- ಘಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬೀಸಲಿರುವ ಬಿರುಗಾಳಿ
- ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜೋರು ಮಳೆ ಆರಂಭ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಕಪ್ಪು ಮೋಡ ಕವಿದ ವಾತಾವರಣವಿದ್ದು, ನಗರದ ಹಲವೆಡೆ ಜೋರು ಮಳೆ ಶುರುವಾಗಿದೆ. ದಿನವಿಡೀ ಬಿರುಗಾಳಿ ಸಹಿತ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ರಾಜ್ಯದ ಕೆಲವೆಡೆ ಮಿಂಚು ಬಿರುಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಹಾಗೂ ಈ ವೇಳೆ ಗಾಳಿಯ ವೇಗವು ಘಂಟೆಗೆ 30 ರಿಂದ 40 ಕಿ.ಮೀ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಳ್ಳಂಬೆಳಿಗ್ಗೆ ಮೋಡ ಕವಿದ ವಾತಾವರಣ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜೋರು ಮಳೆಯಾಗುತ್ತಿದೆ. ನಗರದಲ್ಲಿ ಬೆಳಿಗ್ಗೆ 7 ಗಂಟೆಗೆ ಕಪ್ಪು ಮೋಡ ಆವರಿಸಿತ್ತು. ಜಿಟಜಿಟಿಯಿಂದ ಮಳೆ ಆರಂಭವಾಯಿತು. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಬೆಳಿಗ್ಗೆ ಆಫೀಸ್‌ಗೆ ಹೊರಡುವವರು, ವಾಹನ ಸವಾರರು, ಶಾಲಾ-ಕಾಲೇಜಿಗೆ ತೆರಳುವವರು ಮಳೆಯಿಂದ ಪರದಾಡುವಂತಾಯಿತು. ಮಳೆ ಬಂದ ಕೆಲವೇ ನಿಮಿಷಗಳಲ್ಲಿ ನಗರದ ರಸ್ತೆಗಳು ನೀರಿನಿಂದ ತುಂಬಿದ್ದವು. ರಸ್ತೆಗುಂಡಿಗಳು ನೀರಿನಿಂದ ತುಂಬಿದ್ದವು.
ಸದಾಶಿವನಗರ, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಗೋವಿಂದರಾಜನಗರ, ಪ್ರಕಾಶನಗರ, ಮೆಜೆಸ್ಟಿಕ್, ಬಸವೇಶ್ವರನಗರ, ನಂದಿನಿಲೇಔಟ್, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ನಗರದ ಹಲವೆಡೆ ಜೋರು ಮಳೆಯಾಗುತ್ತಿದೆ.