- ಕಡಿಮೆ ಹಣ ನೀಡಿದರೆ ನಿಗಮ, ಮಂಡಳಿಗಳಲ್ಲಿ ಮರ್ಯಾದೆ ಇರಲ್ಲ
- ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಸಚಿವರ ಆಪ್ತ
ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಪಿಎ ಎಂದು ಹೇಳಿಕೊಂಡು ವ್ಯಕ್ತಿಯೊರ್ವ ಕೆಲಸ ಕೊಡಿಸುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸಿದ್ದಾನೆ.
ಸದ್ಯ ಆ ವ್ಯಕ್ತಿಯನ್ನು ಸದಾಶಿವನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ರಘುನಾಥ್ ಬಂಧಿತ ವ್ಯಕ್ತಿ. ಇತನು ಅನೇಕರ ಬಳಿ ತಾನು ಸಚಿವರ ಜತೆಗೆ 10 ವರ್ಷದಿಂದ ಆಪ್ತ ಸಹಾಯಕನಾಗಿದ್ದೇನೆ ಎಂದು ಹೇಳಿಕೊಂಡಿದ್ದನು. ಹಲವು ನಿಗಮ ಹಾಗೂ ಮಂಡಳಿಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕೊಡಿಸುವುದಾಗಿ ಹೇಳಿ ಜನರಲ್ಲಿ ನಂಬಿಕೆ ಹುಟ್ಟಿಸಿ, ಅವರಿಂದ ಹಣವನ್ನು ಪಡೆಯುತ್ತಿದ್ದನು.
ಕೇಳಿದಷ್ಟು ಹಣ ಹಾಕಿದರೇ ಮಾತ್ರ ಹುದ್ದೆ ದೊರೆಯುತ್ತದೆ. ಕೇಳಿದಕ್ಕೂ ಕಡಿಮೆ ಹಣ ನೀಡಿದರೆ ನಿಗಮ, ಮಂಡಳಿಗಳಲ್ಲಿ ಮರ್ಯಾದೆ ಇರಲ್ಲ. ಹಾಗಾಗಿ ಕೇಳಿದಷ್ಟು ಹಣ ಕೊಡಿ ಎಂದು ಜನರಿಗೆ ಹೇಳುತ್ತಿದ್ದನು ಎಂದು ತಿಳಿದುಬಂದಿದೆ.
ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಬೇಕಾದವರೂ ಹಣವನ್ನು 9980823165 ಈ ನಂಬರ್ಗೆ ಗೂಗಲ್ ಪೇ ಮಾಡಿ ಎಂದು ಹೇಳುತ್ತಿದ್ದನು. ಕೆಲವೊಂದು ಬಾರಿ 6361231868 ಮೊಬೈಲ್ ಸಂಖ್ಯೆಯಿಂದ ಕೆಲ ಮುಖಂಡರಿಗೆ ಕರೆ ಕೂಡ ಮಾಡಿದ್ದನು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ತಡರಾತ್ರಿ ಲಕ್ಷ್ಮಣ ಸವದಿ ಭೇಟಿ ಮಾಡಿದ ಡಿಸಿಎಂ; ಕುತೂಹಲ ಕೆರಳಿಸಿದ ಬೆಳವಣಿಗೆ
ಕಾಂಗ್ರೆಸ್ನ ಗೀತಾ ಶಿವರಾಮ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರಿಗೆ ರಘುನಾಥ್ ಎಂಬ ವ್ಯಕ್ತಿ ಸಚಿವರ ಹೆಸರು ಹೇಳಿಕೊಂಡು ಈ ರೀತಿ ಜನರಿಗೆ ಮೋಸ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ನಂತರ ಈ ಬಗ್ಗೆ ಪ್ರಿಯಾಂಕ್ ಖರ್ಗೆಯವರ ಆಪ್ತ ಸಹಾಯಕ ಕೇಶವ್ ಮೂರ್ತಿಯವರಿಗೆ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡರ ಮಾಹಿತಿ ಆಧಾರದ ಮೇಲೆ ಕೇಶವ್ ಮೂರ್ತಿ ಅವರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ವೇಳೆ ಆರೋಪಿ ಅನೇಕರ ಬಳಿ ಸುಳ್ಳು ಆಸೆ ತೋರಿಸಿ ಹಣ ಪಡೆದಿರುವ ಬಗ್ಗೆ ಮಾಹಿತಿ ದೊರಕಿದೆ.