- ಏ.24ರಂದು ಅಧಿಕೃತವಾಗಿ ರಸ್ತೆಗೆ ಇಳಿಯಲಿರುವ ‘ಕ್ಯೂಟ್ ಟ್ಯಾಕ್ಸಿ’
- 4 ಕಿ.ಮೀ ವರೆಗೆ ₹60 ಕನಿಷ್ಠ ದರ, ನಂತರ ಪ್ರತಿ ಕಿ.ಮೀಗೆ ₹16
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಪ್ರಯಾಣಿಕ ಸೇವೆ ನೀಡಲು ನಾಲ್ಕು ಚಕ್ರದ ‘ಕ್ಯೂಟ್’ (ಕ್ವಾಡ್ರಿಸೈಕಲ್)’ ವಾಹನಗಳು ಸೋಮವಾರ (ಏ.24)ದಿಂದ ಅಧಿಕೃತವಾಗಿ ರಸ್ತೆಗೆ ಇಳಿಯಲಿವೆ.
ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ವಾಹನಕ್ಕೆ ಸಾರಿಗೆ ಇಲಾಖೆ ದರ ನಿಗದಿ ಮಾಡಿದ್ದು, ಮೌಲ್ಯ ಮಾಪನ ಇಲಾಖೆ ಸೂಚಿಸಿರುವ ಮೀಟರ್ ಅಳವಡಿಸಲಾಗಿದೆ.
ಬಜಾಜ್ ಕಂಪನಿ ಮುಖ್ಯಸ್ಥರು ನಾಲ್ಕು ಚಕ್ರದ ‘ಕ್ಯೂಟ್’ (ಕ್ವಾಡ್ರಿಸೈಕಲ್)’ ವಾಹನಗಳಿಗೆ ಸೋಮವಾರ ಚಾಲನೆ ನೀಡಲಿದ್ದಾರೆ.
ಈ ವಾಹನಗಳ ಕಾರ್ಯಾಚರಣೆಗೆ ತಿಂಗಳ ಹಿಂದೆಯೇ ಸಾರಿಗೆ ಇಲಾಖೆ ಅನುಮತಿ ನೀಡಿ, ದರ ನಿಗದಿಪಡಿಸಿದೆ. 4 ಕಿ.ಮೀ ವರೆಗೆ ₹60 ಕನಿಷ್ಠ ದರ. ನಂತರ ಪ್ರತಿ ಕಿ.ಮೀಗೆ ₹16 ಇರಲಿದೆ ಎಂದು ಸಾರಿಗೆ ಇಲಾಖೆ ಆದೇಶದಲ್ಲಿ ತಿಳಿಸಿದೆ.
“ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ಎಂಬ ಹೊಸ ಮಾದರಿಯ ವಾಹನವು 2019ರಲ್ಲಿ ಮಾರುಕಟ್ಟೆಗೆ ಬಂದಿತ್ತು. ಇದಕ್ಕೆ ಸಾರಿಗೆ ಇಲಾಖೆ ದರ ನಿಗದಿ ಪಡಿಸಿರಲಿಲ್ಲ. ಕೇವಲ ಉಬರ್ ಸಂಸ್ಥೆಗೆ ಅವಲಂಬಿತರಾಗಿ ಚಾಲಕರು ಸೇವೆ ನೀಡುತ್ತಿದ್ದರು. ದರಗಳು ಸಹ ಸರಿಯಾದ ರೀತಿಯಲ್ಲಿ ಸಿಗುತ್ತಿರಲಿಲ್ಲ” ಎಂದು ಓಲಾ ಉಬರ್(ಓ.ಟಿ.ಯು) ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಏ.25ರಂದು ನಿಮ್ಮ ನೆರಳು ನಿಮಗೆ ಕಾಣಿಸುವುದಿಲ್ಲ!
“ವಾಹನ ಚಾಲಕರು ಮೀಟರ್ ಅಳವಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಬೇಕು ಎಂಬ ಕಾರಣದಿಂದ 2020ರ ಡಿಸೆಂಬರ್ನಲ್ಲಿ ಸಾರಿಗೆ ಇಲಾಖೆಗೆ ಈ ವಾಹನಗಳಿಗೆ ಮೀಟರ್ ದರ ನಿಗದಿ ಪಡಿಸಿ ಕೊಡಲು ಮನವಿ ಮಾಡಿದ್ದೇನು. ಹಲವು ಅಡೆ ತಡೆಗಳ ನಂತರ ಸತತ ಎರಡು ವರ್ಷಗಳ ಬಳಿಕ 2022ರ ಮಾ. 20ರಂದು ಸಾರಿಗೆ ಇಲಾಖೆ ದರ ನಿಗದಿ ಪಡಿಸಿದೆ” ಎಂದು ಹೇಳಿದ್ದಾರೆ.