ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ಹನುಮಂತಾಪುರ ಗ್ರಾಮದಲ್ಲಿ ಫೆ.26 ರಂದು ನಡೆದ ರಾಜಶೇಖರಪ್ಪ (60) ರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಅಳಿಯ ಮಂಜುನಾಥ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಂಜುನಾಥ್ ಮದ್ಯ ವ್ಯಸನಿಯಾಗಿದ್ದು, ತನ್ನ ಮಾವ ರಾಜಶೇಖರಪ್ಪರೊಂದಿಗೆ ಆಗಾಗ್ಗೆ ಗಲಾಟೆ ಮಾಡುತ್ತಿದ್ದ. ಶಿವರಾತ್ರಿ ಹಬ್ಬದ ದಿನದಂದು ಕೂಡ ಆರೋಪಿಯು ಕ್ಷುಲ್ಲಕ ವಿಚಾರಕ್ಕೆ ಮಾವನೊಂದಿಗೆ ಗಲಾಟೆ ಮಾಡಿ ಕೊಲೆ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.
ಇತ್ತೀಚೆಗೆ ಮನೆಯಲ್ಲಿ ಶ್ರೀಗಂಧದ ತುಂಡು ಇಟ್ಟುಕೊಂಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಯಿಂದ ಬಂಧಿತನಾಗಿ ಜೈಲು ಸೇರಿದ್ದ ಆರೋಪಿ ಮಂಜುನಾಥ್, ಕಳೆದ 15 ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ಸ್ಥಳೀಯರ ಮಾಹಿತಿ.

ಶಿವರಾತ್ರಿ ದಿನದಂದು ಮಾವ ರಾಜಶೇಖರಪ್ಪರ ಮನೆಗೆ ಆರೋಪಿ ಆಗಮಿಸಿದ್ದಾನೆ. ಮಾವನೊಂದಿಗೆ ಜಗಳ ಆಡಿ ಬಳಿಕ ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಹೊಡೆದು, ಬಟ್ಟೆಯೊಂದರಿಂದ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ತದನಂತರ ಶವವನ್ನು ಮನೆಯ ಹಿಂಭಾಗದಲ್ಲಿ ಪಾಳು ಬಿದ್ದಿದ್ದ ಶೌಚಾಲಯ ಕೊಠಡಿ ಬಳಿ ಎಸೆದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಭದ್ರಾವತಿ | ಸತ್ತ ಮಹಿಳೆ ಬದುಕಿದ್ದು ಹೇಗೆ? ಅದೃಷ್ಟ ಗಟ್ಟಿ ಇದ್ದರೆ ಯಮ ಕೂಡ ಏನು ಮಾಡಲಾಗಲ್ಲ
ರಾಜಶೇಖರಪ್ಪರ ಪುತ್ರಿ ಸಂಜೆ ಮನೆಗೆ ಆಗಮಿಸಿದಾಗ ರಕ್ತದ ಕಲೆ ಕಂಡುಬಂದಿದೆ. ಮನೆಯೆಲ್ಲ ಹುಡುಕಿದಾಗ, ಹಿಂಭಾಗದ ಶೌಚಾಲಯದ ಬಳಿ ತಂದೆಯ ದೇಹ ಬಿದ್ದಿರುವುದು ಬೆಳಕಿಗೆ ಬಂದಿದೆ. ನಂತರ ಗ್ರಾಮಸ್ಥರಿಗೆ ವಿಚಾರ ತಿಳಿದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ಮತ್ತೆ ಜೈಲಿಗಟ್ಟಿದ್ದಾರೆ.
