ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಅವಕಾಶ ನೀಡಬೇಕು ಎಂದು ಬೆಂಗಳೂರು ಜಿಲ್ಲಾಡಳಿತ ಹಾಗೂ ಇತರೆ ಪ್ರಾಧಿಕಾರಗಳಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ.
ನವೆಂಬರ್ 1ರಿಂದ 3ರ ವರೆಗೆ ಕನ್ನಡ ರಾಜ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಡೆಸಲು ಅವಕಾಶ ನೀಡಿ, ಆದೇಶಿಸಿರುವ ಹೈಕೋರ್ಟ್, ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯಕ್ರಮ ನಡೆಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಸ್ಪಷ್ಟ ಸೂಚನೆ ನೀಡಿದೆ.
ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಚಾಮರಾಜಪೇಟೆ ನಾಗರಿಕರ ಒಕ್ಕೂಟಕ್ಕೆ ಅನುಮತಿಸಿದ ಕರ್ನಾಟಕ ಹೈಕೋರ್ಟ್.#KarnatakaHighCourt pic.twitter.com/TVzz2NpO9e
— ಬಾರ್ & ಬೆಂಚ್ – Kannada Bar & Bench (@Kbarandbench) October 31, 2023
ಇದೇ ವೇಳೆ, ರಾಜ್ಯದ ಧ್ವಜ ಮಾತ್ರ ಹಾರಾಟ ಮಾಡಿಸುವುದಾಗಿ ಅರ್ಜಿದಾರರಾದ ಚಾಮರಾಜಪೇಟೆ ನಾಗರಿಕ ಒಕ್ಕೂಟವು ನ್ಯಾಯಾಲಯಕ್ಕೆ ಬರೆದಿರುವ ಮುಚ್ಚಳಿಕೆ ಪತ್ರದಲ್ಲಿ ತಿಳಿಸಿದೆ.
ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣೇಶ ಚತುರ್ಥಿ ಸಂದರ್ಭ ಕೂಡ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಆಚರಣೆ ಮಾಡುವ ವಿಚಾರವಾಗಿ ಹಿಂದೂ ಪರ ಸಂಘಟನೆಗಳಿಂದ ಆಗ್ರಹ ವ್ಯಕ್ತವಾಗಿತ್ತು.
ಕನ್ನಡ ರಾಜ್ಯೋತ್ಸವ ಆಚರಿಸುವ ಸಂಬಂಧ ಚಾಮರಾಜಪೇಟೆ ನಾಗರಿಕ ಒಕ್ಕೂಟವು ಮೂರು ದಿನಗಳ ಕಾಲ ರಾಜ್ಯೋತ್ಸವ ಆಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅಣ್ಣಮ್ಮ ಉತ್ಸವ ನಡೆಸಲು ಅವಕಾಶ ಕೊಡಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಆದರೆ ಜಿಲ್ಲಾಧಿಕಾರಿಗಳು ಈ ಮನವಿಯನ್ನು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಒಕ್ಕೂಟವು ನ್ಯಾಯಾಲಯದ ಮೊರೆ ಹೋಗಿತ್ತು.