ರಾಜಧಾನಿ ಬೆಂಗಳೂರಿನ ಸದಾಶಿವನಗರದಲ್ಲಿ ಮನೆಯ ಬಾತ್‌ರೂಮ್‌ನಲ್ಲಿ ಗ್ಯಾಸ್ ಗೀಸರ್ ಅನಿಲ್ ಸೋರಿಕೆಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ ಬೆನ್ನಲ್ಲೇ, ಇದೀಗ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ.
ಬಸವೇಶ್ವರ ನಗರದ ಕೃಷ್ಣ ಕಲ್ಯಾಣ ಮಂಟಪ ಬಳಿ ಗೀಸರ್ ಗ್ಯಾಸ್ ಸೋರಿಕೆಯಾಗಿ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ.
ಡಿಸೆಂಬರ್ 20 ರಂದು ಮಧ್ಯಾಹ್ನ ಈ ದುರಂತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಜೇಶ್ವರಿ (23) ಮೃತ ದುರ್ದೈವಿ.
ನಗರದ ಖಾಸಗಿ ಕಂಪನಿಯಲ್ಲಿ ಮೃತ ರಾಜೇಶ್ವರಿ ಕೆಲಸ ಮಾಡುತ್ತಿದ್ದರು. ರಾಜೇಶ್ವರಿ ಅಣ್ಣನ ಮದುವೆಗೆಂದು ರಜೆ ಹಾಕಿದ್ದಳು. ಡಿಸೆಂಬರ್ 20ರಂದು ಮಧ್ಯಾಹ್ನ 1.45 ರಿಂದ 2 ಗಂಟೆ ಸುಮಾರಿಗೆ ರಾಜೇಶ್ವರಿ ಸ್ನಾನಕ್ಕೆ ತೆರಳಿದ್ದಳು. ಬೆಳಗ್ಗೆ ಸ್ನಾನ ಮಾಡಲು ಹೋದಾಗ ಗ್ಯಾಸ್ ಗೀಸರ್‌ನಿಂದ ಸೋರಿಕೆಯಾದ ವಿಷ ಅನಿಲದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.
ಸ್ನಾನಕ್ಕೆ ತೆರಳಿ ತುಂಬಾ ಹೊತ್ತಾದರೂ ಹೊರಗೆ ಬರದದ್ದನ್ನು ಕಂಡ ಮನೆಯವರು ಬಾಗಿಲು ತಟ್ಟಿದ್ದಾರೆ. ಎಷ್ಟು ಹೊತ್ತು ಬಾಗಿಲು ಹೊಡೆದರೂ ಯುವತಿ ಆಚೆ ಬರದದನ್ನು ಕಂಡು ಗಾಬರಿಗೊಂಡ ಮನೆಯವರು ಬಾಗಿಲು ತೆಗೆದು ನೋಡಿದಾಗ ರಾಜೇಶ್ವರಿ ತೀವ್ರ ಅಸ್ವಸ್ಥಳಾಗಿ ಕೆಳಗೆ ಬಿದ್ದಿರುವುದು ಕಂಡು ಬಂದಿದೆ.
ತಕ್ಷಣ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಧೃಡಪಡಿಸಿದ್ದಾರೆ.
ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಎಂಟಿಸಿ ಎಂಡಿ ವಿರುದ್ಧ ಅಸಮಾಧಾನ ಹೊರಹಾಕಿದ ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ನೌಕರರ ಸಂಘಟನೆ
ಮತ್ತೊಂದು ಘಟನೆ
ಡಿಸೆಂಬರ್ 23ರಂದು ಮಗು ಜತೆಗೆ ಸ್ನಾನಕ್ಕೆ ಹೋದಾಗ ಗೀಸರ್ ಲೀಕ್ ಆಗಿ ಪ್ರಜ್ಞೆ ತಪ್ಪಿ ಬಾತ್‌ರೂಮ್‌ನಲ್ಲೇ ಗರ್ಭಿಣಿಯೊಬ್ಬರು ಮೃತಪಟ್ಟಿದ್ದರು. ನಾಲ್ಕು ವರ್ಷದ ಮಗುವಿಗೆ ಇನ್ನು ಚಿಕಿತ್ಸೆ ಮುಂದುವರಿದಿದ್ದು, ಮಗು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.