- ಸುಮಾರು 1,100 ಪುಟಗಳ ದೋಷಾರೋಪಣೆ ಪಟ್ಟಿ ಸಲ್ಲಿಸಿದ ಪೊಲೀಸರು
- ಪಿಲ್ಲರ್ ನಿರ್ಮಾಣ ವೇಳೆ ಸುರಕ್ಷತಾ ಕ್ರಮಗಳ ವೈಫಲ್ಯದ ಬಗ್ಗೆ ಉಲ್ಲೇಖ
ರಾಜ್ಯ ರಾಜಧಾನಿ ಬೆಂಗಳೂರಿನ ಹೆಣ್ಣೂರು ಕ್ರಾಸ್ ಬಳಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗೋವಿಂದಪುರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಘಟನೆ ನಡೆದು ಐದು ತಿಂಗಳ ನಂತರ ಪೊಲೀಸರು ಸುಮಾರು 1100 ಪುಟಗಳ ದೋಷಾರೋಪಣೆ ಪಟ್ಟಿಯಲ್ಲಿ ಗುತ್ತಿಗೆ ಕಂಪನಿ ಎಂಜಿನಿಯರ್ ಹಾಗೂ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಎಂಜಿನಿಯರ್ ಸೇರಿ ಒಟ್ಟು 11 ಅಧಿಕಾರಿಗಳ ಮೇಲೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಪೊಲೀಸರು ತಜ್ಞರ ವರದಿಗಳು, ಪೊಲೀಸ್ ತನಿಖೆ ಹಾಗೂ ಎಫ್ಎಸ್ಎಲ್ ವರದಿ ಆಧಾರದ ಮೇಲೆ ತನಿಖೆ ನಡೆಸಿದ್ದಾರೆ. ಜತೆಗೆ ಐಐಟಿ ಮತ್ತು ಎಫ್ಎಸ್ಎಲ್ ನೀಡಿದ ವರದಿಯನ್ನು ಚಾರ್ಜ್ಶೀಟ್ ಜತೆಗೆ ಲಗತ್ತಿಸಿದ್ದಾರೆ. ಅಧಿಕಾರಿಗಳ ಲೋಪ ಹಾಗೂ ಪಿಲ್ಲರ್ ನಿರ್ಮಾಣ ವೇಳೆ ಸುರಕ್ಷತಾ ಕ್ರಮಗಳ ವೈಫಲ್ಯದ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ?
ಇಬ್ಬರು ಮಕ್ಕಳೊಂದಿಗೆ ದಂಪತಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ, ಕಲ್ಯಾಣನಗರದಿಂದ ಹೆಚ್ಆರ್ಬಿಆರ್ ಲೇಔಟ್ಗೆ ಹೋಗುವ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ, ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ದ್ವಿಚಕ್ರ ವಾಹನದ ಮೇಲೆ ಬಿದ್ದಿತ್ತು. ಈ ಘಟನೆಯಲ್ಲಿ ತಾಯಿ-ಮಗ ಸಾವನ್ನಪ್ಪಿದ್ದರು.
ಈ ಸುದ್ದಿ ಓದಿದ್ದೀರಾ? ಶಾಲಾ ಮಕ್ಕಳ ಬ್ಯಾಗ್ ತೂಕ ಕಡಿತ: ಶಿಕ್ಷಣ ಇಲಾಖೆ ಆದೇಶ
ತಾಯಿ ತೇಜಸ್ವಿನಿ (28) ಮತ್ತು ಮಗ ವಿಹಾನ್ (2) ಸಾವನ್ನಪ್ಪಿದ್ದರು. ಮತ್ತೊಂದು ಮಗು ಮತ್ತು ಪತಿ ಲೋಹಿತ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು.ಈ ಘಟನೆಗೆ ಸಂಬಂಧಿಸಿದಂತೆ ಗೋವಿಂದಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.