ದೇವನಹಳ್ಳಿ ರೈತ ಹೋರಾಟ | ಇಂದಿನಿಂದ ಅಹೋರಾತ್ರಿ ಧರಣಿ

Date:

Advertisements

“ನಿನ್ನೆ ಸಂಯುಕ್ತ ಹೋರಾಟ ಕರ್ನಾಟಕ ದೇವನಹಳ್ಳಿ ಚಲೋ ಆಯೋಜಿಸಿತ್ತು. ಅದಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಈ ಸರ್ಕಾರದ ನೀತಿಯ ವಿರುದ್ಧ ಕರ್ನಾಟಕದ ಜನ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ಸಭೆಯದು. ಆದರೆ ಸರ್ಕಾರ ಪ್ರತಿನಿಧಿಯನ್ನು ಕಳಿಸುವ ಬದಲು ಪೊಲೀಸ್‌ ಬಲ ಪ್ರಯೋಗಿಸಿ ಮಹಿಳೆಯರು ಎಂಬುದನ್ನೂ ನೋಡದೇ ಬಂಧಿಸಿತ್ತು. ನಾವು ಜೈಲಿಗೆ ಹೋಗಲು ತಯಾರಾಗಿ ಬಂದಿದ್ದೆವು. ನಿನ್ನೆ ರಾತ್ರಿ ಮುಖ್ಯಮಂತ್ರಿಗಳು ಸ್ವತಃ ಮಾತಾಡಿ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಅವರ ಮಾತಿಗೆ ಅವಕಾಶ ಕೊಡೋಣ ಎಂದು ಬಂಧನಕ್ಕೊಳಗಾಗುವ ನಿಲುವಿನಿಂದ ಹಿಂದೆ ಸರಿದಿದ್ದೆವು. ನಾಳೆ (ಜೂ. 27)ಯಿಂದ ಅಹೋರಾತ್ರಿ ಹೋರಾಟ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಲಿದೆ“ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಸಂಯುಕ್ತ ಹೋರಾಟ ಕರ್ನಾಟಕ ಗುರುವಾರ ನಡೆಸಿದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

“ ಹಿಂದಿನ ಬಿಜೆಪಿ ಸರ್ಕಾರ ದೇವನಹಳ್ಳಿ ತಾಲ್ಲೂಕಿನ ಚೆನ್ನರಾಯಪಟ್ಟಣದ ಹದಿಮೂರು ಹಳ್ಳಿಯ 1777 ಎಕರೆ ಜಮೀನನ್ನು ತುಂಡು ಭೂಮಿ ಹೊಂದಿರುವ ರೈತರಿಂದ ವಶಪಡಿಸಿಕೊಂಡು ಕೈಗಾರಿಕಾಭಿವೃದ್ಧಿ ಪ್ರದೇಶವಾಗಿ ಮಾಡಲು ಹೊರಟಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿ ಬಲವಂತದ ಭೂಸ್ವಾಧೀನ ಸರಿಯಲ್ಲ, ನಮ್ಮ ಸರ್ಕಾರ ಬಂದರೆ ಬಲವಂತದ ಭೂಸ್ವಾಧೀನ ರದ್ದುಪಡಿಸುತ್ತೇವೆ ಎಂದಿದ್ದರು. ಪ್ರಾಥಮಿಕ ಅಧಿಸೂಚನೆ ಬಿಜೆಪಿ ಹೊರಡಿಸಿತ್ತು. ಕಾಂಗ್ರೆಸ್‌ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದನ್ನು ಪ್ರತಿಭಟಿಸಿ ಸಂಯುಕ್ತ ಹೋರಾಟ ಕರ್ನಾಟಕ ರಾಜ್ಯ ವ್ಯಾಪಿಯಾಗಿ ಹೋರಾಟ ರೂಪಿಸಿತ್ತು. ನೋಟಿಫಿಕೇಷನ್‌ ಆದ 1777 ಎಕರೆ ಜಮೀನು ಕೈಬಿಡಬೇಕು ಎಂಬ ಒತ್ತಾಯ ಈಡೇರಿಸದೇ ಹೋರಾಟ ಕೈ ಬಿಡಲ್ಲ. ಈ ಹೋರಾಟವನ್ನು ಪ್ರತಿ ಹಳ್ಳಿ ಪ್ರತಿ ಮನೆಗೆ ಕೊಂಡೊಯ್ಯುತ್ತೇವೆ. ಭೂಮಿಯ ತಂಟೆಗೆ ಬಂದ ಯಾವ ಸರ್ಕಾರಕ್ಕೂ ಉಳಿಗಾಲವಿಲ್ಲ ಆ ಶಾಪ ತಟ್ಟುತ್ತದೆ“ ಎಂದರು.

Advertisements

ಡಿಸಿಪಿ ಸುಜಿತ್‌ ಕುಮಾರ್ ರೈತರಲ್ಲಿ ಭಯದ ವಾತಾವರಣ ಸೃಷ್ಟಿಸಿ ಹೋರಾಟಗಾರರನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಹೋರಾಟಗಾರರಾದ ಎಸ್‌ ವರಲಕ್ಷ್ಮಿ ಮಾತನಾಡಿ, “ಚುನಾವಣೆಗಿಂತ ಮುಂಚೆ ಈ ಹೋರಾಟ ನಡೆಯುತ್ತಿದ್ದಾಗ ಮಾನ್ಯ ಸಿದ್ದರಾಮಯ್ಯ ಅವರು ಭೇಟಿ ಕೊಟ್ಟು ಬೆಂಬಲಿಸಿದ್ದರು. ವಿರೋಧ ಪಕ್ಷದ ನಾಯಕರಾಗಿ ಅಧಿವೇಶನಲ್ಲಿ ಪ್ರಶ್ನಿಸಿದ್ದರು. ಅಷ್ಟೇ ಅಲ್ಲ ತಮ್ಮ ಸರ್ಕಾರ ಬಂದ ನಂತರ ರೈತರ ಭೂಮಿಯನ್ನು ವಾಪಸ್‌ ಮಾಡುವುದಾಗಿ ಹೇಳಿದ್ದರು. ಆದರೆ ಸಿದ್ದರಾಮಯ್ಯ ಸರ್ಕಾರ ಬಂದು ಎರಡು ವರ್ಷವಾಗಿದೆ. ಅವರ ವೈಯಕ್ತಿಕ ಕಮಿಟ್‌ಮೆಂಟ್‌ಗೆ ಬದ್ಧರಾಗಬೇಕು. ಅವರ ಜೊತೆ ನಾಲ್ಕೈದು ಬಾರಿ ಚರ್ಚೆಯಾಗಿದೆ. ಎಂ ಬಿ ಪಾಟೀಲ್‌ ಅವರ ಒತ್ತಡವಿದೆ ಎಂದು ಹೇಳಿದ್ದರು. ಮೊನ್ನೆ ಪ್ರೆಸ್‌ಮೀಟ್‌ ಮಾಡಿ ಐನೂರು ಎಕರೆ ಮಾತ್ರ ಬಿಡುತ್ತೇವೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಪ್ರತಿಭಟನೆ ಗಂಭೀರವಾಗಿ ನಡೆಯುತ್ತದೆ ಎಂಬುದು ಗೊತ್ತಿದ್ದರೂ ಪೊಲೀಸರು ಸ್ಟೇಜಿಗೆ ಹತ್ತಿ ಹೋರಾಟಗಾರರನ್ನು ಕೆಳಗೆ ದಬ್ಬಿದ್ದಾರೆ. ಈ ತರಹದ ದಬ್ಬಾಳಿಕೆ ಎಂದೂ ನೋಡಿರಲಿಲ್ಲ. ಡಿಸಿಪಿಯೇ ಮಧ್ಯಪ್ರವೇಶ ಮಾಡಿ ಲಾಟಿಯಲ್ಲಿ ಹೊಡೆದಿದ್ದಾರೆ. ನಾವೇನು ಕೇಳಿದ್ದು, ನೀವು ಕಮಿಟ್‌ ಆಗಿದ್ದೀರಿ, ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೆವು. ನೀವು ಮಾಡಿದ್ದೇನು. ಹಾಗಾಗಿ ಅಹೋರಾತ್ರಿ ಹೋರಾಟ ನಡೆಯಲಿದೆ. ಆ 1777 ಎಕರೆ ವಾಪಸ್‌ ಕೊಡುವ ತೀರ್ಮಾನ ಆಗಬೇಕು“ ಎಂದು ಒತ್ತಾಯಿಸಿದರು.

ದಸಂಸ ಕೋರ್‌ ಕಮಿಟ್‌ ಸದಸ್ಯ- ವಿ ನಾಗರಾಜ್‌ ಮಾತನಾಡಿ, “ಸಾವಿರಾರು ಎಕರೆ ಕಾರ್ಪೊರೇಟ್‌ ಕುಳಗಳಿಗೆ ಕೊಟ್ಟು ರೈತರನ್ನು ದಿವಾಳಿಯಾಗಿಸುತ್ತಿದೆ ಸರ್ಕಾರ. ದುರಹಂಕಾರಿ ಪೊಲೀಸ್‌ ಅಧಿಕಾರಿಯಿಂದ ನಡೆದ ದೌರ್ಜನ್ಯವನ್ನು ಖಂಡಿಸುತ್ತೇವೆ. ಹಸಿವು ಮತ್ತು ಭೂಮಿಯ ಪ್ರಶ್ನೆ ಇದೆ. ಇಷ್ಟು ದಿನಗಳ ಕಾಲ ನಡೆದ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದ್ದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ“ ಎಂದರು.

“ಇಷ್ಟು ಕ್ರೂರವಾಗಿ ಹೋರಾಟಗಾರರನ್ನು ನಡೆಸಿಕೊಳ್ಳಲು ಹೇಗೆ ಸಾಧ್ಯ, ಇದಕ್ಕೆ ಅರ್ಡರ್‌ ಮಾಡಿದವರಾರು, ಡಿಸಿಪಿ ತಾವೇ ಆರ್ಡರ್‌ ಮಾಡಿದ್ರಾ, ಸಿದ್ದರಾಮಯ್ಯ ಅವರು ದೆಹಲಿಯಿಂದ ಆರ್ಡರ್‌ ಮಾಡಿದ್ರಾ, ಸಿದ್ದರಾಮಯ್ಯ ಹಾಗೆ ಮಾಡಿರಲ್ಲ. ಇದರ ಹಿಂದೆ ಎಂ ಬಿ ಪಾಟೀಲರ ಷಡ್ಯಂತ್ರ ಇದೆ. ಎಂ ಬಿ ಪಾಟೀಲ್‌ ಮತ್ತು ದೊಡ್ಡ ಲಾಬಿ ಇದರ ಹಿಂದೆ ಇದೆ. ಮತ್ತೆ ಹುಡುಗಾಟಿಕೆ, ಕಿವಿಗೆ ಹೂ ಇಟ್ಟು ವಂಚಿಸಿದರೆ ಕರ್ನಾಟಕದ ಜನ ಕ್ಷಮಿಸಲ್ಲ. ಹೈ ಕಮಾಂಡ್‌ ಮಧ್ಯಪ್ರವೇಶ ಮಾಡಬೇಕು ಎಂಬುದನ್ನು ಸರ್ಕರದ ಗಮನಕ್ಕೆ ತರಲು ಬಯಸುತ್ತೇವೆ“ ಎಂದು ನೂರ್‌ ಶ್ರೀಧರ್ ಒತ್ತಾಯಿಸಿದರು.

ಇದನ್ನೂ ಓದಿ ಜುಲೈ 4ರ ಸಭೆ ನಿರ್ಣಾಯಕ, ಅಲ್ಲಿಯವರೆಗೆ ಹೋರಾಟ ಮುಂದುವರಿಯಲಿದೆ- ಪ್ರಕಾಶ್‌ ರಾಜ್‌

ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, “ಸರ್ಕಾರ ಜನಪರ ಎಂಬುದು ಭ್ರಮೆ. ಆ ಭ್ರಮೆ ನಿನ್ನೆ ಕಳಚಿದೆ. ಇದನ್ನು ನಾವು ಪುನರಾವಲೋಕ ಮಾಡಬೇಕು. ಎಂ ಬಿ ಪಾಟೀಲರು, ಕಾರ್ಪೊರೇಟ್‌ ಕಾಂಟ್ರಾಕ್ಟ್‌ ಎಂದು ಪೋರ್ಟ್‌ಪೋಲಿಯೋ ಬದಲಿಸಿಕೊಳ್ಳಬೇಕು. ರಿಯಲ್‌ ಎಸ್ಟೇಟ್‌ ಏಜೆಂಟರು ಇವರೆಲ್ಲ. ಪಾಟೀಲರು ವಿದೇಶಕ್ಕೆ ಹೋಗಿ ಕಾರ್ಪೊರೇಟ್‌ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಬಂದಿದ್ದೇನೆ. ಅವರಿಗೆ ಏನು ಹೇಳಲಿ ಎಂದು ನಮ್ಮ ಮುಂದೆಯೇ ಹೇಳಿದ್ದಾರೆ. ಜನಸಂಖ್ಯೆ ಏರುತ್ತಿರುವ ದೇಶದಲ್ಲಿ ಆಹಾರದ ಸಾರ್ವಭೌಮತ್ವ ಕಾಪಾಡಿಕೊಳ್ಳದೇ ಯಾವುದೇ ಇಂಡಸ್ಟ್ರಿಯಿಂದ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಎಷ್ಟು ಭೂಮಿ ಕೆಐಡಿಪಿ ಹೆಸರಿನಲ್ಲಿದೆ, ಎಷ್ಟು ಬಳಕೆಯಾಗಿದೆ, ಎಷ್ಟು ಭೂಮಿ ರೈತರಿಗೆ ಸೇರಬೇಕಿದೆ ಈ ಬಗ್ಗೆ ಸರ್ಕಾರ ಸರಿಯಾದ ಅಧ್ಯಯನ ಮಾಡಿ ಶ್ವೇತಪತ್ರ ಹೊರಡಿಸಬೇಕಿದೆ“ ಎಂದರು.




eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ : ‘ಎಕೆ, ಎಡಿ, ಎಎ’ ಸಮಸ್ಯೆ ಜೀವಂತ ಉಳಿಸಿದ ರಾಜ್ಯ ಸರ್ಕಾರ

'ಸಿ' ಮತ್ತು 'ಡಿ' ಗ್ರೂಪ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಇತರೆ ಅಸ್ಪೃಶ್ಯ...

ಧರ್ಮಸ್ಥಳ ಸುತ್ತ ವ್ಯವಸ್ಥಿತ ಷಡ್ಯಂತ್ರ, ಹಿಂದಿನ ಶಕ್ತಿಗಳನ್ನು ಎಸ್‌ಐಟಿ ಪತ್ತೆ ಮಾಡಲಿ: ಸುನಿಲ್‍ ಕುಮಾರ್

ಧರ್ಮಸ್ಥಳಕ್ಕೆ ಸಂಬಂಧಿಸಿ ಎಸ್‍ಐಟಿ ತನಿಖೆಯಲ್ಲಿ ಬಿಜೆಪಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು...

ನಾನು ದಲಿತರನ್ನು ವಿರೋಧಿಸಿಲ್ಲ, ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ: ಶಾಸಕ ಜಿ.ಟಿ.ದೇವೇಗೌಡ

ಸರ್ಕಾರದ ಪಾಲುಗಾರಿಕೆ ಇರುವ ಸಂಘಗಳಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿ ಹಾಗೂ ಒಬ್ಬ...

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸ್ವಾಗತ, ಬಿಜೆಪಿ ಮುಖಂಡರ ನಡೆಗೆ ಖಂಡನೆ: ಸಿಪಿಐಎಂ

ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್...

Download Eedina App Android / iOS

X