- 243 ಯೋಜನೆಗಳ ಬಗ್ಗೆ ವಿವರ ನೀಡುವಂತೆ ಪತ್ರ ಬರೆದ ತಾಂತ್ರಿಕ ವಿಚಕ್ಷಣಾ ದಳ
- 243 ಯೋಜನೆ ಬಿಲ್ ಪಾವತಿ ಸ್ಥಗಿತಗೊಳಿಸುವಂತೆ ಎಂಜಿನಿಯರ್‌ಗಳಿಗೆ ಸೂಚನೆ
ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ₹217 ಕೋಟಿ ಮೊತ್ತದ ಯೋಜನೆಗಳ ಬಗ್ಗೆ ಬಿಬಿಎಂಪಿಯ ತಾಂತ್ರಿಕ ವಿಚಕ್ಷಣಾ ದಳ ತನಿಖೆ ನಡೆಸುತ್ತಿದೆ.
ಕಳಪೆ ಗುಣಮಟ್ಟದ ಕಾಮಗಾರಿಗಳ ಹೊರತಾಗಿಯೂ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗುತ್ತಿದೆ ಎಂದು ಶಾಸಕ ಪ್ರಿಯಕೃಷ್ಣ ಅವರು ಬಿಬಿಎಂಪಿಗೆ ದೂರು ನೀಡಿದ್ದರು. ಈ ಹಿನ್ನೆಲೆ, ಬಿಬಿಎಂಪಿಯ ತಾಂತ್ರಿಕ ವಿಚಕ್ಷಣಾ ದಳ ತನಿಖೆ ನಡೆಸುತ್ತಿದ್ದು, ಗೋವಿಂದರಾಜನಗರ ಕ್ಷೇತ್ರದಲ್ಲಿ ಕೈಗೊಂಡಿರುವ 243 ಯೋಜನೆಗಳ ಬಗ್ಗೆ ವಿವರ ನೀಡುವಂತೆ ಬಿಬಿಎಂಪಿ ವಿಭಾಗೀಯ ಕಚೇರಿಗೆ ಪತ್ರ ಬರೆದಿದೆ.
ತನಿಖಾಧಿಕಾರಿಗಳು ಯೋಜನೆಯ ಪ್ರಮಾಣ, ಬಿಲ್‌ಗಳು, ಯೋಜನೆಯ ಅಂದಾಜು ಮತ್ತು ಮಾಪನ ಪುಸ್ತಕದಂತಹ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಂದಲೂ ಮಾಹಿತಿ ಪಡೆದುಕೊಳ್ಳುತ್ತಿದೆ. ಅಲ್ಲದೆ, 243 ಯೋಜನೆಗಳ ಬಿಲ್ ಪಾವತಿಯನ್ನು ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದೆ.
ಈ ಯೋಜನೆಗಳಲ್ಲಿ ಹೆಚ್ಚಿನವು ಚರಂಡಿ ನಿರ್ಮಾಣ, ಫುಟ್‌ಪಾತ್‌ಗಳ ದುರಸ್ತಿ ಮತ್ತು ರಸ್ತೆ ಡಾಂಬರೀಕರಣ ಮಾಡುವ ಕಾಮಗಾರಿಗಳಾಗಿವೆ. ಎಂಸಿ ಲೇಔಟ್‌ನಲ್ಲಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಮೂಲಸೌಕರ್ಯ ಒದಗಿಸುವುದು (₹19.64 ಕೋಟಿ), ಎಲ್ಇಡಿ ಲೈಟ್‌ಗಳ ಅಳವಡಿಕೆ (₹5.84 ಕೋಟಿ), ಕನಕ ಭವನದಲ್ಲಿ ಹೆಚ್ಚುವರಿ ಕಾಮಗಾರಿಗಳು (₹2.9 ಕೋಟಿ), ಈದ್ಗಾ ಮೈದಾನದಲ್ಲಿ ಗೋಡೆ ನಿರ್ಮಾಣ (₹56 ಲಕ್ಷ), ಲಾಯೌಟ್‌ನಲ್ಲಿ ₹8 ಲಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರ (₹56 ಲಕ್ಷ) ನಿರ್ಮಾಣ ಕಾಮಗಾರಿಗಳೂ ಈ ಪಟ್ಟಿಯಲ್ಲಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ | ನಿಯಮ ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ಚಲಿಸಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ವಿರುದ್ಧ ಕ್ರಮ
ನಾಗರಭಾವಿ ಮುಖ್ಯರಸ್ತೆಯಲ್ಲಿ ಶೋಭಾ ಆಸ್ಪತ್ರೆಯಿಂದ ಮೂಡಲಪಾಳ್ಯದವರೆಗಿನ ಫುಟ್‌ಪಾತ್‌ಗಳು ಸಾಮಾನ್ಯವಾಗಿ ಸುಸ್ಥಿತಿಯಲ್ಲಿತ್ತು. ಸಣ್ಣಪುಟ್ಟ ದುರಸ್ತಿಯ ಅಗತ್ಯ ಮಾತ್ರವೇ ಇತ್ತು. ಹಾಗಿದ್ದರೂ, ಬಿಬಿಎಂಪಿಯು ಹೊಸ ಬ್ಲಾಕ್‌ಗಳನ್ನು ಅಳವಡಿಸಿದೆ. ಅಲ್ಲದೇ, ಚೆನ್ನಾಗಿಯೇ ಇದ್ದ ರಸ್ತೆಗೆ ಪುನಃ ಡಾಂಬರೀಕರಣ ಮಾಡಲಾಗಿದೆ ಎಂಬುದು ಸೇರಿದಂತೆ, ಇತ್ತೀಚಿನ ವರ್ಷಗಳಲ್ಲಿ ಬಿಬಿಎಂಪಿ ಕೈಗೊಂಡಿರುವ ಹಲವಾರು ಅನಗತ್ಯ ಯೋಜನೆಗಳ ಬಗ್ಗೆ ಶಾಸಕ ಪ್ರಿಯಕೃಷ್ಣ ಅವರು ಕಳವಳ ವ್ಯಕ್ತಪಡಿಸಿದ್ದರು.
“ಕಾಮಗಾರಿಯನ್ನು ಸಮರ್ಪಕವಾಗಿ ಪೂರ್ಣಗೊಳಿಸದೆ ಬಿಲ್ ಕ್ಲೈಮ್ ಮಾಡಲಾಗಿದೆ. ಈ ಬಗ್ಗೆ ಕ್ಷೇತ್ರದಾದ್ಯಂತ ನನಗೆ ದೂರುಗಳು ಬಂದಿವೆ. ಹೀಗಾಗಿ, ಗುತ್ತಿಗೆದಾರರಿಗೆ ಹಣ ಪಾವತಿಸುವ ಮುನ್ನ ಸಮಗ್ರ ತನಿಖೆ ನಡೆಸುವಂತೆ ಬಿಬಿಎಂಪಿಗೆ ಮನವಿ ಮಾಡಿದ್ದೇನೆ” ಎಂದು ಶಾಸಕ ಪ್ರಿಯಕೃಷ್ಣ ಹೇಳಿದ್ದಾರೆ.