ರಾಜ್ಯ ಸರ್ಕಾರ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಬಾಕಿ ದಂಡ ಪಾವತಿಗೆ ಮತ್ತೆ ಶೇ. 50ರಷ್ಟು ರಿಯಾಯಿತಿ ಘೋಷಣೆ ಮಾಡಿದೆ. ಎರಡು ದಿನದಲ್ಲಿ 15,980 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಒಟ್ಟು ₹50.71 ಲಕ್ಷ ದಂಡ ಸಂಗ್ರಹವಾಗಿದೆ.
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಮೇಲೆ ಶೇ.50 ರಷ್ಟು ರಿಯಾಯಿತಿ ಘೋಷಿಸಿದ್ದರಿಂದ ಗುರುವಾರ ಹಾಗೂ ಶುಕ್ರವಾರ ರಿಯಾಯಿತಿ ಸೌಲಭ್ಯ ಪಡೆಯಲು ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ವಾಹನ ಸವಾರರು ದಂಡ ಪಾವತಿ ಮಾಡುತ್ತಿದ್ದಾರೆ.
“ಶೇ. 50ರಷ್ಟು ರಿಯಾಯಿತಿ ಘೋಷಣೆ ಮಾಡಿದ ಮೊದಲ ದಿನ ಗುರುವಾರ ₹28.35 ಲಕ್ಷ ಹಾಗೂ ಎರಡನೇ ದಿನ ಶುಕ್ರವಾರ ₹22.36 ಲಕ್ಷ ಸಂಗ್ರಹವಾಗಿದೆ. ಸಂಚಾರ ನಿರ್ವಹಣೆ ಕೇಂದ್ರ(ಟಿಎಂಸಿ), ಸಂಚಾರ ಪೊಲೀಸ್ ಠಾಣೆಗಳು, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳು ಹಾಗೂ ಆನ್‌ಲೈನ್ ಮೂಲಕ ಜನರು ದಂಡ ಕಟ್ಟುತ್ತಿದ್ದಾರೆ” ಎಂದು ಪೊಲೀಸರು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಲು ಆರಂಭಿಸಿದ ಬಿಎಂಟಿಸಿ
ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ 2023ರ ಫೆಬ್ರವರಿ 11ರ ಒಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ, ಸೆಪ್ಟೆಂಬರ್ 9ರೊಳಗಾಗಿ ದಂಡ ಪಾವತಿಸಲು ಗಡುವು ನೀಡಲಾಗಿದೆ.
ಈ ಹಿಂದೆಯೂ 2 ಬಾರಿ ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಸರ್ಕಾರ ಅವಕಾಶ ನೀಡಿತ್ತು. ನಂತರ ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆ, ರಿಯಾಯಿತಿ ದರದ ದಂಡ ಪಾವತಿ ಅವಕಾಶ ಸ್ಥಗಿತಗೊಂಡಿತ್ತು.