ನಾನು ಅಪಾಯದಲ್ಲಿದ್ದೇನೆ. ನನ್ನ ಮೇಲೆ ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆದಿದೆ. ಅತ್ಯಾಚಾರವಾಗಿದೆ. ಹಾಗಾಗಿ, ಬೆಂಗಳೂರು ನಗರ ಪೊಲೀಸರು ದಯವಿಟ್ಟು ನನ್ನ ಸಹಾಯಕ್ಕೆ ಬನ್ನಿ ಎಂದು ಯುವತಿಯೊಬ್ಬರು ಟ್ವೀಟ್ ಮೂಲಕ ಪೊಲೀಸರ ಸಹಾಯ ಕೇಳಿದ್ದಾರೆ.
ಗುಪ್ತಾ ಭರತ್ ಎಂಬ ಟ್ವಿಟರ್ ಅಕೌಂಟ್ನಿಂದ ಟ್ವೀಟ್ ಮಾಡಲಾಗಿದೆ. “ನಾನು ಲವ್ ಜಿಹಾದ್ಗೆ ಒಳಗಾಗಿದ್ದೇನೆ. ನನ್ನ ಮೇಲೆ ಅತ್ಯಾಚಾರ ನಡೆದಿದೆ. ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆದಿದೆ. ನಾನು ಅಪಾಯದಲ್ಲಿದ್ದೇನೆ. ತುರ್ತಾಗಿ ನನಗೆ ಬೆಂಗಳೂರು ಪೊಲೀಸರ ಸಹಾಯ ಬೇಕಿದೆ. ನನ್ನ ಜೀವ ಅಪಾಯದಲ್ಲಿದೆ” ಎಂದು ಯುವತಿ ಟ್ವೀಟ್ ಮಾಡಿದ್ದಾಳೆ.
ಆಗಸ್ಟ್ 9ರಿಂದ ಯುವತಿ ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಟ್ವಿಟರ್ನಲ್ಲಿ ತನ್ನ ಸಮಸ್ಯೆಯನ್ನು ಹಂಚಿಕ್ಕೊಳ್ಳುತ್ತಿದ್ದು, ಕಾಶ್ಚೀರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೂ ಟ್ಯಾಗ್ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ.
ನಂತರ, ಸೆ. 3ರಂದು ಬಿಜೆಪಿ ಅಲ್ಪಸಂಖ್ಯಾತ ನಾಯಕಿ ನಾಜಿಹಾ ಎಂಬುವವರನ್ನು ಟ್ಯಾಗ್ ಮಾಡಿ ಈ ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲು ಸಹಾಯ ಮಾಡಿ ಎಂದು ಕೇಳಿದ್ದಾರೆ.
ಸೆ. 7ರಂದು ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿ ಸಹಾಯ ಕೇಳಿದ್ದಾರೆ.
”ಫೇಸ್ ಬುಕ್ ಮೂಲಕ ಕಾಶ್ಮೀರ ಯುವಕನ ಪರಿಚಯವಾಗಿದೆ. ನಮ್ಮಿಬ್ಬರ ನಡುವೆ ಹಣಕಾಸಿನ ವ್ಯವಹಾರವೂ ನಡೆದಿತ್ತು. ಕಾಶ್ಮೀರ್ ಯುವಕ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾನೆ. ಸದ್ಯ ನನ್ನನ್ನು ಮದುವೆಯಾಗುವುದಿಲ್ಲ ಎಂದು ನಿರ್ಲಕ್ಷಿಸಿದ್ದಾನೆ” ಎಂದು ಯುವತಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾಳೆ.
”ನಾನು ನೀಡಿದ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಅವನು ನನಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ನನಗೆ ಸಹಾಯ ಮಾಡಿ, ಕಾಶ್ಮೀರ ಪೊಲೀಸರಿಂದ ನನಗೆ ಯಾವುದೇ ಸಹಾಯ ಸಿಗುತ್ತಿಲ್ಲ” ಎಂದು ಹೇಳಿದ್ದಾಳೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ನಗರ ಪೊಲೀಸರು, “ದಯವಿಟ್ಟು ನಿಮ್ಮ ವಾಸಸ್ಥಳದ ವಿಳಾಸದ ವಿವರ ಹಂಚಿಕೊಳ್ಳಿ, ಇದರಿಂದ ನಾವು ನಿಮ್ಮ ಮನವಿಯನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕಾಗಿ ರವಾನಿಸುತ್ತೇವೆ” ಎಂದು ಟ್ವೀಟ್ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನ ಹತ್ಯೆ
ಇದಕ್ಕೆ ಯುವತಿ, “ನಾನು ವಾಸಿಸುವ ಸ್ಥಳದಿಂದ ಎರಡು ಕಿ.ಮೀ ದೂರದಲ್ಲಿ ಬೆಳ್ಳಂದೂರು ಪೊಲೀಸ್ ಠಾಣೆಯಿದೆ. ಬೆಳಗ್ಗೆ ಠಾಣೆಗೆ ತೆರಳಿ ದೂರು ನೀಡುತ್ತೇನೆ” ಎಂದು ಹೇಳಿದ್ದಾಳೆ.
ಮುಂದುವರೆದು, “ಧನ್ಯವಾದಗಳು, ನಾನು ಪೊಲೀಸ್ ಇನ್ಸ್ಪೆಕ್ಟರ್ನೊಂದಿಗೆ ಸಂಪರ್ಕ ಹೊಂದಿದ್ದೇನೆ. ಅವರು ನನ್ನ ಎಫ್ಐಆರ್ ಅನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳುತ್ತಿದ್ದಾರೆ. ನನ್ನ ಕುಟುಂಬ ಮತ್ತು ನನ್ನ ಸುರಕ್ಷತೆಯ ಬಗ್ಗೆ ನನಗೆ ಭರವಸೆ ಇದೆ” ಎಂದು ತಿಳಿಸಿದ್ದಾರೆ.
ಸದ್ಯ ಸಂತ್ರಸ್ತ ಯುವತಿಯು ಬೆಳ್ಳಂದೂರು ಠಾಣಾ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.