ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ, ಹವಾಮಾನ ಬದಲಾವಣೆಗಳಿಂದಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಳೆಗಾಲದಲ್ಲಿ ಡೆಂಗ್ಯೂ ಸೇರಿದಂತೆ ನಾನಾ ರೋಗಗಳು ಜನರನ್ನು ಕಾಡುತ್ತಿವೆ. ಹೀಗಾಗಿ, ರೋಗಿಗಳ ಚೇತರಿಕಾ ಮಟ್ಟ ಮತ್ತು ಅಂಕಿಅಂಶಗಳನ್ನು ನಿರ್ವಹಿಸಲು ಕರ್ನಾಟಕ ಆರೋಗ್ಯ ಇಲಾಖೆಯು ರೋಗ ಕಣ್ಗಾವಲು ಡ್ಯಾಶ್‌ಬೋರ್ಡ್ ಮತ್ತು ಮೊಬೈಲ್ ಅಪ್ಲಿಕೇಶನ್ ಪ್ರಿಸ್ಮ್-ಎಚ್ [PRISM-H (Platform For Research, Intigrated Surveillance and Management of Health)]ಅನ್ನು ಅಭಿವೃದ್ಧಿ ಪಡಿಸಿದೆ.
ಭಾರತೀಯ ವಿಜ್ಞಾನ ಸಂಸ್ಥೆಯ ಆರ್ಟ್ ಪಾರ್ಕ್ ಕಚೇರಿಯಲ್ಲಿ ಅಪ್ಲಿಕೇಶನ್ ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅನಾವರಣಗೊಳಿಸಿದ್ದಾರೆ. ಅಪ್ಲಿಕೇಷನ್, ರೋಗ ನಿಯಂತ್ರಣ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ನೀತಿ ನಿರೂಪಕರು ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ. ರೋಗದ ಕಣ್ಗಾವಲು ಡ್ಯಾಶ್‌ಬೋರ್ಡ್ ಕರ್ನಾಟಕದಾದ್ಯಂತ ಜಿಲ್ಲಾ ಮತ್ತು ಉಪ-ಜಿಲ್ಲಾ ಮಟ್ಟದಲ್ಲಿ ರೋಗಿಗಳ ಡೇಟಾವನ್ನು ಒದಗಿಸುತ್ತದೆ. ಇದು ವರ್ಷದಲ್ಲಿ ಎಷ್ಟು ಮಂದಿ ರೋಗಕ್ಕೆ ತುತ್ತಾಗಿದ್ದಾರೆ ಎಂಬುದನ್ನು ವಿಶ್ಲೇಷಿಸಲು ಅನುಕೂಲವಾಗುತ್ತದೆ.
ರೋಗ ಕಣ್ಗಾವಲು ಡ್ಯಾಶ್‌ಬೋರ್ಡ್
ನೀತಿ ನಿರೂಪಕರು ಮತ್ತು ಸಾರ್ವಜನಿಕ ಆರೋಗ್ಯ ನಿರ್ಧಾರ-ನಿರ್ಮಾಪಕರು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮೇಲ್ವಿಚಾರಣೆಗಾಗಿ, ಸಲಹೆಗಳನ್ನು ಪಡೆದುಕೊಳ್ಳಲು ಮತ್ತು ಡೇಟಾಗಳನ್ನು ನಿರ್ವಹಿಸಲು ಡ್ಯಾಶ್‌ಬೋರ್ಡ್ ಸಹಾಯ ಮಾಡುತ್ತದೆ.
ದಿನನಿತ್ಯದ ನಿರ್ವಹಣೆ, ಮೇಲ್ವಿಚಾರಣೆ, ಮಧ್ಯಸ್ಥಿಕೆಗಳು ಮತ್ತು ಸಂಪನ್ಮೂಲಗಳ ಮಾಹಿತಿ ಪಡೆಯಲು ಜಿಲ್ಲಾ ಆರೋಗ್ಯ ಅಧಿಕಾರಿಗಳು, ಕಣ್ಗಾವಲು ಅಧಿಕಾರಿಗಳು ಮತ್ತು ಕಾರ್ಯಕ್ರಮ ಅಧಿಕಾರಿಗಳು ಡ್ಯಾಶ್‌ಬೋರ್ಡ್‌ಅನ್ನು ಬಳಸುತ್ತಾರೆ.
PRISM-H ಮೊಬೈಲ್ ಅಪ್ಲಿಕೇಶನ್
ಸಮೀಕ್ಷೆ (ಜ್ವರ ಸಮೀಕ್ಷೆ, ಲಾರ್ವಾ ಸಮೀಕ್ಷೆ, ಮನೆ-ಮನೆ ಆರೋಗ್ಯ ಸಮೀಕ್ಷೆ ಇತ್ಯಾದಿ) ಸಂಬಂಧಿತ ಚಟುವಟಿಕೆಗಳಿಗಾಗಿ ಆಶಾ ಕಾರ್ಯಕರ್ತೆಯರಿಗೆ ಈ ಅಪ್ಲಿಕೇಶನ್‌ಅನ್ನು ನೀಡಲಾಗುತ್ತದೆ. ಅಪ್ಲಿಕೇಶನ್ ಮೂಲಕ ಸೊಳ್ಳೆ ನಿಯಂತ್ರಣ ಚಟುವಟಿಕೆಗಳು ಸೇರಿದಂತೆ ನಾನಾ ರೀತಿಯ ಸೇವೆಗಳ ಡೇಟಾ ಮತ್ತು ಪರಿಶೀಲನೆಯನ್ನು ಮಾಡಬಹುದಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಣೇಶ ಪ್ರತಿಷ್ಠಾಪನೆಗೆ ಒಂದೇ ಸೂರಿನಡಿ ಸಿಗಲಿದೆ ಅನುಮತಿ: ಬಿಬಿಎಂಪಿ ಆಯುಕ್ತ
ಅಪ್ಲಿಕೇಶನ್ ಅನಾವರಣ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಂದೀಪ್, ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ, ಎನ್.ಹೆಚ್.ಎಂನ ಅಭಿಯಾನ ವೀಕ್ಷಕರಾದ ನವೀನ್ ಭಟ್, ಆರ್ಟ್ ಪಾರ್ಕ್‌ನ ಎಕ್ಸಿಕ್ಯೂಟಿವ್ ನಿರ್ದೇಶಕರಾದ ಭರದ್ವಾಜ್ ಅಮೃತೂರ್, ಆರ್ಟ್ ಪಾರ್ಕ್‌ನ ಸಿಇಒ ರಘು ಧರ್ಮರಾಜು, ಆರ್ಟ್ ಪಾರ್ಕ್ ಆರೋಗ್ಯ ನಿರ್ದೇಶಕರಾದ ಡಾ. ಭಾಸ್ಕರ್ ರಾಜ್ ಕುಮಾರ್, ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ. ಬಾಲಸುಂದರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.