“ಭಾರತ ಬಿಟ್ಟು ತೊಲಗಿ” ಚಳುವಳಿಯಲ್ಲಿ ಹುತಾತ್ಮರಾದವರ ಬಗ್ಗೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿನ ಹುತಾತ್ಮರ ಸರ್ಕಲ್ ಇದೆ. ಆದರೆ, ದೇವಸ್ಥಾನವೊಂದು ಜಾಗವನ್ನು ಒತ್ತುವರಿ ಮಾಡಿಕೊಂಡದ್ದರಿಂದ ಸಾರ್ವಜನಿಕರ ಕಣ್ಣಿಗೆ ಕಾಣುತ್ತಿಲ್ಲ. ಹಾಗಾಗಿ, ಈ ಬಗ್ಗೆ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳುವಂತೆ ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ನೈಜ ಹೋರಾಟಗಾರರ ವೇದಿಕೆಯ ಹೆಚ್ಎಂ ವೆಂಕಟೇಶ್ ಹಾಗೂ ಕುಣಿಗಲ್ ನರಸಿಂಹಮೂರ್ತಿ, “ಬೆಂಗಳೂರು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳಾದ ಶಾಮಣ್ಣ ಬಿನ್ ಬೇಟೆ ರಂಗಪ್ಪ, ಪ್ರಹ್ಲಾದ್ ಶೆಟ್ಟಿ, ಗುಂಡಪ್ಪ ಮತ್ತು ಜಿ .ವಿ ತಿರುಮಲಯ್ಯ ಎಂಬ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳು ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದಾಗ ಸ್ವಾತಂತ್ರ್ಯಕ್ಕಾಗಿ ತಮ್ಮ ಎದೆಯನೊಡ್ಡಿ ಬ್ರಿಟೀಷರ ಗುಂಡಿಗೆ ಬಲಿಯಾದ ನೆನಪಿಗಾಗಿ 1972ರಲ್ಲಿ ಮೈಸೂರ್ ಬ್ಯಾಂಕ್ ಸರ್ಕಲ್ನಲ್ಲಿ ಕೇಂದ್ರ ಸರ್ಕಾರ ನಿರ್ಮಿಸಿದ ಸ್ಮಾರಕ ಸ್ತಂಭವನ್ನು 1973ರಲ್ಲಿ ಅಂದಿನ ಬೆಂಗಳೂರು ನಗರ ಸಭೆ ಅನಾವರಣಗೊಳಿಸಿತ್ತು. ಇದುವರೆಗೂ ರಾಜ್ಯವನ್ನಾಳಿದ ಸರ್ಕಾರ ಹಾಗೂ ಬಿಬಿಎಂಪಿಯವರ ನಿರ್ಲಕ್ಷ್ಯದಿಂದ ಈ ಸ್ವಾತಂತ್ರ್ಯ ಯೋಧರ ಸ್ಮಾರಕ, ಸರ್ಕಲ್ ಬಳಿಯಲ್ಲಿರುವ ದೇವಸ್ಥಾನ ಒಂದು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಹಾಕಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸ್ಮಾರಕದ ಬಗ್ಗೆ ಮಾಹಿತಿಯೂ ಇಲ್ಲ ಅದು ಸಾರ್ವಜನಿಕರ ದೃಷ್ಟಿಗೆ ಬೀಳುವುದಿಲ್ಲ” ಎಂದು ತಿಳಿಸಿದೆ.

ಈ ವಿಚಾರವಾಗಿ ನೈಜ ಹೋರಾಟಗಾರರ ವೇದಿಕೆಯು ಕಳೆದ 3-4 ವರ್ಷಗಳಿಂದ ದೇವಸ್ಥಾನದ ಕಾಂಪೌಂಡಿನಿಂದ ಸ್ಮಾರಕವನ್ನು ವಿಂಗಡಿಸಿ ಸಾರ್ವಜನಿಕರಿಗೆ ಕಾಣುವಂತೆ ಮತ್ತು ಮೈಸೂರು ಬ್ಯಾಂಕ್ ಸರ್ಕಲ್ ಹೆಸರನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವಿದ್ಯಾರ್ಥಿಗಳ ನೆನಪಿಗಾಗಿ ವೀರ ಯೋಧರ ವೃತ್ತ ಎಂದು ಮರುನಾಮಕರಣ ಮಾಡಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರನ್ನು ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೋರಾಟಗಾರರು ತಿಳಿಸಿದ್ದಾರೆ.
ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ವಿದ್ಯಾರ್ಥಿಗಳ ನೆನಪಿಗಾಗಿ ನಿರ್ಮಾಣವಾಗಿರುವ ಕಣ್ಮರೆಯಾದ ಸ್ಮಾರಕವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲು ನಾವು ಮತ್ತೊಂದು ಹೋರಾಟವನ್ನು ಮಾಡಬೇಕಾಗಿ ಬಂದಿರುವುದು ದುರದೃಷ್ಟಕರ. ನಮ್ಮ ದೇಶಕ್ಕೆ ಸ್ವಾತಂತ್ರ ಬಂದು 75ಕ್ಕೂ ಹೆಚ್ಚು ವರ್ಷಗಳಾದರೂ ಸಹಿತ ಕರ್ನಾಟಕದಲ್ಲಿ ಆಡಳಿತ ನಡೆಸಿದ ಎಲ್ಲಾ ಪಕ್ಷಗಳು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ನಡೆಸಿದ ಪಕ್ಷಗಳಿಗೆ, ರಾಜಕಾರಣಿಗಳಿಗೆ ಇಚ್ಛಾಶಕ್ತಿಯ ಕೊರತೆಯಿಂದ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳ ಬಲಿದಾನ ಸಾರ್ವಜನಿಕರ ಗಮನಕ್ಕೆ ಬರದೇ ವ್ಯರ್ಥವಾಗುತ್ತಿದೆ. ಮುಖ್ಯಮಂತ್ರಿಗಳಾದ ತಾವು ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದ ಸೆಂಟ್ರಲ್ ಕಾಲೇಜ್ ವಿದ್ಯಾರ್ಥಿಗಳ ನೆನಪಿಗಾಗಿ ಸದರಿ ಸ್ಮಾರಕವನ್ನು ದೇವಸ್ಥಾನದವರು ಅಕ್ರಮಿಸಿಕೊಂಡು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತಕ್ಷಣ ತೆರವುಗೊಳಿಸಿ ದೇವಸ್ಥಾನದಿಂದ ಸ್ಮಾರಕವನ್ನು ಬೇರ್ಪಡಿಸಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಬೇಕೆಂದು ನೈಜ ಹೋರಾಟಗಾರರು ವೇದಿಕೆಯು ಸರ್ಕಾರದೊಂದಿಗೆ ಮನವಿ ಮಾಡಿಕೊಂಡಿದೆ.
ಈ ಸ್ಮಾರಕವನ್ನು ತೆರವುಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಮತ್ತು ವಿದ್ಯಾರ್ಥಿಗಳ ಬಲಿದಾನಕ್ಕೆ ಗೌರವ ನೀಡಿ ಮೈಸೂರ್ ಬ್ಯಾಂಕ್ ಸರ್ಕಲ್ ಹೆಸರನ್ನು ತಕ್ಷಣ ಬದಲಾವಣೆ ಮಾಡಿ ವೀರಯೋಧ ವಿದ್ಯಾರ್ಥಿಗಳ ವೃತ್ತ ಎಂದು ಮರುನಾಮಕರಣ ಮಾಡಬೇಕೆಂದು ನೈಜ ಹೋರಾಟಗಾರರ ವೇದಿಕೆಯು ಆಗ್ರಹಿಸಿದೆ.
ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಇದೇ ಆಗಸ್ಟ್ 15ರ ಸ್ವಾತಂತ್ರೋತ್ಸವದ ದಿನ ವೀರಯೋಧ ವಿದ್ಯಾರ್ಥಿಗಳಿಗೆ ಗೌರವ ನಮನ ಸಲ್ಲಿಸಲು ಮತ್ತು ಸ್ಮಾರಕವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸುವಂತೆ ನೈಜ ಹೋರಾಟಗಾರರ ವೇದಿಕೆಯ ಹೆಚ್ಎಂ ವೆಂಕಟೇಶ್ ಹಾಗೂ ಕುಣಿಗಲ್ ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.
