- ಮುಂದಿನ ನಾಲ್ಕು ದಿನ ಮಳೆ ಮುಂದುವರಿಯುವ ಸಾಧ್ಯತೆ
- ಮಳೆಯಿಂದಾಗಿ ಬೆಂಗಳೂರಿನಲ್ಲಿ ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿಸಿಲಿನ ವಾತಾವರಣ ಇತ್ತು. ಸಂಜೆಯಾಗುತ್ತಿದ್ದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ನಗರದ ಹಲವೆಡೆ ಜೋರು ಮಳೆ ಸುರಿದಿದ್ದು, ಬಹುತೇಕ ಅಂಡರ್‌ಪಾಸ್‌ಗಳು ರಸ್ತೆಗಳು ನೀರಿನಿಂದ ತುಂಬಿದ್ದವು.
ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಜನ ತತ್ತರಿಸಿದ್ದು ಕೆರೆಯಂತಾದ ರಸ್ತೆಗಳಲ್ಲಿ ವಾಹನ ಚಲಾಯಿಸಲು ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾಯಂಕಾಲದ ವೇಳೆ ಮಳೆಯಿಂದ ತಪ್ಪಿಸಿಕೊಳ್ಳಲು ಜನರು ಅಂಗಡಿಗಳ ಬಳಿ ನಿಂತು ಮಳೆಯಿಂದ ರಕ್ಷಣೆ ಪಡೆದರು. ಇನ್ನು ವಾಹನ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ಅಂಡರ್‌ಪಾಸ್‌ಗಳಲ್ಲಿ ಆಸರೆ ಪಡೆದಿದ್ದು ಕಂಡುಬಂದಿತು.
ವಿಲ್ಸನ್ ಗಾರ್ಡಾನ್, ಶಾಂತಿ ನಗರ, ಕೋರಮಂಗಲ, ಲಾಲ್ ಬಾಗ್, ಮಾರತಹಳ್ಳಿ, ಆಡುಗೋಡಿ, ರಾಜಾಜಿನಗರ, ಪ್ರಕಾಶನಗರ, ಮಲ್ಲೇಶ್ವರಂ, ವಿಜಯನಗರ, ಗೋವಿಂದರಾಜನಗರ ಸೇರಿದಂತೆ ನಗರದ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಮಳೆಯಿಂದಾಗಿ ಬೆಂಗಳೂರಿನಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾದವು.
ಅಂಡರ್‌ಪಾಸ್ ಸಂಪೂರ್ಣ ಜಲಾವೃತ
ಕಳೆದ ಕೆಲವು ದಿನಗಳ ಹಿಂದೆ ಕೆ ಆರ್ ಸರ್ಕಲ್ ಅಂಡರ್‌ಪಾಸ್‌ನ ನೀರಿನಲ್ಲಿ ಮುಳುಗಿ ಭಾನುರೇಖಾ ಎಂಬ ಯುವತಿ ಸಾವನ್ನಪ್ಪಿದ್ದಳು. ಈ ಘಟನೆ ನಡೆದ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಲ್ಲಿರುವ ಅಂಡರ್‌ಪಾಸ್‌ಗಳಲ್ಲಿ ಅಪಾಯ ತಡೆಗೆ ಸರ್ವೇ ನಡೆಸಿತ್ತು. ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಇದೀಗ ನಿನ್ನೆ ರಾತ್ರಿ (ಸೋಮವಾರ) ಸುರಿದ ಅರ್ಧ ಗಂಟೆಯ ಮಳೆಗೆ ಕಾಡುಬೀಸನಹಳ್ಳಿ ಅಂಡರ್‌ಪಾಸ್ ಸಂಪೂರ್ಣ ನೀರಿನಿಂದ ತುಂಬಿ ಹೋಗಿತ್ತು. ಈ ವೇಳೆ, ವಾಹನಗಳು ಅಂಡರ್‌ಪಾಸ್‌ಗೆ ತೆರಳದಂತೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಲವಾರು ವಾಹನಗಳು ಅಂಡರ್‌ಪಾಸ್‌ಗೆ ತೆರಳಿ ವಾಪಸ್ ಅಂಡರ್‌ಪಾಸ್‌ನಿಂದ ತಿರುಗಿ ಬರಲು ಹರಸಾಹಸ ಪಡುವಂತಾಯಿತು.
ಮುಂದಿನ ನಾಲ್ಕು ದಿನ ಮಳೆ
ಈಗಾಗಲೇ ಕೇರಳಕ್ಕೆ ಮಾನ್ಸೂನ್ ಮಾರುತಗಳ ಆಗಮನವಾಗಿದ್ದು, ರಾಜ್ಯದಲ್ಲಿ ಕೆಲವೆಡೆ ಜೋರು ಮಳೆಯಾಗುತ್ತಿದೆ. ಇನ್ನೂ ಕೆಲವೆಡೆ ಮಳೆಯ ಆಗಮನಕ್ಕಾಗಿ ಜನರು ಕಾಯುತ್ತಿದ್ದಾರೆ. ರಾಜ್ಯದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಿರುಗಾಳಿ ಎದ್ದಿರುವ ಕಾರಣ ಸಮುದ್ರಕ್ಕೆ ಇಳಿಯದಂತೆ ಕರಾವಳಿ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದ್ದು ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
“ಅರಬ್ಬಿ ಸಮುದ್ರದಲ್ಲಿ ಗಂಟೆಗೆ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಹಿನ್ನೆಲೆ ರಾಜ್ಯದ ಬಹುತೇಕ ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಕೆಲವೆಡೆ ಭಾರೀ ಮಳೆಯಾಗಲಿದೆ” ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ಡಿ ಹೇಳಿದ್ದಾರೆ.