ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಕರ್ನಾಟಕದ ಬಹುಮುಖ್ಯ ಸಮುದಾಯವಾಗಿರುವ ಬ್ಯಾರಿ ಸಮುದಾಯದ ಜನರನ್ನು ಸಂಘಟಿಸುವ ಸಲುವಾಗಿ ಬ್ಯಾರೀಸ್ ಸೆಂಟ್ರಲ್ ಕಮಿಟಿ ಆರಂಭಿಸಲಾಗಿದ್ದು, ಜುಲೈ 1ರಿಂದ ಜುಲೈ 31ರವರೆಗೆ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕಮಿಟಿಯ ಅಧ್ಯಕ್ಷ ಶಬೀರ್ ಬ್ರಿಗೇಡ್ ತಿಳಿಸಿದ್ದಾರೆ.
ಶುಕ್ರವಾರ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬೆಂಗಳೂರಿನಲ್ಲಿ ಸುಮಾರು ಒಂದು ಲಕ್ಷ ಬ್ಯಾರಿ ಸಮುದಾಯದ ಜನರಿದ್ದು, ಅವರನ್ನು ಒಂದೇ ವೇದಿಕೆಗೆ ತರುವ ಉದ್ದೇಶವನ್ನು ಬ್ಯಾರೀಸ್ ಸೆಂಟ್ರಲ್ ಕಮಿಟಿ ಹೊಂದಿದೆ” ಎಂದು ತಿಳಿಸಿದರು.
“ಉನ್ನತ ವ್ಯಾಸಂಗಕ್ಕೆ ಬೆಂಗಳೂರಿಗೆ ಬರುವ ಸಮುದಾಯದ ವಿದ್ಯಾರ್ಥಿಗಳಿಗೆ ನೆರವು ಒದಗಿಸುವುದು, ಉದ್ಯೋಗ, ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಬ್ಯಾರಿಗಳು ಅನ್ಯಾಯಕ್ಕೊಳಗಾಗುವ ಸಂದರ್ಭದಲ್ಲಿ ಕಾನೂನಾತ್ಮಕ ನೆರವು ಒದಗಿಸುವುದು, ಅಪಘಾತಕ್ಕೊಳಗಾದ ಸಂದರ್ಭದಲ್ಲಿ ನೆರವು ನೀಡುವುದು, ಸಮುದಾಯದ ಶೈಕ್ಷಣಿಕ, ಆರ್ಥಿಕ, ರಾಜಕೀಯ ಅಭಿವೃದ್ಧಿಗೆ ಶ್ರಮಿಸುವುದು ಸೇರಿದಂತೆ ಹಲವು ಹಲವು ಧ್ಯೇಯೋದ್ದೇಶಗಳನ್ನು ಸಮಿತಿ ಹೊಂದಿದೆ” ಎಂದು ಶಬೀರ್ ಬ್ರಿಗೇಡ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ನಾಸಿರ್ ಕೆಂಪಿ, ಸಲೀಮ್ ಸಿ.ಎಂ, ಸಂಶುದ್ದೀನ್ ಕುಕ್ಕಾಜೆ, ಇರ್ಷಾದ್ ಬಜಾಲ್, ಬಶೀರ್ ಅಡ್ಯನಡ್ಕ ಉಪಸ್ಥಿತರಿದ್ದರು.
