ಬೆಂಗಳೂರಿನಲ್ಲಿ ಹಿಂದಿನ ಮಳೆಯ ಹಾನಿ ಪ್ರಕರಣಗಳಿಂದ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದೇ ನಿರ್ಲಕ್ಷ್ಯ ತೋರಿದ ಪರಿಣಾಮ ಭಾರೀ ಅನಾಹುತಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಯು ತೀವ್ರವಾಗಿ ಟೀಕಿಸಿದೆ.
ಮಳೆ ಪ್ರಾರಂಭದ ಪೂರ್ವದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಹಿಸದ ಹಿನ್ನಲೆ ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೆಂಗಳೂರಿನ ಅನೇಕ ಜನ ವಸತಿ ಪ್ರದೇಶಗಳು, ರಸ್ತೆಗಳು ಮುಳುಗಿದ್ದು, ಕೆ.ಆರ್. ಪುರಂ ಪ್ರದೇಶದಲ್ಲಿ ಗೋಡೆ ಕುಸಿದು ಮಹಿಳೆಯನ್ನು ಸಾವಿಗೆ ದೂಡಿದೆ. ಮಳೆಗೆ ಅನೇಕ ವಾಹನಗಳು ಹಾನಿಗೀಡಾಗಿವೆ. ಮನೆಗಳಿಗೆ ನೀರು ನುಗ್ಗಿ ಜಲ ಪ್ರದೇಶಗಳಾಗಿ ಜನತೆ ತತ್ತರಿಸುವಂತಾಗಿದೆ.
ಬೆಂಗಳೂರಿನ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್, ಹೆಬ್ಬಾಳ – ಯಲಹಂಕ ಜಂಕ್ಷನ್, ಮೈಸೂರು ರಸ್ತೆ, ಇನ್ನಿತರ ಪ್ರಮುಖ ರಸ್ತೆಗಳು ಮಳೆಯಿಂದ ಹಾನಿಗೊಳಗಾಗಿದ್ದು, ಪ್ರಯಾಣಿಕರ ಸುಗಮ ಸಂಚಾರಕ್ಕೆ ಹಾಗೂ ಜನತೆಯ ನೆರವಿಗೆ ತುರ್ತು ಕ್ರಮಗಳನ್ನು ವಹಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.
ರಾಜ್ಯ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಕಾನೂನಿನ ಮೂಲಕ ಪ್ರಸ್ತುತ ಗ್ರೇಟರ್ ಬೆಂಗಳೂರು ಆಗಿ ಮಾರ್ಪಡಿಸಿ ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಮಾತನಾಡುತ್ತಿದೆ. ವಾಸ್ತವವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಬಿಬಿಎಂಪಿ ತನ್ನ 2025-26ರ ಸಾಲಿನ ಬಜೆಟ್‌ನಲ್ಲಿ ಕೆರೆ, ರಾಜ ಕಾಲುವೆಗಳು ಒತ್ತುವರಿ ತೆರವು, ದುರಸ್ತಿ ಮತ್ತು ಸಂರಕ್ಷಣೆ ಹಾಗೂ ಒಳ ಚರಂಡಿ ನಿರ್ಮಾಣ ಮತ್ತು ದುರಸ್ತಿ, ರಸ್ತೆಗುಂಡಿಗಳನ್ನು ಮುಚ್ಚಲು ಆದ್ಯತೆ ನೀಡಿಲ್ಲ. ಬದಲಾಗಿ ಬಂಡವಾಳಗಾರರ, ರಿಯಲ್ ಎಸ್ಟೇಟ್‌ಗಾರರ ಜೇಬು ತುಂಬಿಸಲು ಮಾತ್ರ ಹಲವು ಪ್ರಕಟಣೆಗಳನ್ನು ಮಾಡಿದೆ.
ಮಳೆ ನೀರು ಸುಗುಮವಾಗಿ ಕಾಲುವೆ, ಒಳ ಚರಂಡಿ ಮೂಲಕ ಹೋಗುವಂತೆ ಈ ಹಿಂದಿನಿಂದಲೂ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಯಾವುದೇ ಕ್ರಮಗಳನ್ನು ವಹಿಸದೆ ನಿರ್ಲಕ್ಷ್ಯತೆ ವಹಿಸುತ್ತಿರುವ ಪರಿಣಾಮ ಬೆಂಗಳೂರಿನಲ್ಲಿ ಮಳೆ ಬಂದಾಗ ಇಂತಹ ಅನಾಹುತಗಳಿಗೆ ಕಾರಣವಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ, ಪ್ರಸ್ತುತ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಬೆಂಗಳೂರನ್ನು ಮಳೆಯ ಅನಾಹುತಗಳಿಂದ ಮುಕ್ತಗೊಳಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ರಾಜಕೀಯ ಇಚ್ಛಾಶಕ್ತಿ ತೋರದೆ ಪ್ರಸ್ತುತ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿವೆ.
ಮಳೆ ಅವಘಡದಿಂದ ಮೃತರಾದ ಮಹಿಳೆಗೆ ರೂ. 25 ಲಕ್ಷ ಪರಿಹಾರ ಮತ್ತು ಅವರ ಕುಟುಂಬಕ್ಕೆ ಉದ್ಯೋಗ ನೀಡಬೇಕು ಹಾಗೂ ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ, ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಮತ್ತು ಪರಿಹಾರ ನೀಡಬೇಕು ಹಾಗೂ ಮಳೆಯಿಂದ ಭಾದಿತವಾದ ವಸತಿ ಪ್ರದೇಶಗಳು ಮತ್ತು ನೀರಿನಿಂದ ತುಂಬಿರುವ ರಸ್ತೆಗಳ ದುರಸ್ತಿಗೆ ತುರ್ತುಕ್ರಮಗಳನ್ನು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ವಹಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಮಳೆಯಿಂದ ಭಾದಿತರಾದ ಜನರೊಂದಿಗೆ ಸಿಪಿಐ(ಎಂ) ನಿಲ್ಲಲಿದೆ. ಜನರ ನೆರವಿಗೆ ಕೆಲಸ ಮಾಡಲು ತನ್ನ ಎಲ್ಲಾ ಶಾಖೆಗಳಿಗೆ ಸಿಪಿಐ(ಎಂ) ಬೆಂಗಳೂರು ಉತ್ತರ – ದಕ್ಷಿಣ ಜಿಲ್ಲಾ ಸಮಿತಿಗಳು ಕರೆ ನೀಡಿವೆ.