- ಆರೋಪಿಗಳ ದತ್ತಾಂಶ ಸಂಗ್ರಹಕ್ಕೆ ‘ಬಿಸಿಪಿ ಎನ್‌ಡಿಪಿಎಸ್ ಪೋರ್ಟಲ್’ ಪ್ರಾರಂಭ
- 2022ರ ಜನವರಿಯಿಂದ 2023ರ ಜೂನ್‌ವರೆಗೆ 6,191 ಪ್ರಕರಣ ದಾಖಲು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ನಿಮಿತ್ತ ವಿಶೇಷ ಅಭಿಯಾನ ನಡೆಸಿದ ಪೊಲೀಸರು ಸೋಮವಾರ ₹21 ಕೋಟಿ ಮೌಲ್ಯದ 2,117 ಕೆಜಿ ಡ್ರಗ್ಸ್ ನಾಶಪಡಿಸಿದರು. ಜತೆಗೆ ಕಳೆದ ಒಂದು ವರ್ಷದಲ್ಲಿ ₹117 ಕೋಟಿ ಮೌಲ್ಯದ 6,261 ಕೆಜಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ, “ನಗರದ ನಾನಾ ಕಡೆಗಳಲ್ಲಿ ಡ್ರಗ್ಸ್ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ 2,053 ಕೆ.ಜಿ ಗಾಂಜಾ, 9 ಕೆ.ಜಿ ಹಶೀಷ್, 12 ಕೆ.ಜಿ ಅಫೀಮು, 9 ಕೆ.ಜಿ ಚರಸ್, 568 ಗ್ರಾಂ ಕೊಕೇನ್, 13 ಗ್ರಾಂ ಹೆರಾಯಿನ್, 5 ಕೆ.ಜಿ ಎಂಡಿಎಂಎ ಅನ್ನು ಕೋರ್ಟ್ ಆದೇಶ ಪಡೆದು ನಾಶಪಡಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಅಕ್ರಮ ಮಾದಕ ದ್ರವ್ಯಗಳ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ 2022ರ ಜನವರಿಯಿಂದ 2023ರ ಜೂನ್‌ವರೆಗೆ 6,191 ಪ್ರಕರಣ ದಾಖಲಾಗಿದೆ. ಈ ಸಂಬಂಧ 7,723 ಭಾರತೀಯರು, 159 ವಿದೇಶಿಯರನ್ನು ಬಂಧಿಸಲಾಗಿದೆ. 6,191 ಪ್ರಕರಣಗಳಲ್ಲಿ 5,248 ಮಾದಕವಸ್ತು ಗ್ರಾಹಕರು ಮತ್ತು 943 ಪೆಡ್ಲರ್‌ಗಳನ್ನು ಒಳಗೊಂಡಿವೆ. ಒಟ್ಟು ₹117 ಕೋಟಿ ಮೌಲ್ಯದ 6,261 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.
“ಇತರ ರಾಜ್ಯಗಳು ಮತ್ತು ದೇಶಗಳಿಂದ ನಡೆಸಲ್ಪಡುವ ಮಾದಕವಸ್ತು ಕಳ್ಳಸಾಗಣೆ ಜಾಲಗಳನ್ನು ಭೇದಿಸಿದ್ದೇವೆ. ಕೆಲವು ನೆಟ್‌ವರ್ಕ್‌ಗಳನ್ನು ಯಶಸ್ವಿಯಾಗಿ ಬೇರು ಸಮೇತ ನಿರ್ಮೂಲನೆ ಮಾಡಿದ್ದೇವೆ. ಮಾದಕ ದ್ರವ್ಯ ದಂಧೆ ಜಾಲಕ್ಕೆ ಕಡಿವಾಣ ಹಾಕಿದ್ದೇವೆ” ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಎಸ್ ಡಿ ಶರಣಪ್ಪ ತಿಳಿಸಿದ್ದಾರೆ.
ಕಳೆದ ವರ್ಷ ವಶಪಡಿಸಿಕೊಂಡ ಸುಮಾರು 2,117 ಕೆಜಿ ಅಕ್ರಮ ವಸ್ತುಗಳನ್ನು ನ್ಯಾಯಾಲಯದಿಂದ ಅನುಮತಿ ಪಡೆದು ವೈಜ್ಞಾನಿಕ ವಿಲೇವಾರಿಗಾಗಿ ಔಷಧ ವಿಲೇವಾರಿ ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅಕ್ರಮ ಸಂಬಂಧ ಶಂಕಿಸಿ ಪತ್ನಿಗೆ ಚಾಕುವಿನಿಂದ ಇರಿದ ರೌಡಿ ಪತಿ
ಡ್ರಗ್ಸ್ ಸಾಗಣೆ ಹಾಗೂ ಮಾರಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳ ದತ್ತಾಂಶ ಸಂಗ್ರಹಕ್ಕೆ ‘ಬಿಸಿಪಿ ಎನ್‌ಡಿಪಿಎಸ್ ಪೋರ್ಟಲ್’ ಪ್ರಾರಂಭಿಸಲಾಗಿದೆ. ಇದು ಕ್ರಿಮಿನಲ್ ದಾಖಲೆಗಳ ಬಗ್ಗೆ ಮಾಹಿತಿ ನೀಡಲು ಪೊಲೀಸರಿಗೆ ಸಹಾಯ ಮಾಡುತ್ತದೆ.
ನಗರದಾದ್ಯಂತ ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಿ ಡ್ರಗ್ಸ್ ಮತ್ತು ಎನ್‌ಡಿಪಿಎಸ್ ಕಾಯ್ದೆಯ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಿದರು. https://pledge.cybersapiens.in/ ಗೆ ಭೇಟಿ ನೀಡಿ ಮಾದಕ ದ್ರವ್ಯ ಸೇವನೆಯ ವಿರುದ್ಧ ಪ್ರತಿಜ್ಞೆ ಮಾಡಲು ನಾಗರಿಕರಲ್ಲಿ ಪೊಲೀಸರು ವಿನಂತಿಸಿದ್ದಾರೆ.