ದೇವನಹಳ್ಳಿ ಚಲೋ ಹೋರಾಟಕ್ಕೆ ತಡೆಯೊಡ್ಡಿ ರೈತಪರ ಹೋರಾಟಗಾರರನ್ನು ಬಂಧಿಸಿದ ಬೆನ್ನಲ್ಲೇ ಗುರುವಾರ ಮಧ್ಯಾಹ್ನ ಒಂದು ಗಂಟೆಗೆ ನಟ ಪ್ರಕಾಶ್ ರಾಜ್ ನೇತೃತ್ವದ ಸಮಾನ ಮನಸ್ಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಮಂಡಿಸಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಜುಲೈ 4ರಂದು ದೇವನಹಳ್ಳಿ ರೈತರೊಂದಿಗೆ ಸಭೆ ನಡೆಸಲು ಒಪ್ಪಿದ್ದಾರೆ ಎಂದು ಸಭೆಯ ನಂತರ ಪ್ರಕಾಶ್ ರಾಜ್ ಅವರು ತಿಳಿಸಿದರು.
“ಜುಲೈ 4ರಂದು ರೈತರೊಂದಿಗೆ ಸಭೆ ನಡೆಸುವ ಭರವಸೆ ಸಿಕ್ಕಿದೆ. ಅಲ್ಲಿಯವರೆಗೆ ರೈತರ ಹೋರಾಟ ಮುಂದುವರಿಯಲಿದೆ. ಸಿ ಎಂ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಜುಲೈ ನಾಲ್ಕರ ನಂತರ ಏನಾಗುತ್ತದೆ ಎಂಬುದರ ಮೇಲೆ ಮುಂದಿನ ಹೋರಾಟ ನಿಂತಿದೆ“ ಎಂದರು.
“ನಿನ್ನೆ ಶಾಂತಿಯುತ ಹೋರಾಟ ನಡೆಸಿದ್ದವು. ಫೈನಲ್ ನೋಟಿಫಿಕೇಷನ್ ಆದ ನಂತರ ಸುಮ್ಮನಿರಲು ಆಗಲ್ಲ. ಸಿದ್ದರಾಮಯ್ಯ ಅವರಿಗೆ ಇದು ಗೊತ್ತಿಲ್ಲದ ವಿಚಾರ ಅಲ್ಲ, ನೋಟಿಫಿಕೇಷನ್ ಆಗಿದೆ ಅದನ್ನು ಡಿ ನೋಟಿಫಿಕೇಷನ್ ಮಾಡಬೇಕು ಎಂದು ಒತ್ತಾಯಿಸಿದೆವು. ಅವರು ಜುಲೈ ನಾಲ್ಕರಂದು ರೈತರೊಂದಿಗೆ ಸಭೆ ನಡೆಸಿ ಹೇಗೆ ಮಾಡಬಹುದು ಎಂಬ ತೀರ್ಮಾನಕ್ಕೆ ಬರುವುದಾಗಿ ತಿಳಿಸಿದ್ದಾರೆ. ನಮಗೆ ಕೇಳಿಸಿಕೊಳ್ಳುವವರು ಬೇಕಾಗಿದೆ. ಕೇಳಿಸಿಕೊಂಡಿದ್ದಾರೆ. ಅವರಿಗೆ ಇಂಡಸ್ಟ್ರಿ ಕಡೆಯಿಂದ ಏನೇನು ಸಮಸ್ಯೆ ಇದೆಯೋ ಗೊತ್ತಿಲ್ಲ. ಆದರೆ ಸರ್ಕಾರ ಜನಪರವಾಗಿರಬೇಕು“ ಪ್ರಕಾಶ್ ರಾಜ್ ಹೇಳಿದರು.
ಕೆಲವು ಹಳ್ಳಿಗಳ ಐನೂರು ಎಕರೆ ಭೂಮಿ ವಶಪಡಿಸಿಕೊಳ್ಳುವುದಿಲ್ಲ ಎಂಬ ಸಚಿವ ಎಂ ಬಿ ಪಾಟೀಲರ ಹೇಳಿಕೆಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು “ರೈತರ ಒಡೆದಾಳುವ ಆಟ ಬೇಡ. ಅವರು ಸರ್ಕಾರದ ಯಾವ ಗ್ಯಾರಂಟಿಯನ್ನೂ ಕೇಳುತ್ತಿಲ್ಲ. ನಮ್ಮ ಭೂಮಿ ಬಿಟ್ಟುಬಿಡಿ ಎಂದು ಕೇಳುತ್ತಿದ್ದಾರೆ. ಸಿ ಎಂ ವಿರೋಧ ಪಕ್ಷದಲ್ಲಿದ್ದಾಗ ಪ್ರತಿಭಟನೆಯ ಸ್ಥಳಕ್ಕೆ ಬಂದಿದ್ದರು. ಅದನ್ನು ಅವರು ಮರೆತಿಲ್ಲ. ಆದರೆ ಈಗ ಫೈನಲ್ ನೋಟಿಫಿಕೇಷನ್ ಆಗಿಬಿಟ್ಟಿದೆ. ಈಗ ಡಿನೋಟಿಫೈ ಮಾಡಿದರೆ ವಿಪಕ್ಷಗಳು ಮುಗಿ ಬೀಳುತ್ತವೆ ಎಂದು ಸಿ ಎಂ ಸಮಜಾಯಿಷಿ ನೀಡಿದ್ದಾರೆ“ ಎಂದು ಅವರು ವಿವರಿಸಿದರು.
ನಿಯೋಗದಲ್ಲಿದ್ದ ಸಾಮಾಜಿಕ ಕಾರ್ಯಕರ್ತ ಸಿರಿಮನೆ ನಾಗರಾಜ್ ಮಾತನಾಡಿ, “ಆಂಧ್ರಪ್ರದೇಶ ಸರ್ಕಾರ ಕೈಗಾರಿಕೆಗಳಿಗೆ ಉಚಿತವಾಗಿ ಭೂಮಿ ಕೊಡುವುದಾಗಿ ಹೇಳಿದೆ. ಹಾಗಾಗಿ ನಮಗೆ ಕೈಗಾರಿಕೆಗಳಿಂದ ಒತ್ತಡ ಹೆಚ್ಚಿದೆ“ ಎಂದು ಸಿಎಂ ಹೇಳಿರುವುದಾಗಿ ತಿಳಿಸಿದರು.
ರೈತ ಮುಖಂಡ ವೀರಸಂಗಯ್ಯ ಮಾತನಾಡಿ, “ಮುಖ್ಯಮಂತ್ರಿಯಿಂದ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ. ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಜುಲೈ ನಾಲ್ಕರ ಸಭೆಯ ತೀರ್ಮಾನ ಏನಾಗುತ್ತೋ ಆಗಲಿ. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ“ ಎಂದರು.
ಭೇಟಿಗೆ ಅರ್ಧ ದಿನ ಕಾದ ನಿಯೋಗ
ಗುರುವಾರ ಬೆಳಿಗ್ಗೆ 12 ಗಂಟೆಗೆ ಸಿಎಂ ಭೇಟಿಗೆ ಪ್ರಗತಿಪರರ ನಿಯೋಗ ಹೋಗುವುದಾಗಿ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಸಿ ಎಂ ಮನೆ ಕಾವೇರಿ ಮುಂದೆ ಬೆಳಿಗ್ಗೆ ಹನ್ನೊಂದುವರೆಯಿಂದಲೇ ಕಾದಿದ್ದರು. ಪ್ರಕಾಶ್ ರಾಜ್ ಮತ್ತಿತರ ಮುಖಂಡರು ಕುಮಾರಕೃಪ ಗೆಸ್ಟ್ ಹೌಸ್‌ನಲ್ಲಿ ಸಿಎಂ ಅನುಮತಿಗೆ ಕಾದಿದ್ದರು. ಒಂದು ಗಂಟೆಯಾದರೂ ಅನುಮತಿ ಸಿಗದಿದ್ದಾಗ ಭೇಟಿಗೆ ಹೊರಟ ತಂಡವನ್ನು ಪೊಲೀಸರು ಕುಮಾರಕೃಪ ಗೇಟಿನ ಮುಂದೆ ತಡೆದು ಸ್ವಲ್ಪ ಗೊಂದಲ ಸೃಷ್ಟಿಯಾಗಿತ್ತು. ನಂತರ ಸಿ ಎಂ ಕಚೇರಿಯಿಂದ ಅನುಮತಿಯ ಫೋನ್ ಕರೆ ಬಂತು.