ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಸಾಯಂಕಾಲ ಜೋರು ಮಳೆ ಸುರಿದಿದೆ. ಮುಂದಿನ ನಾಲ್ಕು ದಿನ ರಾಜ್ಯದ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜಾಜಿನಗರ, ಪ್ರಕಾಶನಗರ, ಗೋವಿಂದರಾಜನಗರ, ವಿಧಾನಸೌಧ, ಶಾಂತಿನಗರ, ಮೆಜೆಸ್ಟಿಕ್, ಮಲ್ಲೇಶ್ವರಂ, ಜಯನಗರ, ಲಾಲ್ಬಾಗ್ ಸೇರಿದಂತೆ ನಗರದ ಹಲವೆಡೆ ಮಳೆಯಾಗುತ್ತಿದೆ. ಲವೆಡೆ ತುಂತುರು ಮಳೆಯಾಗುತ್ತಿದೆ. ಇನ್ನೂ ಮೋಡಕವಿದ ವಾತಾವರಣ ಇದೆ. ತುಮಕೂರಿನಲ್ಲಿ ಧಾರಾಕಾರ ಮಳೆಯಾಗಿದೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಮಳೆ/ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದಲ್ಲಿ ಶನಿವಾರ ಬೆಳಗ್ಗೆಯಿಂದ ಕೆಲವೆಡೆ ಮೋಡ ಕವಿದ ವಾತಾವರಣವಿತ್ತು. ಸಾಯಂಕಾಲದ ವೇಳೆಗೆ ಮಳೆ ಆರಂಭವಾಯಿತು. ಈ ವೇಳೆ, ಕೆಲಸ ಮುಗಿಸಿ ಮನೆಗೆ ತೆರಳುವವರು ಪರದಾಡುವಂತಾಯಿತು. ವಾಹನ ಸಂಚಾರ ದಟ್ಟಣೆ ಉಂಟಾಯಿತು. ವಾಹನ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ಅಂಡರ್‌ಪಾಸ್, ಅಂಗಡಿ ಮುಗ್ಗಟ್ಟುಗಳ ಆಸರೆ ಪಡೆದರು.
ಈ ಸುದ್ದಿ ಓದಿದ್ದೀರಾ? ಹದಿಹರೆಯದ ಒಪ್ಪಿತ ಲೈಂಗಿಕತೆಯನ್ನು ಅಪರಾಧ ಎನ್ನಬೇಕೇ? ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ
ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದ್ದು, ಬಿರುಗಾಳಿಯ ವೇಗವು ಘಂಟೆಗೆ 30-40 ಕಿ.ಮೀ ಇರುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮುಂದಿನ 4 ರಿಂದ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಲಿದೆ. ಉತ್ತರ ಒಳನಾಡು ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.