ಭಾಲ್ಕಿ ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಗೆ ಸುಮಾರು 69.60 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಾರುತಿ ಜಬನೂರ ಹೇಳಿದರು.
ಖಟಕ್ ಚಿಂಚೋಳಿ ಗ್ರಾಮದ ರೈತ ಶಿವಕುಮಾರ ಡಾವರಗಾಂವೆ ಅವರ ಹೊಲಕ್ಕೆ ಮಂಗಳವಾರ ಭೇಟಿ ನೀಡಿ ಹಾನಿಯಾದ ಈರುಳ್ಳಿ ಬೆಳೆ ವೀಕ್ಷಿಸಿ, ರೈತರಿಂದ ಮಾಹಿತಿ ಪಡೆದುಕೊಂಡರು.
‘ಬೆಳೆಹಾನಿ ಸಂಭವಿಸಿದ ರೈತರ ಹೊಲಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಅತಿಹೆಚ್ಚು ಪಪ್ಪಾಯಿ 26.80 ಹೆಕ್ಟೇರ್ ಹಾನಿಯಾಗಿದೆ. ಉಳಿದಂತೆ ಟೊಮೆಟೊ 21.70, ಕಲ್ಲಂಗಡಿ 11.20, ಮಾವು 4.80, ಬಾಳೆ 2.20, ಸೀಬೆ 2, ಈರುಳ್ಳಿ 0.50 ಮತ್ತು 0.40 ಹೆಕ್ಟೇರ್ ಮೆಣಸಿನಕಾಯಿ ಬೆಳೆ ಹಾನಿಯಾಗಿದೆ’ ಎಂದು ತಿಳಿಸಿದರು.
‘ನಮ್ಮ ಇಲಾಖೆ ಅಧಿಕಾರಿಗಳು ಖುದ್ದು ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಹಾನಿ ಆಗಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅದಕ್ಕೂ ಹೊರತುಪಡಿಸಿ ಬೆಳೆಹಾನಿ ಆಗಿದ್ದು ಕಂಡು ಬಂದರೆ ರೈತರು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
‘ಅಕಾಲಿಕ ಮಳೆಗೆ ತೋಟಗಾರಿಕೆ ಬೆಳೆಗಳು ಹಾನಿ ಆಗಿರುವ ಬಗ್ಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುತ್ತದೆ. ಶೀಘ್ರ ಸಮೀಕ್ಷೆ ಪೂರ್ಣಗೊಳಿಸಿ ಪರಿಹಾರಕ್ಕಾಗಿ ಇಲಾಖೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ’ ಎಂದು ತಿಳಿಸಿದ್ದಾರೆ.