- ಶೇ. 19ರಷ್ಟು ಹೆಚ್ಚಿನ ಮೊತ್ತ ಬಿಡ್ ಮಾಡಿದ ಗುತ್ತಿಗೆದಾರರ ಸಂಸ್ಥೆ
- ₹143 ಕೋಟಿ ವೆಚ್ಚದ ಯೋಜನೆ ಸಿದ್ಧ ಇದರಿಂದ ಪಾಲಿಕೆಗೆ ₹40 ಕೋಟಿ ಹೊರೆ
ಕಳೆದ ನಾಲ್ಕು ವರ್ಷಗಳಿಂದ ಕುಂಠಿತವಾಗಿರುವ ಈಜಿಪುರ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ₹143 ಕೋಟಿ ವೆಚ್ಚದ ಟೆಂಡರ್ ಆಹ್ವಾನಿಸಿದ್ದು, ಗುತ್ತಿಗೆದಾರ ಸಂಸ್ಥೆಯ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ.
ಕಳೆದ ಮೂರು ಬಾರಿ ಟೆಂಡರ್ ಕರೆದಾಗಲೂ ಯಾವುದೇ ಗುತ್ತಿಗೆದಾರರ ಸಂಸ್ಥೆಯೂ ಟೆಂಡರ್‌ನಲ್ಲಿ ಭಾಗಿಯಾಗಿರಲಿಲ್ಲ. ಇದೀಗ ನಾಲ್ಕನೇ ಬಾರಿ ಟೆಂಡರ್ ಕರೆದಾಗ ಒಂದೇ ಸಂಸ್ಥೆ ಭಾಗವಹಿಸಿದ್ದು, ಶೇ. 19ರಷ್ಟು ಹೆಚ್ಚಿನ ಮೊತ್ತ ಬಿಡ್ ಮಾಡಿದೆ. ಆದರೆ, ಅನುಮೋದಿತದ ಮೊತ್ತ ಬಹಿರಂಗವಾಗಿಲ್ಲ.
ಹೊಸ ಗುತ್ತಿಗೆ ಸಂಸ್ಥೆಯನ್ನು ನೇಮಿಸುವ ಮೊದಲು ಬಿಬಿಎಂಪಿ ರಾಜ್ಯ ಸರ್ಕಾರದ ಅನುಮೋದನೆಯನ್ನು ಪಡೆಯಲಿದೆ. ಈ ಬಗ್ಗೆ ವರದಿ ಸಲ್ಲಿಸಲು ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
“ಶುಕ್ರವಾರ ಒಂದು ಹಂತದ ಪರಿಶೀಲನೆಯನ್ನು ಸಮಿತಿ ನಡೆಸಿದೆ. ಈ ಬಗ್ಗೆ ಹೆಚ್ಚಿನ ವಿವರ ಸಲ್ಲಿಸುವಂತೆ ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚಿಸಲಾಗಿದೆ. ಗುತ್ತಿಗೆದಾರ ಸಂಸ್ಥೆಯ ದಾಖಲಾತಿಗಳು ಹಾಗೂ ಆರ್ಥಿಕ ಸಾಮರ್ಥ್ಯದ ಕುರಿತು ಪರಿಶೀಲನೆ ನಡೆಸಲಾಗುವುದು. ಈ ಗುತ್ತಿಗೆ ಸಂಸ್ಥೆಯನ್ನು ಬಹುತೇಕ ಅಂತಿಮಗೊಳಿಸಲಾಗುವುದು. ಸೋಮವಾರ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಕಳುಹಿಸುತ್ತೇವೆ. ಸರ್ಕಾರ ಅನುಮತಿ ನೀಡಿದರೇ, ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರವು ಈ ಯೋಜನೆಗೆ ಸಂಪೂರ್ಣ ಹಣವನ್ನು ನೀಡುತ್ತಿದೆ ” ಎಂದು ಅಧಿಕಾರಿಯೊಬ್ಬರು ಹೇಳಿದರು.
ಈಜಿಪುರ ಜಂಕ್ಷನ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ವರೆಗೆ ಒಟ್ಟು 2.5 ಕಿ.ಮೀ ಉದ್ದ ಈ ಮೇಲ್ಸೇತುವೆ ನಿರ್ಮಾಣವಾಗಲಿದೆ. 2017ರಲ್ಲಿ ₹204 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. 2021ರ ಸೆಪ್ಟೆಂಬರ್‌ಗೆ ಗುತ್ತಿಗೆ ಸಂಸ್ಥೆಗೆ ಪಾಲಿಕೆ ₹75.11 ಕೋಟಿ ಬಿಲ್ ನೀಡಿದೆ. ಇದೀಗ ಮತ್ತೆ ಮರು ಕಾಮಗಾರಿಗೆ ₹143 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಿರುವುದರಿಂದ ಪಾಲಿಕೆಗೆ ಇದರಿಂದ ₹40 ಕೋಟಿ ಹೊರೆಯಾಗಲಿದೆ.
ಈ ಸುದ್ದಿ ಓದಿದ್ದೀರಾ? ಶಕ್ತಿ ಯೋಜನೆ | ಮೊದಲ ದಿನ: 5 ಲಕ್ಷ ಮಹಿಳೆಯರ ಪ್ರಯಾಣ
ಮೇಲ್ಸೇತುವೆ ಕಾಮಗಾರಿ ಅರ್ಧದಷ್ಟಾಗಿದ್ದು, ಈ ಮೇಲ್ಸೇತುವೆಗೆ 81 ಪಿಲ್ಲರ್‌ಗಳ ಪೈಕಿ 67 ಮಾತ್ರ ನಿರ್ಮಿಸಲಾಗಿದೆ. 15 ತಿಂಗಳಲ್ಲಿ ಮೇಲ್ಸೆತುವೆ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರ ಸಂಸ್ಥೆ ಪೂರ್ಣಗೊಳಿಸಬೇಕಿದೆ.