“ಬೆಂಗಳೂರಿನ ಹೃದಯಭಾಗದಲ್ಲಿರುವ ಬಾಲಬ್ರೂಯಿ ಪಾರಂಪರಿಕ ಅತಿಥಿ ಗೃಹವನ್ನು ‘ಕಾನ್ಸ್‌ಟಿಟ್ಯೂಷನಲ್ ಕ್ಲಬ್’ ಆಗಿ ಪರಿವರ್ತಿಸುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ. ರಾಷ್ಟ್ರದ ಮಹಾತ್ಮರು ನೆಲೆಸಿದ್ದ ಐತಿಹಾಸಿಕ ಅತಿಥಿಗೃಹವನ್ನು ಮೋಜು, ಮಸ್ತಿಗೆ ಬಳಕೆ ಮಾಡುವುದು ನಾಚಿಕೆಗೇಡಿನ ಸಂಗತಿ” ಎಂದು ಎಎಪಿ ಸಂವಹನ ವಿಭಾಗದ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಶನಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಆ. 31ನೇ ತಾರೀಖು ನಡೆದ ಸಭೆಯಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಹಾಜರಾಗಿಲ್ಲ. ಅವರಿಗೆ ಐತಿಹಾಸಿಕ ಅತಿಥಿ ಗೃಹವನ್ನು ಮನರಂಜನೆಯ ಕ್ಲಬ್ ಆಗಿ ಪರಿವರ್ತಿಸುವ ಬಗ್ಗೆ ಅಭ್ಯಂತರವಿದೆ ಎಂಬುದು ತಿಳಿದುಬಂದಿದೆ. ಸಭೆಯಲ್ಲಿ ವಿಧಾನಸಭಾಧ್ಯಕ್ಷ ಅಬ್ದುಲ್ ಖಾದರ್, ರಿಜ್ವಾನ್ ಹರ್ಷದ್, ನಯನ ಮೊಟ್ಟಮ್ಮ, ಎನ್.ಎ. ಹ್ಯಾರಿಸ್ ಇನ್ನಿತರರು ಭಾಗವಹಿಸಿದ್ದ ಮಾಹಿತಿ ಇದೆ. ಸಭೆಯಲ್ಲಿದ್ದ ಎಚ್.ಕೆ.ಪಾಟೀಲ್, ಸಭಾಪತಿ ಬಸವರಾಜ ಹೊರಟ್ಟಿ, ಶಿವಲಿಂಗೇಗೌಡ ಸೇರಿದಂತೆ ಹಲವು ಹಿರಿಯ ಸಚಿವರು ಹಾಗೂ ಶಾಸಕರುಗಳಿಗೆ ಕ್ಲಬ್ ಮಾಡುವ ವಿಚಾರವಾಗಿ ಇಷ್ಟವಿಲ್ಲ ಎಂಬುದು ಗೊತ್ತಾಗಿದೆ. ಸಭೆಯಲ್ಲಿ ಒಮ್ಮತದ ಅಭಿಪ್ರಾಯವಿಲ್ಲದಿದ್ದರೂ ಮನರಂಜನೆ ಕ್ಲಬ್ ಮಾಡುವ ದುಸ್ಸಾಹಸವೇಕೆ? ಇದರ ಹಿಂದೆ ಯಾರ ಒತ್ತಡವಿದೆ?” ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನೆ ಮಾಡಿದರು.
“ರಾಷ್ಟ್ರಗೀತೆಯನ್ನು ಬರೆದ ರವೀಂದ್ರನಾಥ ಠಾಗೂರ್, ರಾಷ್ಟ್ರಪಿತ ಮಹಾತ್ಮ ಗಾಂಧಿ, ಮೊದಲ ಪ್ರಧಾನಿ, ಕಾಂಗ್ರೆಸ್‌ನ ಐಕಾನ್ ಜವಾಹರಲಾಲ್ ನೆಹರೂ ಸೇರಿದಂತೆ ಅನೇಕ ಮಹಾತ್ಮರು ಉಳಿದುಕೊಂಡಿದ್ದ ಐತಿಹಾಸಿಕ ಕಟ್ಟಡವಿದು. ಮಾರ್ಕ್ ಕಬ್ಬನ್ ಉಳಿದುಕೊಂಡಿದ್ದ ಅತಿಥಿ ಗೃಹವಿದು. ದೇವರಾಜ ಅರಸು ತುಂಬಾ ವರ್ಷಗಳ ಕಾಲ ಇಲ್ಲಿ ನೆಲೆಸಿದ್ದರು. ಇಂತಹ ಪ್ರಮುಖ ವ್ಯಕ್ತಿಗಳು ಆಗಮಿಸಿ, ನೆಲೆಸಿದ್ದ ಇತಿಹಾಸವಿರುವ ಅತಿಥಿ ಗೃಹವನ್ನು ಮೋಜು, ಮಸ್ತಿಗೆ ಬಳಕೆ ಮಾಡುವುದು ಸರಿಯಲ್ಲ. ಐತಿಹಾಸಿಕ ಪಾರಂಪರಿಕ ಕಟ್ಟಡವನ್ನು ಮನರಂಜನೆಯ ಕ್ಲಬ್ ಆಗಿ ಪರಿವರ್ತಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ತಕ್ಷಣ ಕೈಬಿಡಬೇಕು. ಬಾಲಬ್ರೂಯಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು” ಎಂದು ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಭಾರತ ಎಂದಿಗೂ ಹಿಂದೂ ರಾಷ್ಟ್ರವಾಗಿರಲಿಲ್ಲ: ಭಾಗವತ್ ಟೀಕಿಸಿದ ಸ್ವಾಮಿ ಪ್ರಸಾದ್ ಮೌರ್ಯ
ಕಾಂಗ್ರೆಸ್ಸಿಗರಿಗೆ ಬ್ರಿಜೇಶ್ ಕಾಳಪ್ಪ ಪ್ರಶ್ನೆ
“ಬಿಜೆಪಿಯ ಹಿರಿಯರಾದ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯರಂತಹ ಮೇರು ನಾಯಕರು ಕೆಲವು ದಿನಗಳ ವರೆಗೆ ಈ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದರೆ ಅವರು ಬಾಲಬ್ರೂಯಿಯನ್ನು ದೇವಸ್ಥಾನ ಮಾಡುತ್ತಿರಲಿಲ್ವಾ? ನಿಮ್ಮದೇ ಪಕ್ಷದ ಯುಗಪುರುಷರು ನೆಲೆಸಿದ್ದ ಅತಿಥಿ ಗೃಹವನ್ನು ಮೋಜು-ಮಸ್ತಿಯ ಕೇಂದ್ರವನ್ನಾಗಿಸಲು ನಿಮಗೆ ಹೇಗೆ ಮನಸ್ಸು ಬರುತ್ತದೆ” ಎಂದು ಪ್ರಶ್ನಿಸಿದರು.
“ಸಣ್ಣ ಜಾಗದಲ್ಲಿ ದೊಡ್ಡ ಕ್ಲಬ್ ನಿರ್ಮಿಸಲು ಹೊರಟಿರುವುದು ಅವೈಜ್ಞಾನಿಕವಾಗಿದೆ. ಇದಕ್ಕಾಗಿ ಸಾಕಷ್ಟು ಮರಗಳನ್ನು ಕಡಿಯಬೇಕಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಹಿರಿಯ ಮುಖಂಡ ಡಾ.ವೆಂಕಟೇಶ್, “ಐತಿಹಾಸಿಕ ಸ್ಥಳಗಳನ್ನು ಗೌರವಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಪಾರಂಪರಿಕ ಮನ್ನಣೆಯನ್ನು ನೀಡಬೇಕು. ಮನರಂಜನೆ ಕ್ಲಬ್ ಮಾಡುವ ಮೂಲಕ ಮೋಜು-ಮಸ್ತಿಗೆ ಅವಕಾಶ ನೀಡುವುದು ಸರಿಯಲ್ಲ” ಎಂದರು.