ಸ್ಫೂರ್ತಿಧಾಮದಲ್ಲಿ ಅಂಬೇಡ್ಕರ್‌ ಹಬ್ಬ; ಬೋಧಿವೃಕ್ಷ, ಬೋಧಿವರ್ಧನ ಪ್ರಶಸ್ತಿ ಪ್ರದಾನ

Date:

Advertisements

ಕಳೆದ ಹದಿನಾರು ವರ್ಷಗಳಿಂದ ಅಂಬೇಡ್ಕರ್ ಜಯಂತಿಯನ್ನು ‘ಅಂಬೇಡ್ಕರ್ ಹಬ್ಬ’ ವಾಗಿ ಆಚರಿಸಿಕೊಂಡು ಬರುತ್ತಿರುವ ಸ್ಫೂರ್ತಿಧಾಮ ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರನ್ನು ಗುರುತಿಸುವ, ಗೌರವಿಸುವ ಸಲುವಾಗಿ ‘ಬೋಧಿವೃಕ್ಷ’ ಮತ್ತು ‘ಬೋಧಿವರ್ಧನ’ ಹೆಸರಿನ ರಾಷ್ಟ್ರ ಪ್ರಶಸ್ತಿಗಳನ್ನು ನೀಡುತ್ತಿದೆ. ಈ ವರ್ಷದ ಪ್ರಶಸ್ತಿಯನ್ನು ಘೋಷಿಸಿದೆ. ಏ. 14ರಂದು ನಡೆಯುವ ಅಂಬೇಡ್ಕರ್‌ ಹಬ್ಬದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಬೋಧಿವೃಕ್ಷ ಪ್ರಶಸ್ತಿ ಪುರಸ್ಕೃತರು

ಪ್ರೊ. ವೆಲೆರಿಯನ್ ರಾಡ್ರಿಗಸ್‌ : ಪ್ರೊ ವೆಲೆರಿಯನ್ ರಾಡ್ರಿಗಸ್‌ ಅವರು ನಮ್ಮ ಕಾಲದ ಅದ್ವಿತೀಯ ವಿದ್ವಾಂಸರು ಮತ್ತು ರಾಜಕೀಯ ವಿಜ್ಞಾನಿಯಾಗಿದ್ದಾರೆ. ಡಾ ಬಿ ಆರ್ ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಅವರು ಭಾರತದ ಸಂವಿಧಾನದ ಮೌಲ್ಯಗಳನ್ನು ಭಾರತೀಯ ಸಮಾಜದಲ್ಲಿ ಸ್ಥಾಪಿಸಲಿಕ್ಕಾಗಿ ಒಂದು ಧರ್ಮಯುದ್ದವೇ ನಡೆಯಬೇಕಾದೀತು ಎಂದು ಎಚ್ಚರಿಸುತ್ತಾರೆ. ಜರ್ಮನಿ ಮತ್ತು ಕೆನಡಾದ ಹಲವು ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಸಂದರ್ಭದಲ್ಲಿ ರಾಡ್ರಿಗಸ್‌ ಅವರು ಅಂಬೇಡ್ಕರ್ ಚಿಂತನೆಗಳ ಅಂತಃಸತ್ವ ಮತ್ತು ಮೌಲ್ಯಗಳನ್ನು ಅಲ್ಲಿ ಪ್ರಸಾರ ಮಾಡುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಅವರು ಕರಾವಳಿ ಕರ್ನಾಟಕದ ಭೂರಹಿತ ತಳ ಸಮುದಾಯಗಳ ರೈತರಿಗೆ ಭೂಮಿಯನ್ನು ಕೊಡಿಸುವುದಕ್ಕಾಗಿ ಹೋರಾಟಗಳಲ್ಲೂ ಭಾಗವಹಿಸಿರುತ್ತಾರೆ. ಅವರ ಕೃತಿಗಳು, ಅಂಕಣಗಳು ಮತ್ತು ಭಾಷಣಗಳು ಭಾರತದಲ್ಲಿ ನ್ಯಾಯ, ಸಮಾನತೆ ಮತ್ತು ಜಾತ್ಯತೀತ ಮೌಲ್ಯಗಳನ್ನು ಸ್ಥಾಪಿಸುವಲ್ಲಿ ಘನವಾದ ಪಾತ್ರವಹಿಸಿವೆ.

Advertisements
Radrigus

ಬೋಧಿವರ್ಧನ ಪ್ರಶಸ್ತಿ ಪುರಸ್ಕೃತರು

ಬೆಟ್ಟಯ್ಯ ಕೋಟೆ : ಹೆಗ್ಗಡೆದೇವನಕೋಟೆಯ ತಂಬಡಯ್ಯ ಮತ್ತು ಲಕ್ಷ್ಮಮ್ಮ ದಂಪತಿಯ ಮಗನಾಗಿ ಜನಿಸಿದ ಬೆಟ್ಟಯ್ಯ ಕೋಟೆ ಅವರು ಬಿಎ ಪದವಿ ನಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 1974ರಲ್ಲಿ ದಲಿತ ಸೇವಕ ಸಂಘ ಮತ್ತು 1981ರಲ್ಲಿ ದಲಿತ ಸಂಘರ್ಷ ಸಮಿತಿಗೆ ಸೇರಿ ಹೆಗ್ಗಡದೇವನಕೋಟೆ ತಾಲ್ಲೂಕು ಸಂಚಾಲಕರಾಗಿ ಆಯ್ಕೆಯಾದರು. ಅಲ್ಲಿಂದ ಅವರು ಅನೇಕ ದಲಿತರ ಪರ ಭೂಹೋರಾಟಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಹುಣಸೆಕುಪ್ಪೆ, ನಂಜಯ್ಯನ ಕಾಲೋನಿ, ಪಡುಕೋಟೆ, ದೇವಲಾಪುರ, ಹುಣಸೂರು ಬಿ.ಆರ್ ಕಾವಲ್, ಪಿರಿಯಾಪಟ್ಟಣ ಗುಡ್ಡೆನಹಳ್ಳಿ ಭೂ ಹೋರಾಟಗಳು, ಸುರಗುರು ಮತ್ತು ಬದನವಾಳು ದಲಿತರ ಹತ್ಯಾಕಾಂಡ, ಚಾಮಲಾಪುರ ಉಷ್ಣ ಸ್ಥಾವರ, ಮೈಸೂರು ತಾಲ್ಲೂಕು ಬೆಲವತ್ತ ನಿವೇಶನ, ಚಂದ್ರಗುತ್ತಿ ಬೆತ್ತಲೆ ಸೇವೆ, ಹುಣಸೆಕೋಟಿ ಕಂಬಾಲಪಲ್ಲಿ ನರಮೇಧ ಹೀಗೆ ಹತ್ತು ಹಲವು ಹೋರಾಟಗಳಲ್ಲಿ ಭಾಗಿಯಾಗಿರುತ್ತಾರೆ. ಆಂಧ್ರದ ಚಂದೂರು ಹತ್ಯಾಕಾಂಡದ ವಿರುದ್ಧ ಜನಕಲಾ ಮೇಳ ಸಹ ಇವರು ಸಂಘಟಿಸಿರುತ್ತಾರೆ.

ನಫೀಸಾ ಪೆರುವಾಯಿ : ಇವರು ದಕ್ಷಿಣ ಕನ್ನಡ ಜಿಲ್ಲೆಯ ಪೆರುವಾಯಿ ಗ್ರಾಮದವರು. ಇವರ ಕಾಲೇಜು ಶಿಕ್ಷಣವು ಕನ್ಯಾನದಲ್ಲಿ ನಡೆಯಿತು. ಇವರು 2020-21ರಲ್ಲಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾಗಿ ಉಪಾಧ್ಯಕ್ಷೆಯಾಗಿರುತ್ತಾರೆ. ಆ ಗ್ರಾಮದ ಸ್ವಚ್ಛತಾ ವಾಹನಕ್ಕೆ ಚಾಲಕಿ ದೊರೆಯದಿದ್ದಾಗ ತಾವು ಪಂಚಾಯತ್ ಉಪಾಧ್ಯಕ್ಷೆ ಎಂಬುದನ್ನು ಮರೆತು ತಾವೇ ವಾಹನ ತೆಗೆದುಕೊಂಡು ಗ್ರಾಮದ ಪ್ರತಿ ಮನೆಗೆ, ಗಲ್ಲಿಗಳಿಗೆ ತೆರಳಿ ಕಸ ಪಡೆದು ಗ್ರಾಮದ ಶುಚಿತ್ವಕ್ಕೆ ಅಡಿಪಾಯ ಹಾಕಿದ್ದಾರೆ. ಉಪಾಧ್ಯಕ್ಷೆಯ ಸರದಿ ಮುಗಿದ ನಂತರ ಅಧ್ಯಕ್ಷರಾದ ನಫೀಸಾ ಗರ್ಭಿಣಿಯಾದರೂ ಹೆರಿಗೆಯ ಹಿಂದಿನ ದಿನದವರೆಗೆ ಪಂಚಾಯಿತಿಗೆ ತೆರಳಿ ತಮ್ಮ ಕೆಲಸ ನಿರ್ವಹಿಸಿರುತ್ತಾರೆ. ಅಲ್ಲದೇ ಹೆರಿಗೆಯಾದ 9ನೇ ದಿನವೇ ಮತ್ತೆ ಸಾರ್ವಜನಿಕ ಕೆಲಸ ಪ್ರಾರಂಭಿಸಿ ಜನಸೇವೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಟ್ಟಿರುತ್ತಾರೆ. ಇವರು ಸ್ವಚ್ಛ ಗ್ರಾಮಕ್ಕೆ ಸಂಬಂಧಿಸಿದಂತೆ ರಾಜ್ಯ ತರಬೇತುದಾರರಾಗಿ ಆಯ್ಕೆಯಾಗಿರುತ್ತಾರೆ.

WhatsApp Image 2025 04 11 at 5.32.30 PM

ಡಾ ಶಿವಪ್ಪ ಅರಿವು : ಇವರು ಸಮಾಜ ಸುಧಾರಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಅಸ್ಪೃಶ್ಯತೆ ನಿರ್ಮೂಲನೆಗಾಗಿ ಗೃಹಪ್ರವೇಶ, ದೇವಾಲಯ ಪ್ರವೇಶ, ಸಹಭೋಜನ, ಸಮತೆಯ ಟೀ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ, ಒಂದು ನೀರು-ಒಂದು ಬಾವಿ ಇತ್ಯಾದಿ ಕಾರ್ಯಕ್ರಮಗಳನ್ನು 2014 ರಿಂದ ನಡೆಸಿಕೊಂಡು ಬಂದಿದ್ದಾರೆ. ವಿಧವೆ ಮತ್ತು ವಿಚ್ಛೇಧಿತರಿಗೆ ಮರು ಮದುವೆಗಳನ್ನು ಸಹ ಏರ್ಪಡಿಸುತ್ತಿದ್ದಾರೆ. ಗ್ರಾಮೀಣ ಭಾರತದ ಇತಿಹಾಸ, ಕಲೆ, ಕೃಷಿ, ಕೈಗಾರಿಕೆ, ಕೌಶಲ್ಯಗಳನ್ನು ದಾಖಲಿಸಲು ಅರಿವು ಭಾರತ ಯೂಟ್ಯೂಬ್ ಚಾನೆಲ್ ಮೂಲಕ ಮುನ್ನೂರಕ್ಕೂ ಹೆಚ್ಚು ಡಾಕ್ಯುಮೆಂಟರಿಗಳನ್ನು ಪ್ರಕಟಿಸಿದ್ದಾರಲ್ಲದೆ ಭಾರತದ ಚರಿತ್ರೆ ಮತ್ತು ಸಂಸ್ಕೃತಿಯ ಬಗ್ಗೆ ಅನೇಕ ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಅನೇಕ ಸಂಘ ಸಂಸ್ಥೆಗಳು ಇವರ ಸಾಮಾಜಿಕ ಕಾಳಜಿಯನ್ನು ಗುರುತಿಸಿದ್ದು ಪ್ರಶಸ್ತಿ ನೀಡಿ ಪುರಸ್ಕರಿಸಿರುತ್ತವೆ.

ಸಂಗಮ್ಮ ಸಾಣಕ: ಆಳಂದ ತಾಲ್ಲೊಕಿನ ನಿಂಬಾಳ ಗ್ರಾಮದವರು. 2013ಕ್ಕಿಂತ ಮುಂಚಿನ ದಿನಗಳಲ್ಲಿ ನಿಂಬಾಳ ಸಾರಾಯಿ ಕುಡುಕರಿಂದ ತುಂಬಿ ಹೋಗಿತ್ತು. ಕುಡಿದ ಯುವಕರ ಗಲಾಟೆ, ಬೈಗುಳ ಎಲ್ಲೆಲ್ಲಿಯೂ ಕೇಳಿಬರುತ್ತಿತ್ತು. ಸಾರಾಯಿ ಕುಡಿತದಿಂದ ಅನೇಕರು ಜೀವ ತೆತ್ತರು. ಅನೇಕ ಮನೆಗಳು ಒಡೆದವು. ಇದನ್ನೆಲ್ಲ ನೋಡಿದ ಸಂಗಮ್ಮ ಸಾಣಕ ಅವರು ಇತರ ಗ್ರಾಮದ ಮಹಿಳೆಯರ ಜೊತೆ ಸೇರಿ ‘ಜಡೆ ಶಾಂತಲಿಂಗೇಶ್ವರ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಮಿತಿ’ ರಚಿಸಿಕೊಂಡು ನಿಂಬಾಳ ಗ್ರಾಮವನ್ನು ಸಾರಾಯಿ ಮುಕ್ತವಾಗಿ ಮಾಡಲು ಛಲತೊಟ್ಟರು. ಕುಡುಕ ಗಂಡ ಮತ್ತು ಮಕ್ಕಳಿಂದ ನೊಂದ ಮಹಿಳೆಯರನ್ನು ಸಂಘಕ್ಕೆ ಸೇರಿಸಿಕೊಂಡರು. ಹಾಡು, ಬುದ್ಧಿಮಾತು, ಕೆಲ ಸಂದರ್ಭದಲ್ಲಿ ಕುಡುಕರನ್ನು ಮಠಕ್ಕೆ ಕರೆತಂದು ಅವರ ಮೇಲೆ ರೂ.1001/- ದಂಡ ಹಾಕಿಸಿದರು. ಇದು ಕುಡುಕರ ಮೇಲೆ ಪರಿಣಾಮ ಬೀರಿತ್ತು ಮತ್ತು ಒಬ್ಬೊಬ್ಬರಾಗಿ ಸಾರಾಯಿ ಬಿಟ್ಟರು. ಸಾರಾಯಿ ತಯಾರಾಗುತ್ತಿದ್ದ ದುಧನಿ ತಾಂಡದಲ್ಲಿಯೂ ಜಾಗೃತಿ ಮೂಡಿಸಿ ತಯಾರಿಕೆ ನಿಲ್ಲಿಸುವಂತೆ ಪ್ರೇರೇಪಿಸಿದರು. ಇವರ ಹೋರಾಟದಿಂದ ನಿಂಬಾಳ ಗ್ರಾಮ ಸಾರಾಯಿ ಮುಕ್ತವಾಯಿತು.

ಡಿಂಗ್ರಿ ನರಸಪ್ಪ: ಡಿಂಗ್ರಿ ನರಸಪ್ಪ ಅವರು ಕುಷ್ಟಗಿ ತಾಲೂಕಿನ ಕುದುರೆಮುತೆ ಗ್ರಾಮದವರು. ಆ ಗ್ರಾಮದ ಸ್ವಾಮಿಗಳು ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯದ ವಿರುದ್ಧ ಹೋರಾಟ ಪ್ರಾರಂಭಿಸಿದವರು. ದಲಿತ ಸಂಘರ್ಷ ಸಮಿತಿ ಸೇರಿ ದಲಿತ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ನಿರಂತರವಾಗಿ ಹೋರಾಡುತ್ತಾ ಬಂದಿದ್ದಾರೆ. ಮಾನ್ವಿ ತಾಲೂಕಿನ ಅರವಳ್ಳಿ ಗ್ರಾಮದ ಬೆತ್ತಲೆ ಸೇವೆ ಅದೇ ತಾಲ್ಲೊಕಿನ ನೀರಮಾನ್ವಿ ಗ್ರಾಮದಲ್ಲಿನ ದೇವದಾಸಿ ಪದ್ಧತಿ ಇವುಗಳ ವಿರುದ್ಧ ತಿಂಗಳುಗಳ ಕಾಲ ನಿರಂತರವಾಗಿ ಹೋರಾಡಿ ಆ ಪದ್ಧತಿಗಳನ್ನು ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. 1991 ರಿಂದ ಜಿಲ್ಲಾ ಸಾಕ್ಷರತಾ ಮಿಷನ್ ಸೇರಿ ಜನರನ್ನು ಅಕ್ಷರಸ್ಥರನ್ನಾಗಿ ಮಾಡಲು ಶ್ರಮಿಸಿರುತ್ತಾರೆ. 2007ರಲ್ಲಿ ಶ್ರುತಿ ಸಂಸ್ಕೃತಿ ಸಂಸ್ಥೆಯನ್ನು ಹುಟ್ಟು ಹಾಕಿ ಜಿಲ್ಲೆಯಾದ್ಯಂತ ಬಾಲ್ಯ ವಿವಾಹ, ಅಸ್ಪೃಶ್ಯತೆ ನಿವಾರಣೆ, ಬಾಲಕಾರ್ಮಿಕ ಪದ್ಧತಿ, ದೇವದಾಸಿ ಪದ್ಧತಿ ಮುಂತಾದವುಗಳ ವಿರುದ್ಧ ಸಕ್ರಿಯ ಜನ ಜಾಗೃತಿ ಮೂಡಿಸಿರುತ್ತಾರೆ ಅಲ್ಲದೆ ಹಾಡು, ನಾಟಕ, ತಮಟೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಲು ಕಾರ್ಯಕ್ರಮ ರೂಪಿಸಿ ಕಲಿಕೆ ನೀಡುತ್ತಿದ್ದಾರೆ.

ಕಾರ್ಯಕ್ರಮ ವಿವರ : ಬೆಳಿಗ್ಗೆ 9ಕ್ಕೆ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ, ನಂತರ ಸಾಂಸ್ಕೃತಿಕ ಕಾರ್ಯಕ್ರಮ. ಪ್ರಶಸ್ತಿ ಪ್ರದಾನ ಸಮಾರಂಭ ಮಧ್ಯಾಹ್ನ 3.00 ಗಂಟೆಗೆ ಸ್ಪೂರ್ತಿಧಾಮದಲ್ಲಿ ನಡೆಯಲಿದೆ. ಮಾಜಿ ಸಚಿವರು ಮತ್ತು ವಿಧಾನಸಭಾ ಸಭಾಪತಿ ಕೆ.ಆರ್.ರಮೇಶ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡುವವರು. ಮುಖ್ಯ ಅಥಿತಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಭಾಗವಹಿಸುವರು. ಸ್ಪೂರ್ತಿಧಾಮ ಅಧ್ಯಕ್ಷ ಎಸ್.ಮರಿಸ್ವಾಮಿ ಅಧ್ಯಕ್ಷತೆ ವಹಿಸುವರು. ಸಂಜೆ 6.00ಕ್ಕೆ ಪಂಚಮ ಪದ ನಾಟಕ ಪ್ರದರ್ಶನವಿದೆ.
ಸ್ಥಳ : ಸ್ಪೂರ್ತಿಧಾಮ, ಅಂಜನಾನಗರ, ಮಾಗಡಿ ಮುಖ್ಯ ರಸ್ತೆ, ವಿಶ್ವನೀಡಂ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಪುನರಾರಂಭ; ಸೀಮಿತ ಆ್ಯಪ್‌ಗಳಲ್ಲಿ ಮಾತ್ರ ಲಭ್ಯ

ಬೆಂಗಳೂರಿನಲ್ಲಿ ಗುರುವಾರದಿಂದ (ಆಗಸ್ಟ್‌ 21) ಮತ್ತೆ ಬೈಕ್‌ ಟ್ಯಾಕ್ಸಿ ಸೇವೆಗಳು ಪುನಾರಂಭವಾಗಿವೆ....

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X