ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದಲ್ಲಿ 18 ವರ್ಷದ ಭಾಗ್ಯಶ್ರಿ ಎಂಬ ಯುವತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಗೈದು ಮುಳ್ಳಿನ ಪೊದೆಯಲ್ಲಿ ಎಸೆದ ದುಷ್ಕರ್ಮಿಗಳ ಹೇಯ ಕೃತ್ಯ ಖಂಡಿಸಿ ದಲಿತ ಯುನಿಟಿ ಮೂವ್‌ಮೆಂಟ್ ಪ್ರತಿಭಟನೆ ನಡೆಸಿತು.
ಬೀದರ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮುಖಾಂತರ ತೆರಳಿ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ ದಲಿತ ಯುನಿಟಿ ಮೂವ್‌ಮೆಂಟ್ ಸಂಸ್ಥಾಪಕ ಅಧ್ಯಕ್ಷ ವಿನೋದ್ ರತ್ನಾಕರ್ ಮಾತನಾಡಿ, ‘ಶರಣರ ನೆಲದಲ್ಲಿ ಯುವತಿಯನ್ನು ಬರ್ಬರವಾಗಿ ಹತ್ಯೆಗೈದ ಕೃತ್ಯ ಇಡೀ ಮನುಕುಲವೇ ತಲೆತಗ್ಗಿಸುವಂತೆ ಮಾಡಿದೆ. ದೇಶ ಸ್ವಾತಂತ್ರ್ಯಗೊಂಡು 78 ವರ್ಷ ಕಳೆದರೂ ಮಹಿಳೆಯರಿಗೆ ಇನ್ನೂ ರಕ್ಷಣೆ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೊಲೆ , ಅತ್ಯಾಚಾರದಂತಹ ಘಟನೆಗಳು ನಡೆದಾಗ ದಾಖಲಾಗುವ ಪ್ರಕರಣಗಳ್ನು ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಕಾನೂನು ಶಿಕ್ಷೆ ನೀಡಬೇಕು. ಆದರೆ ಜನರಿಗೆ ಪ್ರಕರಣದ ಕುರಿತು ಯಾವುದೇ ಮಾಹಿತಿ ನೀಡದೇ ತನಿಖೆ ನಡೆಸಲಾಗುತ್ತಿದೆ. ಹೀಗಾಗಿ ಜನರಿಗೆ ಕಾನೂನಿನ ಅರಿವು ಮೂಡಿಸಬೇಕು’ ಎಂದು ಆಗ್ರಹಿಸಿದರು.
‘ಯುವತಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳ ಬಂಧನವಾಗಿದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಯುನಿಟಿ ಮೂವ್ಮೆಂಟ್ ರಾಜ್ಯಾಧ್ಯಕ್ಷ ಪ್ರಕಾಶ್ ರಾವಣ, ರಾಜ್ಯ ಸಂಘಟನಾ ಸಂಚಾಲಕ ಗೌತಮ್ ದೊಡ್ಡಿ ಸೇರಿದಂತೆ ಪ್ರಮುಖರಾದ ಆನಂದ್ ಮಶಿಮಾಡೆ, ವಿನೀತ್ ಗಿರಿ, ಜಗದೀಶ್ವರ್ ಬಿರಾದರ್, ಓಂಪ್ರಕಾಶ್ ರೊಟ್ಟೆ, ಮಹೇಶ್ ಗೋರನಾಳಕರ್, ಅಂಬರೀಶ್ ಕುದುರೆ, ಸಂದೀಪ್ ಕಾಂಟೆ, ಗೌತಮ್ ಪ್ರಸಾದ್, ರಾಹುಲ್ ಡಾಂಗೆ ಹಾಗೂ ಇತರರಿದ್ದರು.