- ಇತರೆ ರಾಜ್ಯಗಳಿಗೆ ರಫ್ತಾಗುತ್ತಿರುವ ನಮ್ಮ ರಾಜ್ಯದ ಟೊಮೆಟೊ
- ಮಳೆಯ ಕೊರತೆಯಿಂದ ಕಡಿಮೆಯಾದ ಟೊಮೆಟೊ ಬೆಳೆ
ರಾಜ್ಯದಲ್ಲಿ ಈಗಾಗಲೇ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಈ ಬೆಲೆ ಇನ್ನೂ ಎರಡು ತಿಂಗಳು ಮುಂದುವರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ತರಕಾರಿ ಹಣ್ಣುಗಳ ದರ ದುಪ್ಪಟ್ಟಾಗಿದೆ. ಇದರಿಂದ ಗ್ರಾಹಕರು ಕಂಗೆಟ್ಟಿದ್ದು, ಕೆಜಿ ತರಕಾರಿ ತೆಗೆದುಕೊಳ್ಳುತ್ತಿದ್ದವರು ಇದೀಗ ಅರ್ಧಕೆಜಿಗೆ ಬಂದಿಳಿದಿದ್ದಾರೆ. ಇನ್ನೂ ಕೆಲವರು ಅಡಿಗೆ ಸಾಂಬಾರ್‌ಗೆ ಟೊಮೆಟೊ ಬಳಸುವುದನ್ನು ಬಿಟ್ಟು ಹುಣಸೆ ಮತ್ತು ಇನ್ನಿತರ ಪದಾರ್ಥಗಳನ್ನು ಬಳಸುತ್ತಿದ್ದಾರೆ.
ರಾಜ್ಯಕ್ಕೆ ಮುಂಗಾರು ತಡವಾಗಿ ಆಗಮಿಸಿದ್ದು, ಜೂನ್‌ನಲ್ಲಿ ಆರಂಭವಾಗಬೇಕಿದ್ದ ಮಳೆ ಇದೀಗ ಜುಲೈಗೆ ಪ್ರಾರಂಭವಾಗಿದೆ. ಸರಿಯಾದ ಸಮಯಕ್ಕೆ ಮಳೆ ಬರದ ಕಾರಣ ರೈತರು ಬೆಳೆದ ಬೆಳೆ ನಾಶವಾಗಿದೆ. ಇದೇ ವೇಳೆ, ಎಲೆರೋಗ ಕಾಣಿಸಿಕೊಂಡು ಟೊಮೆಟೊ ನಾಶವಾಗಿವೆ.
ಈ ವರ್ಷ ಮಳೆಯ ಕೊರತೆ ಹಿನ್ನೆಲೆ, ಉತ್ತರ ಪ್ರದೇಶ, ಚತ್ತೀಸ್‌ಘಡ್, ದೆಹಲಿಯಲ್ಲಿ ಟೊಮೆಟೊ ಬೆಳೆ ಕಡಿಮೆಯಾಗಿದೆ. ಹಾಗಾಗಿ, ನಮ್ಮ ರಾಜ್ಯದ ಟೊಮೆಟೊಗೆ ಬೇಡಿಕೆ ಇದ್ದು, ಇತರ ರಾಜ್ಯಗಳಿಗೆ ಟೊಮೆಟೊ ರಫ್ತು ಮಾಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಇಂದಿರಾ ಕ್ಯಾಂಟೀನ್ | ಆಹಾರ, ಸ್ವಚ್ಛತೆ ನೋಡಿಕೊಳ್ಳಲು ಬಿಬಿಎಂಪಿ ಅಧಿಕಾರಿ ನೇಮಕ
ಈ ವರ್ಷ ಬೇಡಿಕೆಗೆ ತಕ್ಕಂತೆ ಟೊಮೆಟೊ ಸಿಗದ ಕಾರಣ ಹೆಚ್ಚಿನ ಬೆಲೆ ನಿಗದಿ ಮಾಡಿ ರೈತರು ವ್ಯಾಪಾರ ಮಾಡುತ್ತಿದ್ದಾರೆ. ಪ್ರತಿಬಾರಿ ರಾಜ್ಯಕ್ಕೆ ನಾಸಿಕ್‌ನಿಂದ ಟೊಮೆಟೊ ಸರಬರಾಜು ಆಗುತ್ತಿತ್ತು. ಈ ಬಾರಿ ಅಲ್ಲಿಯೂ ಕೂಡ ಸರಿಯಾಗಿ ಬೆಳೆ ಬಂದಿಲ್ಲ. ಹೀಗಾಗಿ ನಾಸಿಕ್, ತಮಿಳುನಾಡು, ಚೆನೈಗೆ ಕರ್ನಾಟಕದಿಂದ ಟೊಮೆಟೊ ರಫ್ತು ಮಾಡಲಾಗುತ್ತಿದೆ. ಇದರಿಂದ ಬೆಲೆ ಏರಿಕೆಯಾಗಿದೆ.