- ಕಳೆದ ಒಂದು ವಾರದಲ್ಲಿ 4 ಕೋಟಿಗೂ ಹೆಚ್ಚು ಮಹಿಳೆಯರು ಉಚಿತ ಪ್ರಯಾಣ
- ‘ಶಕ್ತಿ’ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾರ್ವಜನಿಕರು ಸಹಕರಿಸಿ
ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆಯನ್ನು ವ್ಯವಸ್ಥಿತವಾಗಿ ನಡೆಸಲು ವಿಭಾಗಗಳ ವ್ಯಾಪ್ತಿಯಲ್ಲಿ ಜನಸಂದಣಿ ಹೆಚ್ಚಿರುವ 10 ಸ್ಥಳಗಳನ್ನು, ವಿಶೇಷ ಜಾತ್ರೆ, ಹಬ್ಬದ ದಿನಗಳನ್ನು ಗುರುತಿಸಿ, ಪ್ರಯಾಣಿಕರ ಸಂದಣಿ ಅನುಗುಣವಾಗಿ ಘಟಕಗಳಿಂದ ಹೆಚ್ಚುವರಿ ಬಸ್‌ಗಳನ್ನು ತ್ವರಿತವಾಗಿ ನಿಯೋಜನೆ ಮಾಡಬೇಕು; ಟಿಕೆಟ್ ವಿತರಣೆ, ಗುರುತಿಸಿರುವ ಸ್ಥಳಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಸುಗಮ ಸಂಚಾರಕ್ಕೆ ಅನುವಾಗುವ ನಿಟ್ಟಿನಲ್ಲಿ ಎಲ್ಲ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ತಮ್ಮ ಸಿಬ್ಬಂದಿಗೆ ಸೂಚಿಸಿದರು.
‘ಶಕ್ತಿ’ ಯೋಜನೆಗೆ ಸಂಬಂಧಪಟ್ಟಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಅವರು ನಿಗಮದ ಎಲ್ಲ 16 ವಿಭಾಗಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು ಹಾಗೂ 83 ಘಟಕ ವ್ಯವಸ್ಥಾಪಕರೊಂದಿಗೆ ಮಂಗಳವಾರ ವಿಡಿಯೋ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಅವರು, “ಯಾವುದೇ ಕಾರಣಕ್ಕೂ ಬಸ್‌ಗಳ ನಿಯೋಜನೆ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಗೊಂದಲಕ್ಕೆ ಅವಕಾಶ ಕೊಡಬಾರದು. ನಿಗಮದ ಚಾಲನಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ, ಪ್ರೋತ್ಸಾಹಿಸಬೇಕು. ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಅಥವಾ ಉಸ್ತುವಾರಿ ಅಧಿಕಾರಿಗಳು ಪ್ರತಿ ವಾರ ತಪ್ಪದೇ ವಿಭಾಗಗಳಿಗೆ ಭೇಟಿ ನೀಡಿ ಪರಾಮರ್ಶೆ ನಡೆಸಲು ಸೂಚಿಸಿದರು. ಅದೇ ರೀತಿ ವಿದ್ಯಾರ್ಥಿಗಳಿಗೂ ತೊಂದರೆ ಆಗದಂತೆ ಬಸ್‌ಗಳ ಹೆಚ್ಚುವರಿ ಟ್ರಿಪ್‌ಗಳನ್ನು ಕಾರ್ಯಾಚರಣೆ ಮಾಡಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ಸಾರ್ವಜನಿಕರು ಸಹ ನಿಗಮದೊಂದಿಗೆ ಕೈಜೋಡಿಸಿ ‘ಶಕ್ತಿ’ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಹಕರಿಸಬೇಕು” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ
ಶಕ್ತಿ ಯೋಜನೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಗೆ ಜೂನ್ 11 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಾಲನೆ ನೀಡಿದರು. ಮಹಿಳೆಯರು ಸಾರಿಗೆ ಇಲಾಖೆಯ ನಾಲ್ಕು ನಿಗಮದ ಬಸ್‌ಗಳಲ್ಲಿ ಸಂತಸದಿಂದ ಪ್ರಯಾಣಿಸುತ್ತಿದ್ದು, ಈವರೆಗೆ 4 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇನ್ನು ಕಳೆದ ಒಂದು ವಾರದ (ಜೂ.11 ರಿಂದ ಜೂ.19) ರವರೆಗಿನ ಮಹಿಳಾ ಪ್ರಯಾಣಿಕರ ಉಚಿತ ಓಡಾಟದ ಅಂದಾಜು ಟಿಕೆಟ್ ವೆಚ್ಚ ₹100 ಕೋಟಿ ದಾಟಿದೆ ಎಂದು ಸಂಸ್ಥೆ ತಿಳಿಸಿದೆ.