- ಶೇ. 35ರಷ್ಟು ನಿತ್ಯ ಬಳಕೆಯ ಪದಾರ್ಥಗಳ ದರ ಹೆಚ್ಚಳ
- ಒಂದು ಕೆ.ಜಿ ಕಾಫಿ ಪುಡಿಗೆ ₹80ರಿಂದ ₹100 ಹೆಚ್ಚಳ
ರಾಜ್ಯದಲ್ಲಿ ವಿದ್ಯುತ್ ದರ ಸೇರಿದಂತೆ ಇನ್ನಿತರ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳವಾದ ಕಾರಣ ಆಗಸ್ಟ್ 1 ರಿಂದ ಹೋಟೆಲ್ ತಿಂಡಿ ತಿನಿಸುಗಳ ಬೆಲೆಯಲ್ಲಿ ಶೇ. 10ರಷ್ಟು ಹೆಚ್ಚಳವಾಗಲಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘ ತಿಳಿಸಿದೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ ಸಿ ರಾವ್, “ಹೋಟೆಲ್ ತಿಂಡಿ-ತಿನಿಸುಗಳ ಬೆಲೆಯಲ್ಲಿ ಶೇ. 10 ರಷ್ಟು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಹಾಲಿನ ದರ ಆಗಸ್ಟ್ 1ರಿಂದ ₹3 ಹೆಚ್ಚಳವಾಗಲಿದೆ. ಒಂದು ಕೆ.ಜಿ ಕಾಫಿ ಪುಡಿಗೆ ₹80ರಿಂದ ₹100 ಹೆಚ್ಚಳವಾಗಿದೆ. ನೀರಿನ ಬೆಲೆ ಹೆಚ್ಚಳ ಮಾಡುವ ಪ್ರಸ್ತಾವನೆ ಇದೆ. ಈಗಾಗಲೇ, ಟೊಮೆಟೊ, ಅಕ್ಕಿ ಸೇರಿದಂತೆ ದಿನನಿತ್ಯ ಬಳಕೆಯ ಪದಾರ್ಥಗಳ ದರ ಹೆಚ್ಚಳವಾಗಿದೆ” ಎಂದರು.
“ಶೇ. 35ರಷ್ಟು ನಿತ್ಯ ಬಳಕೆಯ ಪದಾರ್ಥಗಳ ದರ ಹೆಚ್ಚಳವಾಗಿದೆ. ಇದರಿಂದ ಕಡಿಮೆ ದರಗಳಲ್ಲೇ ಹೋಟೆಲ್ ಉದ್ಯಮ ನಡೆಸುವುದು ಕಷ್ಟಕರವಾಗಲಿದೆ. ಮುಂದಿನ ದಿನಗಳಲ್ಲಿ ಉದ್ಯಮದಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಎದುರಾಗಲಿದೆ. ಹಾಗಾಗಿ, ಶೇ. 10 ರಷ್ಟು ತಿಂಡಿ-ತಿನಿಸುಗಳ ದರ ಹೆಚ್ಚಳ ಮಾಡಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 2 ಟನ್ ಟೊಮ್ಯಾಟೊ ಸಮೇತ ಬೊಲೆರೋ ವಾಹನ ಕದ್ದಿದ್ದ ಆರೋಪಿಗಳ ಬಂಧನ
“ಕಾಫಿ ಮತ್ತು ಚಹಾ ಬೆಲೆ ₹2 ರಿಂದ ₹3 ಹೆಚ್ಚಳವಾಗಲಿದೆ. ತಿಂಡಿ–ತಿನಿಸುಗಳ ದರದಲ್ಲಿ ₹5 ಹಾಗೂ ಊಟಕ್ಕೆ ₹10 ಹೆಚ್ಚಳವಾಗಲಿದೆ. ಈಗಾಗಲೇ ಕೆಲ ಹೋಟೆಲ್ಗಳಲ್ಲಿ ದರಗಳನ್ನು ಹೆಚ್ಚಿಸಲಾಗಿದೆ. ಅಧಿಕೃತವಾಗಿ ಆಗಸ್ಟ್ 1ರಂದು ಎಲ್ಲ ತಿಂಡಿ–ತಿನಿಸುಗಳ ದರಗಳಲ್ಲಿ ಹೆಚ್ಚಳವಾಗಲಿದೆ. ಬೆಂಗಳೂರು ಹೋಟೆಲ್ ಉದ್ಯಮ ತಿಂಡಿ-ತಿನಿಸುಗಳ ಶುಚಿ-ರುಚಿಯಲ್ಲಿ ಹೆಸರುವಾಸಿಯಾಗಿದೆ. ಎಂದಿನಂತೆ ಅದನ್ನು ಕಾಪಾಡಿಕೊಂಡು ಬರಲಾಗುವುದು” ಎಂದು ಹೇಳಿದರು.