ದೇವನಹಳ್ಳಿ ರೈತರ ಭೂ ಸ್ವಾಧೀನ ಕುರಿತ ಭೂ ಒತ್ತುವರಿ ಪರಿಶೀಲನೆಯ ಜಂಟಿ ಸಂಸದೀಯ ಸಮಿತಿ ಸಭೆಯಿಂದ ಬಿಜೆಪಿ ಸದಸ್ಯರು ಪಲಾಯನಗೈದ ಘಟನೆ ಮಂಗಳವಾರ ನವದೆಹಲಿಯಲ್ಲಿ ನಡೆದಿದೆ.
ದೇವನಹಳ್ಳಿ ರೈತರ ಭೂ ಸ್ವಾಧೀನ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸಲು ನಟ ಪ್ರಕಾಶ್ ರಾಜ್, ಹೋರಾಟಗಾರ್ತಿ ಮೇಧಾ ಪಾಟ್ಕರ್ ಸೇರಿದಂತೆ ಪ್ರಮುಖರು ದೆಹಲಿಗೆ ತೆರಳಿದ್ದರು. ಇದೇ ವೇಳೆ ಭೂ ಒತ್ತುವರಿ ಪರಿಶೀಲನೆಯ ಜಂಟಿ ಸಂಸದೀಯ ಸಮಿತಿ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ವಿವಿಧ ಪಕ್ಷಗಳ ಸದಸ್ಯರು ಇದ್ದರು. ದೇವನಹಳ್ಳಿ ಹೋರಾಟ ಸಭೆಯ ಪ್ರಮುಖ ಚರ್ಚಾ ವಿಷಯವಾಗಿತ್ತು.
ಆದರೆ, ಸಭೆ ಪ್ರಾರಂಭಗೊಂಡಾಗ ಸಮಿತಿಯ ಬಿಜೆಪಿ ಸದಸ್ಯರು ಪಲಾನಗೈದಿದ್ದಾರೆ. ಸಭೆ ಪ್ರಾರಂಭಗೊಳ್ಳುತ್ತಿದ್ದಂತೆ ಈಗ ಬರುತ್ತೇವೆ ಎಂದು ಎದ್ದು ಹೋದ ಬಿಜೆಪಿ ಸದಸ್ಯರು ವಾಪಸ್ ಬರದೆ ತಪ್ಪಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪತ್ರಿಕಾ ದಿನಾಚರಣೆ: ಅತಿರೇಕ ಅಳಿಯುತ್ತದೆ, ಒಳಿತು ಉಳಿಯುತ್ತದೆ
ಜೆಪಿಸಿ ಸಭೆಯಲ್ಲಿ ದೇವನಹಳ್ಳಿ ಭೂ ಸ್ವಾಧೀನ ವಿಚಾರವಾಗಿ ಸಮಗ್ರ ಚರ್ಚೆ ನಡೆದಿದೆ.
ದೇವನಹಳ್ಳಿ ರೈತರ ಭೂ ಸ್ವಾಧೀನ ವಿರೋಧಿಸಿ ಜೂನ್ 26ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ಭೂಮಿ ಸತ್ಯಾಗ್ರಹ’ ನಡೆಯುತ್ತಿದೆ. ಜುಲೈ 4ರಂದು ರೈತ ಮುಖಂಡರು ಮತ್ತು ಹೋರಾಟಗಾರರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸುವ ಭರವಸೆ ನೀಡಿದ್ದಾರೆ. ಅದೇ ದಿನ ಫ್ರೀಡಂ ಪಾರ್ಕ್‌ನಲ್ಲಿ ‘ಬೃಹತ್ ನಾಡ ಉಳಿಸಿ’ ಸಮಾವೇಶ ನಡೆಯಲಿದೆ.
ಜುಲೈ 4ರ ಸಭೆಯಲ್ಲಿ ಮುಖ್ಯಮಂತ್ರಿ ರೈತಪರ ನಿರ್ಧಾರ ಪ್ರಕಟಿಸಬೇಕು. ಭೂ ಸ್ವಾಧೀನ ಸಂಪೂರ್ಣ ಕೈ ಬಿಡಬೇಕು. ಅದಕ್ಕೂ ಮುನ್ನ ಜುಲೈ2 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಪ್ರಮುಖ ಅಂಜೆಂಡವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೋರಾಟ ನಿರತರು ಆಗ್ರಹಿಸಿದ್ದಾರೆ.