ಮಹಿಳಾ ಉದ್ಯೋಗಿಗಳು ಶೌಚಾಲಯಕ್ಕೆ ತೆರಳಿದಾಗ ಅವರ ವಿಡಿಯೋ ಚಿತ್ರೀಕರಣ ಮಾಡಿದ್ದ ಪ್ರಕರಣದಲ್ಲಿ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿಯೊಬ್ಬನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ 28 ವರ್ಷದ ಉದ್ಯೋಗಿ ಸ್ವಪ್ನಿಲ್ ನಾಗೇಶ್ ಮಲಿ ಬಂಧಿತ ವ್ಯಕ್ತಿ. ಈತ ಶೌಚಾಲಯದಲ್ಲಿ ಮಹಿಳಾ ಉದ್ಯೋಗಿ ವಿಡಿಯೋ ರೆಕಾರ್ಡ್ ಮಾಡುವಾಗಲೇ ಸಿಕ್ಕಿಬಿದ್ದಿದ್ದಾನೆ. ರಹಸ್ಯವಾಗಿ ತನ್ನ ಮೊಬೈಲ್‌ನಲ್ಲಿ ಮಹಿಳಾ ಉದ್ಯೋಗಿಯ ಶೌಚಾಲಯದ ವಿಡಿಯೋ ರೆಕಾರ್ಡ್ ಮಾಡತೊಡಗಿದ್ದ. ಪಕ್ಕದ ಶೌಚಾಲಯದ ಕಮೋಡ್ ಮೇಲೆ ನಿಂತು ರೆಕಾರ್ಡ್ ಮಾಡಿದ್ದಾನೆ. ಈತ ರೆಕಾರ್ಡ್ ಮಾಡುತ್ತಿರುವುದು ಎದುರುಗಡೆ ಬಾಗಿಲ ಮೇಲೆ ಪ್ರತಿಬಿಂಬ ಮೂಡಿರುವುದನ್ನು ಯುವತಿ ಗಮನಿಸಿದ್ದಾರೆ. ತಕ್ಷಣ ಪರಿಶೀಲನೆ ಮಾಡಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಕೂಡಲೇ ಮಹಿಳೆ ಕಿರುಚಾಡಿದ್ದು, ಅಲ್ಲಿಯೇ ಮಹಿಳಾ ಉದ್ಯೋಗಿಯ ಕ್ಷಮೆ ಕೇಳಿದ್ದಾನೆ. ಈ ಹಂತದಲ್ಲಿ ಎಚ್‌ಆರ್ ಸಿಬ್ಬಂದಿ ಆಗಮಿಸಿ ಆರೋಪಿಯ ವಿಡಿಯೋ ಪರಿಶೀಲನೆ ಮಾಡಿದಾಗ ಸಂತ್ರಸ್ತೆಯ ವಿಡಿಯೋ ಜೊತೆಗೆ ಸುಮಾರು 30ಕ್ಕೂ ಅಧಿಕ ಮಹಿಳೆಯರ ವಿಡಿಯೋ ಪತ್ತೆಯಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪತ್ರಿಕಾ ದಿನಾಚರಣೆ: ಅತಿರೇಕ ಅಳಿಯುತ್ತದೆ, ಒಳಿತು ಉಳಿಯುತ್ತದೆ
ಆದರೆ, ಕಠಿಣ ಕ್ರಮಕ್ಕೆ ಮುಂದಾಗದೆ ಇನ್ಫೋಸಿಸ್ ಆಡಳಿತ ಮಂಡಳಿ ಉದ್ಯೋಗಿಯ ಕ್ಷಮೆ ಕೇಳಿಸಿ ಪ್ರಕರಣವನ್ನು ಮುಚ್ಚಿಹಾಕಲು ಮುಂದಾಗಿತ್ತು. ಆದರೆ, ಮಹಿಳಾ ಉದ್ಯೋಗಿ ಪತಿಗೆ ವಿಚಾರ ತಿಳಿದು ಗಲಾಟೆ ದೊಡ್ಡದಾಗಿದ್ದು, ಇನ್ಫೋಸಿಸ್ ಕಂಪನಿ ಬಳಿ ಮಹಿಳೆಯ ಪತಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಮಂಗಳವಾರ ಎಲಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ ಇಂದು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸ್ವಪ್ನಿಲ್ ನಾಗೇಶ್ ಮಲಿ ಇನ್ಫೋಸಿಸ್ ಕಂಪನಿಯ ಹೀಲೀಕ್ಸ್ ಡಿಪಾರ್ಟ್‌ಮೆಂಟ್‌ನಲ್ಲಿ ಸೀನಿಯರ್ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ.