- ವಿದ್ಯುತ್ ದರ ಏರಿಕೆಯನ್ನು 9% ನಿಂದ 3% ವರೆಗೆ ಇಳಿಸಬೇಕು
- ಇಲಾಖೆಗಳು ಪಾವತಿಸಬೇಕಾದ ಬಾಕಿ ಮೊತ್ತವನ್ನು ಬಡ್ಡಿಸಹಿತ ಸಂಗ್ರಹಿಸಬೇಕು
ರಾಜ್ಯದಲ್ಲಿ ಆಗಾಗ ವಿದ್ಯುತ್ ದರವನ್ನು ಹೆಚ್ಚಳ ಮಾಡುವುದರಿಂದ ನಮ್ಮ ಉದ್ಯಮದ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮುಂದಿನ ಒಂದು ವರ್ಷದ ಅವಧಿಯವರೆಗೆ ದರ ಹೆಚ್ಚಳವನ್ನು ಮುಂದೂಡಬೇಕು ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ.
ಈ ಬಗ್ಗೆ ಇಂಧನ ಸಚಿವ ಕೆ ಜೆ ಜಾರ್ಜ್ ಅವರಿಗೆ ಮನವಿ ಪತ್ರ ಕಳುಹಿಸಿರುವ ಹೋಟೆಲ್ ಸಂಘ, “ದರ ಏರಿಕೆಯಿಂದ ಎಲ್ಲ ಉದ್ಯಮದ ಮಾಲೀಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ದರ ಏರಿಕೆಯ ಜತೆಗೆ ಇಂಧನ ಮತ್ತು ವೆಚ್ಚ ಹೊಂದಾಣಿಕೆ, ಸ್ಥಿರ ಬೇಡಿಕೆ ಶುಲ್ಕಗಳು ಹೆಚ್ಚಳವಾಗಿವೆ. ಏರಿಕೆಯಾಗಿರುವ ದರದ ಮೇಲೂ ಸಹ 9% ತೆರಿಗೆ ಕೂಡ ಹೆಚ್ಚಳವಾಗಿದೆ. ಇದರಿಂದ ಉದ್ಯಮ ನಡೆಸಲು ತುಂಬಾ ಸಮಸ್ಯೆಯಾಗುತ್ತದೆ” ಎಂದು ಹೇಳಿದೆ.
“ಈಗಿರುವ ವಿದ್ಯುತ್ ದರ ಏರಿಕೆಯನ್ನು 9% ನಿಂದ 3% ವರೆಗೆ ಇಳಿಸಬೇಕು. ಸರಬರಾಜು ಮತ್ತು ವಿತರಣೆಯಲ್ಲಿ ಉಂಟಾಗುವ ನಷ್ಟಗಳನ್ನು ಕಡಿಮೆ ಮಾಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳು ಪಾವತಿಸಬೇಕಾದ ಬಾಕಿ ಮೊತ್ತವನ್ನು ಬಡ್ಡಿಸಹಿತ ಸಂಗ್ರಹಿಸಬೇಕು. ಪ್ರೀಪೇಡ್ ಮೀಟರ್‌ಗಳನ್ನು ಅಳವಡಿಸಿ ಗ್ರಾಹಕರ ಠೇವಣಿ ಹಣವನ್ನು ಹಿಂತಿರುಗಿಸಬೇಕು. ಅನಗತ್ಯ ಆಡಳಿತ ಖರ್ಚು-ವೆಚ್ಚಗಳನ್ನು ಹತೋಟಿಗೆ ತರಬೇಕು” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ₹118 ಕೋಟಿ ಅಕ್ರಮ ಕಾಮಗಾರಿ : 8 ಎಂಜಿನಿಯರ್ ಅಮಾನತು
“ಇವೆಲ್ಲವನ್ನೂ ಪರಿಗಣಿಸಿದಲ್ಲಿ ಉದ್ಯಮಿಗಳಾದ ನಮಗೂ ಇಂಧನ ಇಲಾಖೆಗೂ ಅನುಕೂಲವಾಗಲಿದೆ. ಉದ್ಯಮಿಯಾಗು, ಉದ್ಯೋಗ ಕೊಡು ಎನ್ನುವ ಸರ್ಕಾರದ ಪ್ರಣಾಳಿಕೆಯನ್ನು ಮುಂದುವರೆಸಿಕೊಂಡು ಹೋಗಲು ಸಹಕಾರಿಯಾಗಲಿದೆ” ಎಂದಿದೆ.