ರಾಜ್ಯದಲ್ಲಿ ಹಿಂಗಾರು ಮಳೆ ಆರ್ಭಟ ಜೋರಾಗಿದ್ದು, ಸೋಮವಾರದಿಂದ (ನ.06) ಸುರಿಯುತ್ತಿರುವ ಮಳೆಗೆ ಉದ್ಯಾನ ನಗರಿ ಬೆಂಗಳೂರು ತತ್ತರಿಸಿದೆ.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನವೇ ಜೋರು ಮಳೆ ಶುರುವಾಯಿತು. ಬೈಯ್ಯಪ್ಪನಹಳ್ಳಿ ರಸ್ತೆಯಲ್ಲಿ ಒಂದು ಅಡಿಗೂ ಹೆಚ್ಚು ನೀರು ನಿಂತು ಸವಾರರು ಪರದಾಡಿದರು. ಯಲಹಂಕ ಕೆರೆ ಕೋಡಿ ಬಿದ್ದು ಕೋಗಿಲು ಸರ್ಕಲ್, ಕೇಂದ್ರೀಯ ಅಪಾರ್ಟ್ಮೆಂಟ್, ಏರ್ಪೋರ್ಟ್ ರೋಡ್ ಜಲಾವೃತವಾಗಿದೆ. ಹಲವು ಕಾರುಗಳು ಮುಳುಗಡೆ ಆಗಿವೆ.
ಕುರುಬರಹಳ್ಳಿಯ ತಗ್ಗುಪ್ರದೇಶದಲ್ಲಿರುವ ಮನೆಗಳು ಜಲಾವೃತವಾಗಿ ಜನರು ತೊಂದರೆ ಅನುಭವಿಸಿದ್ದಾರೆ. ಮಾಗಡಿ ರಸ್ತೆ ಜಿಟಿ ಮಾಲ್ ಬಳಿಯ ರಾಜಕಾಲುವೆಯ ನೀರು ಮನೆಗಳಿಗೆ ನುಗ್ಗಿದೆ. ಮೈಸೂರು ರಸ್ತೆಯ ಗಾಳಿ ಆಂಜನೇಯ ದೇಗುಲದ ಆವರಣ ಎಂದಿನಂತೆ ಮೋರಿ ನೀರಿಂದ ತುಂಬಿಹೋಗಿತ್ತು.
ಈ ಸುದ್ದಿ ಓದಿದ್ದೀರಾ? ತನಿಖಾ ಸಂಸ್ಥೆಗಳಿಂದ ಸರ್ಕಾರ ನಡೆಸಲು ಸಾಧ್ಯವಾಗದು; ಪತ್ರಿಕಾ ಸ್ವಾತಂತ್ರ್ಯದ ಪರ ಸುಪ್ರೀಂ ಬ್ಯಾಟಿಂಗ್
ಯಲಹಂಕದಲ್ಲಿ ಗರಿಷ್ಠ 164 ಮಿಲಿಮೀಟರ್ ಮಳೆ ಆಗಿದೆ. ರಾಜ್ಯದ ವಿವಿಧೆಡೆಯೂ ಭಾರೀ ಮಳೆ ಆಗಿದೆ. ಕಡೂರಿನ ಮಚ್ಚೇರಿಯಲ್ಲಿ ಗೋಡೆ ಕುಸಿದು ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಚನ್ನಗಿರಿಯ ದೊಡ್ಡಟ್ಟಿ ಬಳಿ ತುಂಬಿ ಹರಿದ ಹಳ್ಳ ದಾಟುವ ದುಸ್ಸಾಹಸ ಮಾಡಿ ಕೊಚ್ಚಿ ಹೋಗುತ್ತಿದ್ದ ಶಿಕ್ಷಕರೊಬ್ಬರನ್ನು ರಕ್ಷಿಸಲಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಮಳೆ
ಮಂಡ್ಯದ ಕೆ ಆರ್ ಪೇಟೆ ಬಸ್ ನಿಲ್ದಾಣ ಜಲಾವೃತವಾಗಿದೆ. ಮಂಡ್ಯದ ಹುಲಿಕೆರೆ ಬಳಿ ವಿಸಿ ನಾಲೆಯ ಸುರಂಗ ಕುಸಿದಿದ್ದು, ಮನೆಯೊಂದು ಅಪಾಯದ ಅಂಚಿನಲ್ಲಿದೆ. ತುಮಕೂರಿನ ಹಲವು ರಸ್ತೆಗಳು ಕೆರೆಯಂತಾಗಿದೆ. ಕೊಪ್ಪಳ, ಮಡಿಕೇರಿ ಸೇರಿ ಹಲವೆಡೆ ಬೆಳೆ ಹಾನಿ ಸಂಭವಿಸಿದೆ.
ರಾಮನಗರದ ಚಾಕನಹಳ್ಳಿಯಲ್ಲಿ 166 ಮಿಲಿಮೀಟರ್, ಮೈಸೂರು ನಗರದಲ್ಲಿ 148 ಮಿಲಿಮೀಟರ್, ಕೋಲಾರದ ಚೌಡೇನಹಳ್ಳಿಯಲ್ಲಿ 135 ಮಿಲಿಮೀಟರ್, ಮಂಡ್ಯದ ಮಲ್ಲಿಗೆರೆಯಲ್ಲಿ 134 ಮಿಲಿಮೀಟರ್, ಚಿಕ್ಕಬಳ್ಳಾಪುರದ ಗೆದರೆಯಲ್ಲಿ 130 ಮಿಲಿಮೀಟರ್, ತುಮಕೂರಿನ ತಿಮ್ಲಾಪುರದಲ್ಲಿ 128 ಮಿಲಿಮೀಟರ್ ಮಳೆಯಾಗಿದೆ.
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಬೀಸಿದ್ದು ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಭಾಗ ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ನ.7 ರಿಂದ ನವೆಂಬರ್ 9ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ.
ಈ ಸುದ್ದಿ ಓದಿದ್ದೀರಾ? ದೆಹಲಿ ವಾಯು ಮಾಲಿನ್ಯ: 4 ರಾಜ್ಯಗಳಲ್ಲಿ ತ್ಯಾಜ್ಯ ಸುಡುವುದನ್ನು ತಕ್ಷಣ ನಿಲ್ಲಿಸುವಂತೆ ಸುಪ್ರೀಂ ಆದೇಶ