಗೆ ಸಲಹೆ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ಸಮಾವೇಶದ ಸಮಿತಿಯ ಸದಸ್ಯರಾದ ಡಾ.ತ್ರಿಲೋಕ್ ಚಂದ್ರ, ಡಾ. ಹರೀಶ್ ಕುಮಾರ್, ಆಡಳಿತ ವಿಭಾಗದ ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, 8 ವಿಷಯಗಳ ನೋಡಲ್ ಅಧಿಕಾರಿಗಳು, ಸಮನ್ವಯಾಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.