- 70 ವರ್ಷದ ಬೀವಾ ಪಾಲ್ ಕೊಲೆಯಾಗಿರುವ ದುರ್ದೈವಿ
- ಬೆಂಗಳೂರಿನ ವಸತಿ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಹೆತ್ತ ತಾಯಿಯನ್ನು ಸ್ವತಃ ಮಗಳೇ ಕೊಂದು ಸೂಟ್ಕೇಸ್ನಲ್ಲಿ ಮೃತದೇಹವನ್ನು ಪೊಲೀಸ್ ಠಾಣೆಗೆ ತಂದಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
70 ವರ್ಷದ ಬೀವಾ ಪಾಲ್ ಕೊಲೆಯಾಗಿರುವ ದುರ್ದೈವಿ. 39 ವರ್ಷದ ಸೆನಾಲಿ ಸೇನ್ ಕೊಲೆ ಆರೋಪಿ. ನಗರದ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ಸೆನಾಲಿ ಸೇನ್ ಕುಟುಂಬ ಕೊಲ್ಕತ್ತಾ ಮೂಲದವರಾಗಿದ್ದು, ಕಳೆದ 6 ವರ್ಷಗಳಿಂದ ನಗರದ ಬಿಳೆಕಳ್ಳಿಯ ಎನ್ಎಸ್ ಆರ್ ಗ್ರೀನ್ ಅಪಾರ್ಟ್ಮೆಂಟ್ನ 106 ಫ್ಲಾಟ್ನಲ್ಲಿ ವಾಸವಾಗಿದ್ದರು. ಫ್ಲಾಟ್ನಲ್ಲಿ ಸೆನಾಲಿ ಸೇನ್, ಸೆನಾಲಿ ಸೇನ್ ಪತಿ, ಮಗ, ಅತ್ತೆ ಮತ್ತು ಸೆನಾಲಿ ಸೇನ್ ತಾಯಿ ವಾಸವಾಗಿದ್ದರು.
ಸೊನಾಲಿ ಸೇನ್ ಅಮ್ಮ ಮತ್ತು ಅತ್ತೆ ಒಂದೇ ಮನೆಯಲ್ಲಿದ್ದರು. ಇಬ್ಬರು ಕೂಡ ದಿನಾ ಗಲಾಟೆ ಮಾಡುತ್ತಿದ್ದರಂತೆ. ಬೀಗರ ಜಗಳಕ್ಕೆ ಬೇಸತ್ತ ಬೀವಾ ಪಾಲ್ ನಿದ್ರೆ ಮಾತ್ರೆ ನುಂಗಿ ಸಾಯೋದಾಗಿ ಹೇಳಿದ್ದಾರೆ. ಮಗಳು ಸೆನಾಲಿ ಸೋಮವಾರ ಮುಂಜಾನೆ ತಾಯಿಗೆ 20 ನಿದ್ರೆ ಮಾತ್ರೆ ನುಂಗಿಸಿದ್ದಾಳೆ. ಬಳಿಕ ತಾಯಿ ಹೊಟ್ಟೆ ನೋವು ಎಂದು ಒದ್ದಾಡಿದ್ದಾಳೆ. ಈ ವೇಳೆ, ಸೆನಾನಿ ವೇಲ್ನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ.
ಕೊಲೆ ಮಾಡಿದ ಬಳಿಕ ಸೆನಾಲಿ ಟ್ರ್ಯಾಲಿ ಸೂಟ್ ಕೇಸ್ ನಲ್ಲಿ ತಾಯಿ ಶವವಿಟ್ಟು, ತಂದೆಯ ಫೋಟೊ ಇಟ್ಟು ಮೈಕೊ ಲೇಔಟ್ ಪೊಲೀಸ್ ಠಾಣೆಗೆ ಸೋಮವಾರ ಮಧ್ಯಾಹ್ನ 1 ಗಂಟೆಗೆ ಊಬರ್ ಕ್ಯಾಬ್ನಲ್ಲಿ ಬಂದಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೊಲೆ ಆರೋಪಿ ಸೆನಾಲಿ ಸೇನ್ಳನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅರ್ಧ ಗಂಟೆ ಸುರಿದ ಮಳೆಗೆ ಕೆರೆಯಂತಾದ ಬೆಂಗಳೂರಿನ ರಸ್ತೆಗಳು
“ಸೋಮವಾರ ಮಧ್ಯಾಹ್ನ ಸುಮಾರು 1 ಗಂಟೆಯ ಹೊತ್ತಿಗೆ ಶವವಿದ್ದ ಸೂಟ್ಕೇಸ್ ತೆಗೆದುಕೊಂಡು ಠಾಣೆಗೆ ಆರೋಪಿ ಬಂದಿದ್ದಾರೆ. 39 ವರ್ಷದ ಮಹಿಳೆ ಸೆನಾಲಿ ಸೇನ್ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು ಇತರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ವಸತಿ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ” ಎಂದು ಈ ದಿನ.ಕಾಮ್ಗೆ ಮೈಕೋ ಲೇಔಟ್ ಠಾಣೆಯ ಪೊಲೀಸರೊಬ್ಬರು ತಿಳಿಸಿದರು.
ಸೂಟ್ಕೇಸ್ನಲ್ಲಿ ಶವ
2022ರ ನವೆಂಬರ್ನಲ್ಲಿ ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲೂಕಿನ ಹೊನ್ನೇನಹಳ್ಳಿ ಕೆರೆಯಲ್ಲಿ ಸುಮಾರು 30-35 ವರ್ಷ ವಯಸ್ಸಿನ ಮಹಿಳೆಯ ಶವ ಸೂಟ್ಕೇಸ್ನಲ್ಲಿ ಪತ್ತೆಯಾಗಿತ್ತು.
ಡಿಸೆಂಬರ್ 2022ರಲ್ಲಿ ದೆಹಲಿಯಲ್ಲಿ ಯುವತಿಯೊಬ್ಬಳನ್ನು ಕೊಂದು ಅವಳ ಮೃತದೇಹವನ್ನು ಸೂಟ್ಕೇಸ್ನಲ್ಲಿ ತುಂಬಿ ಚರಂಡಿಗೆ ಎಸೆಯಲಾಗಿತ್ತು.
ಇನ್ನು ನವೆಂಬರ್ 2022ರಲ್ಲಿ ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್ಪ್ರೆಸ್ವೇ ಸರ್ವಿಸ್ ರಸ್ತೆಯಲ್ಲಿ ಸೂಟ್ಕೇಸ್ನಲ್ಲಿ ಯುವತಿಯ ಮೃತ ದೇಹ ಪತ್ತೆಯಾಗಿತ್ತು. ಅನ್ಯ ಜಾತಿ ಯುವಕನ ಜೊತೆ ವಿವಾಹವಾಗಿದ್ದ ಮಗಳನ್ನು ತಂದೆ ಗುಂಡಿಕ್ಕಿ ಕೊಂಡಿದ್ದಾನೆ. ಮಗಳ ಶವವನ್ನು ಸೂಟ್ಕೇಸ್ನಲ್ಲಿ ತುಂಬಲು ತಾಯಿ ಸಹಾಯ ಮಾಡಿದ್ದಳು. ಬಳಿಕ ಪೋಷಕರು ಆಕೆಯ ಮೃತದೇಹವನ್ನು ಟ್ರಾಲಿ ಬ್ಯಾಗ್ನಲ್ಲಿ ತುಂಬಿ ಹೆದ್ದಾರಿಯಲ್ಲಿ ಎಸೆದಿದ್ದರು.
ಜನವರಿ 2023ರಲ್ಲಿ ಒಡಿಶಾದ ಗ್ರಾಮವೊಂದರ ಸಮೀಪದ ಅರಣ್ಯದಲ್ಲಿ ಸೂಟ್ಕೇಸ್ ಬಿದ್ದಿತ್ತು. ಇದನ್ನು ಪೊಲೀಸರು ತೆರೆದು ನೋಡಿದಾಗ ಅದರಲ್ಲಿ ವ್ಯಕ್ತಿಯೊಬ್ಬನ ಶವ ಕಂಡಿತ್ತು. ಈ ಘಟನೆ ಖೋರ್ಧಾ ಜಿಲ್ಲೆಯ ನಚುನಿ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಪುರ ಗ್ರಾಮದ ಸಮೀಪ ಇರುವ ಅರಣ್ಯದಲ್ಲಿ ನಡೆದಿತ್ತು.