ಕರಾವಳಿ ಜಿಲ್ಲೆಯಾಗಿರುವ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಸಂತೆ ವ್ಯಾಪಾರ ವಿಚಾರದಲ್ಲಿ ಭುಗಿಲೆದ್ದಿದ್ದ ‘ಧರ್ಮ ದಂಗಲ್’ ವಿವಾದ ಈಗ ಹೊಸ ರೂಪ ಪಡೆದುಕೊಂಡಿದೆ.
ಮಂಗಳೂರು ನಗರದ ಮಂಗಳಾದೇವಿ ದೇವಸ್ಥಾನದ ದಸರಾ ಸಂತೆ ವ್ಯಾಪಾರ ವಿಚಾರದಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಎರಡನೇ ಬಾರಿ ಹರಾಜು ನಡೆಸಿ ಮುಸ್ಲಿಮರಿಗೂ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಈ ಆದೇಶದ ವಿರುದ್ಧ ಹೊಸ ಕ್ಯಾತೆ ತೆಗೆದಿರುವ ಸಂಘಪರಿವಾರ, ಹಿಂದು ವ್ಯಾಪಾರಸ್ಥರನ್ನು ಗುರುತಿಸಲು ಹಿಂದೂಗಳ ಅಂಗಡಿಗಳಿಗೆ ಕೇಸರಿ ಭಗವಾಧ್ವಜ ಕಟ್ಟಿದೆ.
ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಸೋಮವಾರ ಹಿಂದು ವ್ಯಾಪಾರಸ್ಥರು ನಡೆಸುವ ಅಂಗಡಿಗಳಿಗೆ ಕೇಸರಿ ಪತಾಕೆಯನ್ನು ಹಾಕಿದ್ದಾರೆ.
ಇದನ್ನು ಮಾಧ್ಯಮಗಳ ಮುಂದೆಯೇ ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಂಡಿರುವ ಶರಣ್ ಪಂಪ್ವೆಲ್, ಹಿಂದೂಗಳ ಅಂಗಡಿಯೆಂದು ಭಕ್ತರಿಗೆ ಗೊತ್ತಾಗಬೇಕು ಎಂದು ಭಗವಾಧ್ವಜ ಕಟ್ಟುತ್ತಿದ್ದೇವೆ. ಹಿಂದುಗಳು ಹಿಂದೂಗಳ ಅಂಗಡಿಯಲ್ಲೇ ವ್ಯಾಪಾರ ಮಾಡಬೇಕು. ಹಿಂದೂಗಳ ದೇವಸ್ಥಾನದಲ್ಲಿ ಹಿಂದುಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು’ ಎಂದಿದ್ದಾರೆ.
‘ಒಮ್ಮೆ ಹರಾಜು ಪ್ರಕ್ರಿಯೆ ಆದ ಬಳಿಕ ಮಹಾನಗರ ಪಾಲಿಕೆ ಮತ್ತೆ ಹರಾಜು ಪ್ರಕ್ರಿಯೆ ನಡೆಸಿದೆ. ಒಂದು ಬಾರಿ ಹರಾಜು ಆದ ಬಳಿಕ ಎರಡನೇ ಹರಾಜಿಗೆ ಅವಕಾಶ ಇರುವುದಿಲ್ಲ. ಇದು ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನ, ಕಾನೂನು ಪ್ರಕಾರ ಹಿಂದುಯೇತರರಿಗೆ ಅವಕಾಶ ಇಲ್ಲ. ಇದನ್ನು ನಾವು ವಿರೋಧ ಮಾಡುತ್ತಿದ್ದೇವೆ. ಹಾಗಾಗಿ, ಹಿಂದುಗಳು ಹಿಂದೂಗಳ ಅಂಗಡಿಯಲ್ಲೇ ವ್ಯಾಪಾರ ಮಾಡಬೇಕು ಎಂದು ಧ್ವಜ ಕಟ್ಟಿದ್ದೇವೆ’ ಎಂದಿದ್ದಾರೆ.
‘ನಾವು ಮುಸಲ್ಮಾನ ವ್ಯಾಪಾರಿಗಳ ವಿರೋಧಿಗಳಲ್ಲ. ನಮ್ಮ ದೇವಸ್ಥಾನದ ಸುತ್ತಮುತ್ತ ಹಿಂದುಗಳಿಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ. ರಸ್ತೆಯ ಎಲ್ಲಿ ಬೇಕಾದರೂ ಮುಸಲ್ಮಾನರ ವ್ಯಾಪಾರಕ್ಕೆ ಅವಕಾಶ ಕೊಡಿ. ನಮ್ಮ ಅಭ್ಯಂತರ ಇಲ್ಲ. ದೇವಸ್ಥಾನವನ್ನ ಬಿಟ್ಟು ಎಲ್ಲಿ ಬೇಕಾದರೂ ಅನ್ಯಧರ್ಮಿಯರು ವ್ಯಾಪಾರ ಮಾಡಲಿ’ ಎಂದಿದ್ದಾರೆ.
ಅಂಗಡಿಗಳಿಗೆ ಕೇಸರಿ ಬಾವುಟ ಹತಾಶೆಯ ಪ್ರತಿಬಿಂಬ: ಬಿ.ಕೆ ಇಮ್ತಿಯಾಝ್
ಈ ಬೆಳವಣಿಗೆಯ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್, ‘ಬಡ ವ್ಯಾಪಾರಿಗಳ ಅಂಗಡಿಗಳಿಗೆ ಕೇಸರಿ ಬಾವುಟ ಹತಾಶೆಯ ಪ್ರತಿಬಿಂಬ’ ಎಂದಿದ್ದಾರೆ.
‘ಇತಿಹಾಸ ಪ್ರಸಿದ್ದ ಮಂಗಳಾದೇವಿ ದೇವಸ್ಥಾನದ ದಸರಾ ಉತ್ಸವದಲ್ಲಿ ಜಾತ್ರೆ ವ್ಯಾಪಾರಿಗಳು ಹೋರಾಟ ನಡೆಸಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಮರು ಏಲಂ ಮಾಡಿಸಿ ಅವಕಾಶ ಪಡೆದಿರುವುದರಿಂದ ಕೋಮುವಾದಿ ಶಕ್ತಿಗಳು ಹತಾಶರಾಗಿದ್ದಾರೆ. ಹೀಗಾಗಿ, ಅಂಗಡಿಗಳಿಗೆ ಕೇಸರಿ ಬಾವುಟ ಕಟ್ಟುತ್ತಿರುವುದು ಕೈಲಾಗದವ ಮೈ ಪರಚಿಕೊಂಡ ಎಂಬಂತಾಗಿದೆ’ ಎಂದು ಹೇಳಿದ್ದಾರೆ.
ಬಿ.ಕೆ ಇಮ್ತಿಯಾಝ್
‘ಹಿಂದೂ ವ್ಯಾಪಾರಿಗಳ ಅಂಗಡಿಯಲ್ಲಿ ವ್ಯಾಪಾರ ಮಾಡಿ ಎಂದು ಕರೆ ಕೊಡುವ ವಿ.ಹೆಚ್.ಪಿ ನಾಯಕ ಶರಣ್ ಪಂಪ್ ವೆಲ್ ಮೊದಲಿಗೆ ಮುಸ್ಲಿಂ ಒಡೆತನದ ಮಂಗಳೂರು ನಗರದ ಹಂಪನಕಟ್ಟೆಯಲ್ಲಿರುವ ಸಿಟಿ ಸೆಂಟರ್ ಮಾಲ್ನ ಕಸ ಗುಡಿಸುವ ಕೆಲಸ ಕೈಬಿಟ್ಟು, ಮಾಲಿನ ಹಿಂದೂ ಮಾಲೀಕರ ಮಳಿಗೆಗಳಿಗೆ ಕೇಸರಿ ಬಾವುಟ ಕಟ್ಟುವ ಧೈರ್ಯ ತೋರಿಸಲಿ. ಸಂಘಪರಿವಾರವನ್ನು ಪೋಷಣೆ ಮಾಡುವ ಸಂಸ್ಥೆಗಳಾದ ಶಾರದಾ ವಿದ್ಯಾಲಯ ಮತ್ತು ನಿಟ್ಟೆ ಮೆಡಿಕಲ್ ಕಾಲೇಜಿನ ಗೇಟಿಗೆ ಕೇಸರಿ ಕಟ್ಟಲಿ’ ಎಂದು ಇಮ್ತಿಯಾಝ್ ಸವಾಲೆಸೆದಿದ್ದಾರೆ.
‘ಶ್ರೀಮಂತ ಮುಸ್ಲಿಂ ವ್ಯಾಪಾರಿಗಳೊಂದಿಗೆ ವ್ಯವಹಾರ ನಡೆಸಿ ಜಾತ್ರೆ ಮತ್ತು ಬಡ ಬೀದಿ ವ್ಯಾಪಾರಿಗಳ ಮಧ್ಯೆ ಹುಳಿ ಹಿಂಡುವ ನಡವಳಿಕೆ ಅವಮಾನವೀಯತೆಯ ಪರಮಾವಧಿ ಅಲ್ಲದೆ ಮತ್ತೇನು? ಮಂಗಳಾದೇವಿ ಕ್ಷೇತ್ರ ಸೇರಿದಂತೆ ಎಲ್ಲ ಜಾತ್ರೆ ವ್ಯಾಪಾರಿಗಳಿಗೆ ಜಿಲ್ಲಾಡಳಿತ ಸೂಕ್ತ ರಕ್ಷಣೆ ಒದಗಿಸಬೇಕು. ಧರ್ಮದ ಹೆಸರಿನಲ್ಲಿ ಯಾವುದೇ ಜಾತ್ರೆ ವ್ಯಾಪಾರಿಗೆ ತೊಂದರೆ ನೀಡಿದರೆ ಸುಮ್ಮನಿರಲಾಗದು. ಹೋರಾಟ ತೀವ್ರಗೊಳ್ಳಲಿದೆ’ ಎಂದು ತಿಳಿಸಿದರು.
‘ನಾಳೆ(ಅ.18) ಬೆಳಗ್ಗೆ ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಸಭೆ ನಡೆಯಲಿದೆ. ಈ ವೇಳೆ ಅಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇವೆ. ಶೀಘ್ರ ಸೂಕ್ತ ಪರಿಹಾರ ಕಾಣಲು ಸಚಿವರಲ್ಲಿ ಆಗ್ರಹಿಸುತ್ತೇವೆ’ ಎಂದು ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಬಿ.ಕೆ ಇಮ್ತಿಯಾಝ್ ಈ ದಿನ.ಕಾಮ್ನೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಹೇಳಿದ್ದು..
ಈ ಬೆಳವಣಿಗೆ ಬಗ್ಗೆ ಈದಿನ.ಕಾಮ್ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಸಂಪರ್ಕಿಸಿದಾಗ, ‘ವ್ಯಾಪಾರದ ವಿಚಾರದಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಮುಗಿದು ಎಲ್ಲವೂ ಸರಿಯಾಗಿತ್ತು. ಧ್ವಜದ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ದಸರಾದಲ್ಲಿ ಯಾವುದೇ ಶಾಂತಿಭಂಗ ಉಂಟಾಗದಂತೆ ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ. ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ’ ಎಂದು ತಿಳಿಸಿದರು.
ಧ್ವಜ ಕಟ್ಟಿರುವ ಬಗ್ಗೆ ಯಾರೂ ದೂರು ನೀಡಿಲ್ಲ: ಅಪರ ಜಿಲ್ಲಾಧಿಕಾರಿ
‘ಹಿಂದು ವ್ಯಾಪಾರಸ್ಥರನ್ನು ಗುರುತಿಸಲು ಹಿಂದೂಗಳ ಅಂಗಡಿಗಳಿಗೆ ಕೇಸರಿ ಭಗವಾಧ್ವಜ ಕಟ್ಟಿರುವ ಬಗ್ಗೆ ಈವರೆಗೆ ಯಾರೂ ಜಿಲ್ಲಾಡಳಿತಕ್ಕೆ ದೂರು ನೀಡಿಲ್ಲ. ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಸಂತೆ ವ್ಯಾಪಾರಕ್ಕೆ ಸಂಬಂಧಿಸಿದ 11 ಸ್ಟಾಲ್ಗಳ ಹರಾಜು ಪ್ರಕ್ರಿಯೆ ಶನಿವಾರವೇ ನಡೆದಿದೆ. ಈ ವೇಳೆ ಆರು ಸ್ಟಾಲ್ಗಳನ್ನು ಮುಸಲ್ಮಾನರು ಪಡೆದುಕೊಂಡಿದ್ದಾರೆ. ಧ್ವಜ ಕಟ್ಟಿರುವುದರ ಬಗ್ಗೆ ದೂರು ಬಂದಲ್ಲಿ ಜಿಲ್ಲಾಧಿಕಾರಿಗಳು ಸಭೆ ಕರೆದರೆ ಮಾತುಕತೆ ನಡೆಸುತ್ತೇವೆ. ಜಿಲ್ಲಾಧಿಕಾರಿಗಳು ಸದ್ಯ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿದ್ದಾರೆ’ ಎಂದು ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಈ ದಿನ.ಕಾಮ್ ಜೊತೆಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಉಳಿದಿರುವ ಸ್ಟಾಲ್ಗಳಿಗೆ ಟೆಂಡರ್ ಕರೆಯಲ್ಲ: ದೇವಸ್ಥಾನದ ಆಡಳಿತ ಮಂಡಳಿ
ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಸಂತೆ ವ್ಯಾಪಾರಕ್ಕೆ ಸಂಬಂಧಿಸಿದ 11 ಸ್ಟಾಲ್ಗಳ ಹರಾಜು ಪ್ರಕ್ರಿಯೆ ಕಳೆದ ಶನಿವಾರ ನಡೆದಿತ್ತು. ಈ ವೇಳೆ ಆರು ಸ್ಟಾಲ್ಗಳನ್ನು ಅನ್ಯ ಸಮುದಾಯಕ್ಕೆ ಸೇರಿದವರು ಪಡೆದುಕೊಂಡಿದ್ದು, ಉಳಿದ ಐದು ಸ್ಟಾಲ್ಗಳು ಹಿಂದೂ ಜಾತ್ರಾ ವ್ಯಾಪಾರಸ್ಥರ ಪಾಲಾಯಿತು.
ಮೂರು ದಿನಗಳ ಹಿಂದೆ ದೇವಸ್ಥಾನದ ಆಡಳಿತ ಸಮಿತಿ ಟೆಂಡರ್ ಕರೆದು ಅಂತಿಮಗೊಳಿಸಿದಾಗ 125 ಸ್ಟಾಲ್ಗಳ ಪೈಕಿ 71 ಮಂದಿ ಮಾತ್ರ ಬಿಡ್ ಮೊತ್ತ ಪಾವತಿಸಿ ಸ್ಟಾಲ್ಗಳನ್ನು ಪಡೆದುಕೊಂಡಿದ್ದರು. ಪ್ರಸ್ತುತ 11 ಸ್ಟಾಲ್ ಸೇರಿ 82 ಸ್ಟಾಲ್ಗಳು ಹಂಚಿಕೆಯಾಗಿವೆ. ಇಲ್ಲಿಗೆ ಟೆಂಡರ್ ಮುಕ್ತಾಯವಾಗಿದ್ದು, ಉಳಿದಿರುವ ಸ್ಟಾಲ್ಗಳಿಗೆ ಕರೆಯುವುದಿಲ್ಲ ಎಂದು ದೇವಸ್ಥಾನದ ಆಡಳಿತ ತಿಳಿಸಿದೆ.