ಬೆಂಗಳೂರು ವ್ಯಾಪ್ತಿಯಲ್ಲಿ ಉನ್ನತ ಮಟ್ಟದ ಶಿಕ್ಷಣ ನೀಡುವ ಸಲುವಾಗಿ ನಾವೆಲ್ಲರೂ ಸೇರಿ ಉತ್ತಮ ಯೋಜನೆಯನ್ನು ರೂಪಿಸಬೇಕಿದೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರು ಹಾಗೂ ಶೈಕ್ಷಣಿಕ ಬೆಂಗಳೂರಿನ ನೋಡಲ್ ಅಧಿಕಾರಿಯಾದ ಪ್ರೀತಿ ಗೆಹ್ಲೋಟ್ ತಿಳಿಸಿದರು.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಶೈಕ್ಷಣಿಕ ಬೆಂಗಳೂರು ವಿಷಯಕ್ಕೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಮೊದಲ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, “ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 7 ನಾನಾ ವಿಷಯಗಳ ಕುರಿತು ಸಾರ್ವಜನಿಕರಿಂದ ಸಲಹೆ/ಅಭಿಪ್ರಾಯ ಪಡೆದು ಅದನ್ನು ಶೈಕ್ಷಣಿಕ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ಕ್ರೋಡೀಕರಿಸಿ ವರದಿಯನ್ನು ಸಿದ್ದಪಡಿಸಲಾಗುತ್ತಿದೆ. ಇದೀಗ ಹೊಸದಾಗಿ ಶೈಕ್ಷಣಿಕ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ಸೇರ್ಪಡೆ ಮಾಡಲಾಗಿದೆ” ಎಂದು ಹೇಳಿದರು.
“ಶೈಕ್ಷಣಿಕ ಬೆಂಗಳೂರು ವಿಷಯವಾಗಿ ಬರುವಂತಹ ಸಲಹೆಗಳ ಜೊತೆ ಒಂದು ವಾರದೊಳಗಾಗಿ ವಿಚಾರ ಸಂಕಿರಣವನ್ನು ಏರ್ಪಡಿಸಿ ಅದರಲ್ಲಿ ಬಂದಂತಹ ಸಲಹೆಗಳನ್ನು ಕ್ರೋಢೀಕರಿಸಿ ವರದಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು” ಎಂದು ಹೇಳಿದರು.
“ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 3000 ಸಾವಿರ ಸರ್ಕಾರಿ ಶಾಲಾ-ಕಾಲೇಜುಗಳು ಹಾಗೂ ಪಾಲಿಕೆಯ ಒಡೆತನದ 166 ಶಾಲಾ-ಕಾಲೇಜುಗಳಿವೆ. ಈ ಎಲ್ಲ ಶಾಲಾ-ಕಾಲೇಜುಗಳನ್ನು ದತ್ತು ಪಡೆಯುವ ಸಲುವಾಗಿ ಉಪ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅನಧಿಕೃತ ಬ್ಯಾನರ್ ಅಳವಡಿಕೆ; ಕಾಂಗ್ರೆಸ್‌ಗೆ 50,000 ರೂ. ದಂಡ
ಶೈಕ್ಷಣಿಕ ಬೆಂಗಳೂರಿಗೆ ಸಲಹೆಗಳು
- ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ನೀಡುವುದು.
- ಸರ್ಕಾರಿ ಶಾಲಾ-ಕಾಲೇಜು ಪರಿಶೀಲಿಸಿ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವುದು.
- ಪಾರಂಪರಿಕ ಶಾಲಾ-ಕಾಲೇಜುಗಳನ್ನು ಗುರುತಿಸಿ ಆರ್ಕಿಟೆಕ್ಟ್ ಮೂಲಕ ವಿನ್ಯಾಸಗೊಳಿಸುವುದು.
- ಮಕ್ಕಳು ಹಾಗೂ ಪೋಷಕರಿಗೆ ಕೌನ್ಸೆಲಿಂಗ್ ನೀಡಿ ಎಲ್ಲ ಮಕ್ಕಳು ವಿದ್ಯಾಭ್ಯಾಸ ಪಡೆಯುವಂತೆ ಮಾಡಬೇಕು.
- ಬೆಂಗಳೂರನ್ನು ಜ್ಞಾನ ನಗರಿಯನ್ನಾಗಿ ಪರಿವರ್ತಿಸುವುದು.
- ನಗರದಲ್ಲಿ ಹೆಚ್ಚು ಗ್ರಂಥಾಲಯನ್ನು ತೆರೆದು ಓದುವ ಹವ್ಯಾಸವನ್ನು ಹೆಚ್ಚಿಸುವುದು
- ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ನಿಟ್ಟಿನಲ್ಲಿ ಮಕ್ಕಳಿಗೆ ತರಬೇತಿ ನಿಡುವುದು.
- ಮಕ್ಕಳಿಗಾಗಿ ಕ್ಲಸ್ಟರ್ ಅಕಾಡೆಮಿಕ್ ಸೆಂಟರ್‌ಗಳನ್ನು ತೆರೆಯುವುದು.
- ತಂತ್ರಜ್ಞಾನವನ್ನು ಬಳಸಿಕೊಂಡು ಸುಲಭ ರೀತಿಯಲ್ಲಿ ಶಿಕ್ಷಣ ಕಲಿಯುವ ವ್ಯವಸ್ಥೆ ಕಲ್ಪಿಸುವುದು.
- ಸರ್ಕಾರಿ ಶಾಲೆಗಳ ಅಭಿವೃದ್ಧಿಯಾಗಬೇಕು, ಶೈಕ್ಷಣಿಕ ವ್ಯವಸ್ಥೆಯನ್ನು ಸರಿಪಡಿಸುವುದು.
- ವಿಷಯದ ಜತೆಗೆ ಲೋಕಜ್ಞಾನದ ಬಗ್ಗೆ ಅರಿವು ಮೂಡಿಸಬೇಕು.
- ಮಕ್ಕಳಿಗೆ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿಯಿದೆ ಎಂಬುದನ್ನರಿತು, ಹೆಚ್ಚು ಆಸಕ್ತಿಯೆದೆಯೋ ಅದೇ ವಿಷಯದಲ್ಲಿ ಹೆಚ್ಚು ಪ್ರೋತ್ಸಾಹ ನಿಡುವ ಕೆಲಸ ಮಾಡಬೇಕು.
- ಸಿಎಸ್‌ಆರ್ ಅಡಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು.
- ಕೊಳಗೇರಿ ಪ್ರದೇಶದಲ್ಲಿರುವ ಮಕ್ಕಳಿಗೆ ಶಿಕ್ಷಣ ನೀಡಲು ಅಗತ್ಯ ಕ್ರಮ ಕೈಗೊಳ್ಳುವುದು.
- ಉತ್ತಮ ವಿಜ್ಞಾನ ಲ್ಯಾಬ್ ಹಾಗೂ ಗಣಕಯಂತ್ರ ಲ್ಯಾಬ್ ವ್ಯವಸ್ಥೆ ಕಲ್ಪಿಸುವುದು.
- ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಕನ್ನಡದ ಜೊತೆಗೆ ಆಂಗ್ಲ ಭಾಷೆಯನ್ನೂ ಕಲಿಸುವುದು.
- ಶಿಕ್ಷಕರಿಗೆ ಉತ್ತಮ ತರಬೇತಿ ನೀಡುವುದು.
ಸಭೆಯಲ್ಲಿ ಶಿಕ್ಷಣ ವಿಭಾಗದ ಸಹಾಯ ಆಯುಕ್ತರಾದ ವೆಂಕಟರಾಜು, ಕಾಲೇಜು ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು, ಶಿಕ್ಷಣ ತಜ್ಞರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.