ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ವಿನೂತನವಾಗಿ ಲೀಚೆಟ್ ಟ್ರೀಟ್ಮೆಂಟ್ ಪ್ಲಾಂಟ್ ಸ್ಥಾಪಿಸಲಾಗಿದ್ದು, ಅದನ್ನು ಶೀಘ್ರ ಕಾರ್ಯಾರಂಭ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ ಮಾತನಾಡಿದ ಅವರು, “ತ್ಯಾಜ್ಯದಿಂದ ಉತ್ಪತ್ತಿಯಾಗುವ ಲೀಚೆಟ್ ಅನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ನಿಟ್ಟನಲ್ಲಿ ವಿನೂತನ ಮಾದರಿಯಲ್ಲಿ ಲೀಚೆಟ್ ಟ್ರೀಟ್ಮೆಂಟ್ ಪ್ಲಾಂಟ್ ಅನ್ನು ಪರಿಶುದ್ಧ್ ವೆಂಚರ್ಸ್ ಸಂಸ್ಥೆಯಿಂದ ಸ್ಥಾಪಿಸಲಾಗಿದೆ. ಸದ್ಯ ಪ್ರಾಯೋಗಿಕವಾಗಿ ಲೀಚೆಟ್ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕ್ಲಿಯರೆನ್ಸ್ ನೀಡಿದ ಬಳಿಕ ಟ್ರೀಟ್ಮೆಂಟ್ ಪ್ಲಾಂಟ್ ಅನ್ನು ಉದ್ಘಾಟಿಸಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗುವುದು” ಎಂದು ತಿಳಿಸಿದರು.
ಲೀಚೆಟ್ ಟ್ರೀಟ್ಮೆಂಟ್ ಪ್ಲಾಂಟ್‌ನಲ್ಲಿ ಪ್ರತಿನಿತ್ಯ 50 ಸಾವಿರ ಲೀಟರ್ ಲೀಚೆಟ್ ಅನ್ನು ಸಂಸ್ಕರಿಸುವ ಸಾಮರ್ಥ್ಯವಿದೆ. ಆದ್ದರಿಂದ ಸುಮಾರು 30 ಸಾವಿರ ಲೀಟರ್ ಶುದ್ಧ ನೀರು ಉತ್ಪತ್ತಿಯಾಗಲಿದೆ. ಲೀಚೆಟ್ ಪ್ಲಾಂಟ್ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದ ನಂತರ ಲೀಚೆಟ್ ಅನ್ನು ಸಂಸ್ಕರಿಸಿ ಅದರಿಂದ ಸಿಗುವ ಶುದ್ಧ ನೀರನ್ನು ರೈತರು ಅಥವಾ ಕಟ್ಟಡ ನಿರ್ಮಾಣ ಮಾಡುವವರಿಗೆ ಉಚಿತವಾಗಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪ್ರತಿನಿತ್ಯ 300 ಟನ್ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವಿದ್ದು, ಸದ್ಯ ಪ್ರತಿನಿತ್ಯ ಸರಾಸರಿ 280 ಟನ್ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ. ಸಂಸ್ಕರಣಾ ಘಟಕದಲ್ಲಿ ದುರಸ್ತಿಯಿರುವ ಯಂತ್ರಗಳನ್ನು ಕೂಡಲೇ ಸರಿಪಡಿಸಬೇಕು. ಜತೆಗೆ ಎಲ್ಲ ಕಡೆ ಎಲ್.ಇ.ಡಿ ದೀಪಗಳನ್ನು ಅಳವಡಿಸಿ ದಿನದ 24 ಗಂಟೆಯೂ ತ್ಯಾಜ್ಯ ಸಂಸ್ಕರಣಾ ಘಟಕ ಕಾರ್ಯನಿರ್ವಹಿಸುವಂತೆ ಮಾಡಿ ಪಾಲಿಕೆಯ ಮಾದರಿ ತ್ಯಾಜ್ಯ ಸಂಸ್ಕರಣಾ ಘಟಕವನ್ನಾಗಿ ಮಾಡಲು ಸೂಚನೆ ನೀಡಲಾಗಿದೆ.
ಸಂಸ್ಕರಣಾ ಘಟಕದಲ್ಲಿರುವ ಖಾಲಿ ಜಾಗವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಈಗಾಗಲೇ ಹಾಳಾಗಿರುವ ಯಂತ್ರೋಪಕರಣಗಳು ಹಾಗೂ ಸ್ಕ್ರ್ಯಾಪ್ ವಾಹನಗಳನ್ನು ಹರಾಜಿಗೆ ಹಾಕಲು ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಫ್ಯಾನ್ಸಿ ನಂಬರ್ ಹರಾಜಿಗೆ ಆಗಸ್ಟ್ 31 ರಂದು ಅರ್ಜಿ ಆಹ್ವಾನಿಸಿದ ಸಾರಿಗೆ ಇಲಾಖೆ
ಸೂಕ್ತ ರೀತಿಯಲ್ಲಿ ಪ್ರಚಾರ ನೀಡಲು ಸೂಚನೆ
ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕವು ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದ ಬಳಿಕ ಸಂಸ್ಕರಣಾ ಘಟಕದ ಬಗ್ಗೆ ಅಲ್ಲಲ್ಲಿ ನಾಮಫಲಕಗಳನ್ನು ಅಳವಡಿಸಬೇಕು. ಸದರಿ ನಾಮಫಲಕಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಸವಿವರವಾದ ಮಾಹಿತಿಯನ್ನು ಅಳವಡಿಸಲು ಸೂಚನೆ ನೀಡಿದರು. ಜತೆಗೆ ತ್ಯಾಜ್ಯ ಸಂಸ್ಕರಣಾ ಘಟಕದ ಬಗ್ಗೆ ನಾಗರಿಕರು ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ವಾರದ ಪ್ರತಿ ಗುರುವಾರ, ಶುಕ್ರವಾರ ಹಾಗೂ ಶನಿವಾರದ ದಿನಗಳಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭೇಟಿ ನೀಡಿ ಮಾಹಿತಿ ಪಡೆಯುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನೆಯ ವೇಳೆ ವಲಯ ಜಂಟಿ ಆಯುಕ್ತ ಡಾ. ಕೆ. ಜಗದೀಶ್ ನಾಯ್ಕ್, ವಲಯ ಮುಖ್ಯ ಆಭಿಯಂತರ ರಾಜೇಶ್, ಸಂಸ್ಕರಣಾ ಘಟಕದ ವ್ಯವಸ್ಥಾಪಕಿ ಅರ್ಪಿತಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.