- ಬಡವರಿಗೆ ಅತಿ ಕಡಿಮೆ ದರದಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ತಿಂಡಿ ಮತ್ತು ಊಟ
- ವಾರದಲ್ಲಿ ಮೂರು ದಿನ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕೋಳಿ ಮೊಟ್ಟೆ ನೀಡಲು ಚಿಂತನೆ
ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಮಲತಾಯಿ ಧೋರಣೆಗೆ ಒಳಗಾಗಿದ್ದ ಇಂದಿರಾ ಕ್ಯಾಂಟೀನ್ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜೀವ ಬಂದಂತಾಗಿದೆ. ಆಹಾರ ತಜ್ಞರು ಕ್ಯಾಂಟೀನ್‌ಗಳಲ್ಲಿ ಪೌಷ್ಠಿಕಾಂಶ ಆಹಾರ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದು, ಈ ಹಿನ್ನೆಲೆ ಕ್ಯಾಂಟೀನ್‌ಗಳಲ್ಲಿ ಊಟದ ಜತೆಗೆ ಮೊಟ್ಟೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ದುಡಿಯುವ ವರ್ಗ, ಕಾರ್ಮಿಕ ವರ್ಗ, ಬಡವರಿಗೆ ಅತಿ ಕಡಿಮೆ ದರದಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ತಿಂಡಿ ಮತ್ತು ಊಟ ನೀಡಲಾಗುತ್ತದೆ. ಇದು ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದೆ.
ಇಂದಿರಾ ಕ್ಯಾಂಟೀನ್‌ಗೆ ಹೊಸ ರೂಪ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದು, ಬೆಂಗಳೂರಿನ 250 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜತೆಗೆ ಕ್ಯಾಂಟೀನ್‌ನ ಊಟದ ಮೆನು ಬದಲಾವಣೆಯಾಗಲಿದೆ. ಮೆನುವನ್ನು ಬಹುತೇಕ ಮುಖ್ಯಮಂತ್ರಿಗಳೇ ಅಂತಿಮಗೊಳಿಸಲಿದ್ದಾರೆ.
ಜತೆಗೆ ಸಾರ್ವಜನಿಕರು ಕ್ಯಾಂಟೀನ್‌ನಲ್ಲಿ ಚಪಾತಿ, ರಾಗಿ ಮುದ್ದೆ, ಟೀ ಸೇರಿದಂತೆ ಮಾಂಸಾಹಾರವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರು.
ವಾರದಲ್ಲಿ ಮೂರು ದಿನವಾದರೂ ಕೋಳಿ ಮೊಟ್ಟೆಯನ್ನು ನೀಡಬೇಕು ಇದರಿಂದ ಜನರಲ್ಲಿ ಪೌಷ್ಠಿಕಾಂಶ ಕೊರತೆಯನ್ನು ಸ್ವಲ್ಪಮಟ್ಟಿಗೆ ಆದರೂ ನೀಗಿಸಬಹುದು. ಕಡಿಮೆ ಬೆಲೆಯಲ್ಲಿ ಉತ್ತಮ ಆಹಾರ ನೀಡಲು ಕೋಳಿ ಮೊಟ್ಟೆ ಅತ್ಯುತ್ತಮವಾದ ಆಹಾರ ಎಂದು ಆಹಾರ ತಜ್ಞರು ಹಾಗೂ ಬಿಬಿಎಂಪಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಪೌಷ್ಟಿಕತೆ ಹೋಗಲಾಡಿಸಲು ಕಡಿಮೆ ಬೆಲೆಯಲ್ಲಿ ವಾರದಲ್ಲಿ ಮೂರು ದಿನ ಕೋಳಿ ಮೊಟ್ಟೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಾಲಿಕೆ ಸದಸ್ಯರು ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜೂನ್ 30 ರವರೆಗೆ ವಿದ್ಯಾರ್ಥಿ ಬಸ್ ಪಾಸ್ ಅವಧಿ ವಿಸ್ತರಣೆ : ಕೆಎಸ್‌ಆರ್‌ಟಿಸಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಜಧಾನಿಯಲ್ಲಿ ಇದ್ದ 198 ಇಂದಿರಾ ಕ್ಯಾಂಟೀನ್‌ಗಳ ಸಂಖ್ಯೆಯನ್ನು 250ಕ್ಕೆ ಏರಿಸಲು ಮುಂದಾಗಿದೆ. ಇದರಲ್ಲಿ 24 ಮೊಬೈಲ್ ಕ್ಯಾಂಟೀನ್‌ಗಳು ಸೇರಿವೆ. ಉತ್ತಮ ಗುಣಮಟ್ಟದ ಆಹಾರ ಸೇರಿದಂತೆ ಕ್ಯಾಂಟೀನ್ ಹೈಟೆಕ್ ಮಾಡಲು ಹೆಚ್ಚುವರಿಯಾಗಿ ಪಾಲಿಕೆ 15 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.