- ಕೆಎಸ್‌ಆರ್‌ಟಿಸಿಯ 1,640 ಅಂಗಡಿ ಮತ್ತು ಕಟ್ಟಡಗಳ ಪೈಕಿ 360 ಖಾಲಿ ಇವೆ
- ಅಂಗಡಿ ಮತ್ತು ಕಟ್ಟಡಗಳ ಬಾಡಿಗೆಯು ಸಾರಿಗೆ ನಿಗಮಗಳಿಗೆ ಆದಾಯದ ಪ್ರಮುಖ ಮೂಲ
ರಾಜ್ಯಾದ್ಯಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಾಗೂ ಟ್ರಾಫಿಕ್ ಟ್ರಾನ್ಸಿಟ್ ಮ್ಯಾನೇಜ್‌ಮೆಂಟ್ ಸೆಂಟರ್‌ಗಳ (ಟಿಟಿಎಂಸಿ) ವಾಣಿಜ್ಯ ಸಂಕೀರ್ಣಗಳು ಮತ್ತು ಕಟ್ಟಡಗಳಲ್ಲಿ ಅನೇಕ ಅಂಗಡಿಗಳು ಖಾಲಿ ಇದ್ದು, ಇವುಗಳನ್ನು ಬಾಡಿಗೆಗೆ ನೀಡಲು ನಿಗಮಗಳು ಯೋಜಿಸಿವೆ ಎಂದು ತಿಳಿದುಬಂದಿದೆ.
ಹಣದ ಕೊರತೆಯಿರುವ ಹಿನ್ನೆಲೆ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬಸ್ ನಿಗಮಗಳು ಅಂಗಡಿಗಳು ಮತ್ತು ಕಟ್ಟಡಗಳನ್ನು ಬಾಡಿಗೆಗೆ ನೀಡಲು ಯೋಜನೆ ಪ್ರಾರಂಭಿಸಿವೆ.
ಕೆಎಸ್‌ಆರ್‌ಟಿಸಿಯ 1,640 ಅಂಗಡಿ ಮತ್ತು ಕಟ್ಟಡಗಳ ಪೈಕಿ 360 ಖಾಲಿ ಇವೆ. ಬಿಎಂಟಿಸಿಯ 363 ಕಟ್ಟಡ ಮತ್ತು ಅಂಗಡಿ ಇದ್ದು, ಅವುಗಳಲ್ಲಿ 105 ಖಾಲಿ ಇವೆ. ಕೆಕೆಆರ್‌ಟಿಸಿಯಲ್ಲಿ 988 ಅಂಗಡಿ ಮತ್ತು ಕಟ್ಟಡಗಳಿದ್ದು, ಈ ಪೈಕಿ 222 ಖಾಲಿ ಇವೆ. ಆದರೆ, ಎನ್‌ಡಬ್ಲೂಕೆಎಸ್‌ಆರ್‌ಟಿಸಿ ಅಡಿಯಲ್ಲಿ ಯಾವುದೇ ಅಂಗಡಿಗಳು ಮತ್ತು ಕಟ್ಟಡಗಳು ಖಾಲಿ ಇಲ್ಲ ಎಂದು ರಾಜ್ಯ ಸಾರಿಗೆ ಬಸ್ ನಿಗಮದ ಮೂಲಗಳು ತಿಳಿಸಿವೆ.
ಅಂಗಡಿಗಳು ಮತ್ತು ಕಟ್ಟಡಗಳ ಬಾಡಿಗೆಯು ಸಾರಿಗೆ ನಿಗಮಗಳಿಗೆ ಆದಾಯದ ಪ್ರಮುಖ ಮೂಲವಾಗಿದೆ. ಈ ಜಾಗಗಳನ್ನು ಬಾಡಿಗೆಗೆ ನೀಡಲು ಆನ್‌ಲೈನ್‌ನಲ್ಲಿ ಟೆಂಡರ್ ಆಹ್ವಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ನೇಹಿತನ ಪ್ರೀತಿಗೆ ಹತ್ಯೆಯಾದ ಮಾರ್ವೇಶ್
“2022-23ರಲ್ಲಿ ಅಂಗಡಿ, ಕಟ್ಟಡ ಹಾಗೂ ಕಾರ್ಗೋ ಬಾಡಿಗೆ ನೀಡುವ ಮೂಲಕ ಕೆಎಸ್‌ಆರ್‌ಟಿಸಿ ₹234 ಕೋಟಿ ಗಳಿಸಿದೆ. ಖಾಲಿ ಇರುವ ಅಂಗಡಿ, ಕಟ್ಟಡಗಳನ್ನು ಬಾಡಿಗೆಗೆ ನೀಡಿದರೆ ಆದಾಯ ಹೆಚ್ಚುತ್ತದೆ” ಎಂದು ಮೂಲಗಳು ತಿಳಿಸಿವೆ.