- ಶಕ್ತಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ನಿಗಮದ ಚಾಲನಾ ಸಿಬ್ಬಂದಿ ಪರಿಶ್ರಮ
- ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ ₹73,859 ಅನ್ನು ಪತ್ತೆ ಹಚ್ಚಿದ ತನಿಖಾಧಿಕಾರಿಗಳು
ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷೆಯ ಶಕ್ತಿ ಯೋಜನೆ ಜೂನ್ 11 ರಂದು ಜಾರಿಗೆ ಬಂದಿದ್ದು, ಮಹಿಳೆಯರು ಸಂತಸದಿಂದ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾರೆ. ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಕುರಿತು ಅಪಹಾಸ್ಯ ಮಾಡುವುದು ಹಾಗೂ ಬಸ್ನಲ್ಲಿ ಅವರೊಂದಿಗೆ ಅಗೌರವದಿಂದ ನಡೆದುಕೊಂಡ ಕುರಿತು ದೂರುಗಳು ಬಂದರೆ, ಅಂತಹ ಬಸ್ ನಿರ್ವಾಹಕ ಅಥವಾ ಚಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ತಿಳಿಸಿದೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ನಿಗಮ, “ಶಕ್ತಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ನಿಗಮದ ಚಾಲನಾ ಸಿಬ್ಬಂದಿ ಪರಿಶ್ರಮ ಹೆಚ್ಚಿನ ಮಟ್ಟದಲ್ಲಿದೆ. ಆದರೆ, ಕೆಲವೊಂದು ಅಹಿತಕರ ಘಟನೆಗಳು ಈ ಮಹತ್ವದ ಯೋಜನೆಯ ಬಗ್ಗೆ ಭಿನ್ನಾಭಿಪ್ರಾಯಗಳು ಮೂಡುವಂತೆ ಮಾಡುತ್ತಿದೆ” ಎಂದು ಹೇಳಿದೆ.
“ಚಾಲನಾ ಸಿಬ್ಬಂದಿಗಳು ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ಈ ಬಗ್ಗೆ ಮಹಿಳಾ ಪ್ರಯಾಣಿಕರಿಂದ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಬೇಕು” ಎಂದು ತಿಳಿಸಿದೆ.
“ಮಹಿಳೆಯರು ಇರುವ ಬಸ್ ನಿಲ್ದಾಣ/ಬಸ್ ನಿಲುಗಡೆ ಸ್ಥಳಗಳಲ್ಲಿ ಬಸ್ ನಿಲ್ಲಿಸದೇ ಇರುವುದು ಅಥವಾ ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸುವ ಕುರಿತು ಅಪಹಾಸ್ಯ ಮಾಡುವುದು, ಇನ್ನಿತರೆ ರೀತಿಯಲ್ಲಿ ಮಹಿಳೆಯರೊಂದಿಗೆ ಅಗೌರವದಿಂದ ನಡೆದುಕೊಳ್ಳುತ್ತಿರುವ ಪ್ರಕರಣಗಳ ಘಟನೆಗಳು ಬೆಳಕಿಗೆ ಬಂದಿವೆ. ಈ ರೀತಿ ಘಟನೆಗಳು ಮತ್ತೆ ಮರುಕಳಿಸಬಾರದು. ಒಂದು ವೇಳೆ ಅನುಚಿತವಾಗಿ ಮಹಿಳೆಯರೊಂದಿಗೆ ವರ್ತಿಸುವುದು ಅಪಹಾಸ್ಯ ಮಾಡುತ್ತಿರುವ ಬಗ್ಗೆ ದೂರು ಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದೆ.
“ಮಹಿಳೆಯರಿಗೆ ವಿತರಿಸುವ ಟಿಕೇಟ್ ಮೊತ್ತವನ್ನು ಸಾರಿಗೆ ಆದಾಯವೆಂದು ಪರಿಗಣಿಸಲಾಗುತ್ತಿದೆ. ಈ ಹಿನ್ನೆಲೆ, ನಿಗಮದ ಚಾಲಕ ಮತ್ತು ನಿರ್ವಾಹಕರುಗಳು ನಿಗದಿತ ಎಲ್ಲ ಬಸ್ ನಿಲ್ದಾಣ/ಬಸ್ ನಿಲುಗಡೆ ಸ್ಥಳಗಳಲ್ಲಿ ನಿಲುಗಡೆ ನೀಡಿ, ಪ್ರಯಾಣಿಕರನ್ನು ವಿಶೇಷವಾಗಿ ಮಹಿಳೆಯರು/ವಿದ್ಯಾರ್ಥಿಗಳನ್ನು ಹತ್ತಿಸಿ/ಇಳಿಸಬೇಕು” ಎಂದು ತಿಳಿಸಿದೆ.
“ಚಾಲನಾ ಸಿಬ್ಬಂದಿಗಳು ಶಕ್ತಿ ಯೋಜನೆಯ ಪರಿಣಾಮಕಾರಿ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸುವ ಆಶಯವನ್ನು ನಿಗಮವು ಹೊಂದಿದೆ” ಎಂದಿದೆ.
ಈ ಸುದ್ದಿ ಓದಿದ್ದೀರಾ? ಮೆಟ್ರೋ ಪಿಲ್ಲರ್ ಕುಸಿದು ಸಾವು; ಐದು ತಿಂಗಳ ಬಳಿಕ ಚಾರ್ಜ್ಶೀಟ್ ಸಲ್ಲಿಸಿದ ಪೊಲೀಸರು
ಟಿಕೆಟ್ ಇಲ್ಲದೆ ಪ್ರಯಾಣಿಸಿದ 3636 ಪ್ರಯಾಣಿಕರಿಗೆ ದಂಡ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತನಿಖಾ ತಂಡಗಳಿಂದ 2023ರ ಮೇ ತಿಂಗಳಿನಲ್ಲಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 44,052 ವಾಹನಗಳನ್ನು ತಪಾಸಣೆ ಮಾಡಲಾಗಿದೆ. ಈ ವೇಳೆ, 3266 ಪ್ರಕರಣಗಳನ್ನು ಪತ್ತೆಹಚ್ಚಿ, 3636 ಟಿಕೇಟ್ ರಹಿತ ಪ್ರಯಾಣಿಕರಿಂದ ₹5,89,453 ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಿದೆ.
ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ ₹73,859 ಅನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ತಪ್ಪಿತಸ್ಥರ ವಿರುದ್ಧ ಇಲಾಖಾ ರೀತ್ಯಾ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದೆ.
ಪ್ರಯಾಣಿಕರು ಬಸ್ನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೇಟ್/ ಪಾಸ್ ಪಡೆದು ಪ್ರಯಾಣ ಮಾಡುವಂತೆ, ನಿಗಮವು ಪ್ರಯಾಣಿಕರಲ್ಲಿ ಮನವಿ ಮಾಡಿದೆ.