- ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣದ ಬಳಿ ಘಟನೆ ನಡೆದಿದೆ
- ಜೊಮ್ಯಾಟೋ ಡೆಲಿವರಿ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪವನ್
ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿದ ವ್ಯಕ್ತಿಯೋರ್ವ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದು, ಬೈಕ್‌ನಲ್ಲಿ ಹೋಗುತ್ತಿದ್ದ ಜೊಮ್ಯಾಟೋ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಜೊಮ್ಯಾಟೋ ಡೆಲಿವರಿ ಬಾಯ್ ಪವನ್ ಮೃತ ದುರ್ದೈವಿ. ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಪವನ್ ಮೂಲತಃ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ನಿವಾಸಿ. ಅವರು ಬೆಂಗಳೂರಿನಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಆರೋಪಿ ಕಾರು ಚಾಲಕ ವಿನಾಯಕ್ ವಿಜಯನಗರದ ನಿವಾಸಿ. ಈತ ರಾಜಾಜಿನಗರದ ಮಹೀಂದ್ರ ಶೋರೂಂನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾನೆ. ವಾರದ ಕೊನೆ ಹಿನ್ನೆಲೆ, ಜೂ.18ರಂದು ರಾತ್ರಿ ಗೆಳೆಯರ ಜೊತೆ ಪಾರ್ಟಿ ಮಾಡಿದ್ದಾನೆ.
ಸ್ನೇಹಿತ ಸಾಗರ ಹಾಗೂ ಮೂವರು ಯುವತಿಯರೊಂದಿಗೆ ಆರೋಪಿ ವಿನಾಯಕ ರಾತ್ರಿ ಪೂರ್ತಿ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದಿದ್ದ ಎನ್ನಲಾಗಿದೆ. ಬಳಿಕ ಗೆಳೆಯ ಸಾಗರ್ ಎಂಬುವವನಿಗೆ ಡ್ರಾಪ್ ನೀಡಲು ಕಾರಿನಲ್ಲಿ ತೆರಳುತ್ತಿದ್ದ. ವಿನಾಯಕ್ ಕುಡಿದ ಮತ್ತಿನಲ್ಲೇ ಕಾರು ಚಲಾಯಿಸುತ್ತಿದ್ದ.
ನಾಯಂಡಹಳ್ಳಿಯಿಂದ ಆರ್.ಆರ್ನಗರದ ಕಡೆಗೆ ಕಾರು ಚಲಾಯಿಸಿದ್ದು, ತಡರಾತ್ರಿ 1:45ರ ಸುಮಾರಿಗೆ ಆರ್.ಆರ್. ನಗರದ ಮೆಟ್ರೋ ನಿಲ್ದಾಣದ ಬಳಿ ಮುಂದೆ ಹೋಗುತ್ತಿದ್ದ ಪವನ್ ಬೈಕ್ಗೆ ಹಿಂದಿನಿಂದ ಕಾರಿನಲ್ಲಿ ಗುದ್ದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಪವನ್ ಅನ್ನು ಕಾರು 100 ಮೀ ಎಳೆದುಕೊಂಡು ಹೋಗಿದೆ. ನಂತರ ಪವನ್ ಅವರನ್ನು ಬಿಟ್ಟು ಕಾರು ಸಮೇತ ಯುವಕ, ಯುವತಿಯರು ಪರಾರಿಯಾಗಲು ಯತ್ನಿಸಿದ್ದಾರೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಸುಮಾರು 1 ಕಿ.ಮೀ.ವರೆಗೂ ಕಾರನ್ನು ಬೆನ್ನಟ್ಟಿ ಚಾಲಕನನ್ನು ಹಿಡಿದು ಥಳಿಸಿದ್ದಾರೆ. ಇದೇ ವೇಳೆ, ಕಾರಿನ ಗ್ಲಾಸ್ ಒಡೆದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೆಲವೇ ಗಂಟೆಗಳಲ್ಲಿ ಸ್ಥಗಿತ
ಕಾರಿನಲ್ಲಿದ್ದ ಯುವಕ, ಯುವತಿಯರು ಪರಾರಿಯಾಗಿದ್ದಾರೆ. ನಂತರ ಸ್ಥಳೀಯರು ಆರೋಪಿ ವಿನಾಯಕ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸ್ ತನಿಖೆ ವೇಳೆ ಚಾಲಕ ವಿನಾಯಕ್ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿರುವುದು ಧೃಢಪಟ್ಟಿದೆ. ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.