ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು ಬೆದರಿಸಿ ₹20 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಮೂವರು ಯುವಕರನ್ನು ಭಟ್ಕಳ ನಗರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆಗಸ್ಟ್ 16ರ ರಾತ್ರಿ ವ್ಯಾಪಾರಿಯೊಬ್ಬರು ತಮ್ಮ ಅಂಗಡಿಯಲ್ಲಿ ಇದ್ದಾಗ ಅಪರಿಚಿತರಿಂದ ಫೋನ್ ಕರೆ ಬಂದಿದ್ದು, “ನಿನ್ನ ಮಗಳ ಖಾಸಗಿ ಚಿತ್ರ–ವಿಡಿಯೊ ನಮ್ಮ ಬಳಿ ಇದೆ. ತಕ್ಷಣ ₹20 ಲಕ್ಷ ಕೊಡಬೇಕು. ಇಲ್ಲವಾದರೆ ವಿಡಿಯೊ ವೈರಲ್ ಮಾಡಿ ನಿನ್ನ ಮಾನ ಮರ್ಯಾದೆ ಹಾಳು ಮಾಡುತ್ತೇವೆಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಬಳಿಕ ಆಗಸ್ಟ್ 18 ಮತ್ತು 19ರಂದು ವ್ಯಾಪಾರಿ ಪತ್ನಿಯ ಮೊಬೈಲ್‌ಗೆ ಕರೆ ಮಾಡಿ, ₹20 ಲಕ್ಷ ಸಾಧ್ಯವಿಲ್ಲದಿದ್ದರೂ ಕನಿಷ್ಠ ₹15 ಲಕ್ಷ ಕೊಡಲೇಬೇಕು” ಎಂದು ಒತ್ತಾಯ ಮಾಡಿ ತಂದೆ ತಾಯಿಗೆ ಮಾನಸಿಕ ಹಿಂಸೆ ನೀಡಿದ್ದಾರೆ.
ಇದರಿಂದ ಬೇಸತ್ತು ಯುವತಿಯ ಪೋಷಕರು ಭಟ್ಕಳ ಪೋಲಿಸರಿಗೆ ದೂರನ್ನು ನೀಡಿದ್ದು, ದೂರು ಸ್ವೀಕರಿಸಿದ ಪೊಲೀಸರು ಇನ್ಸ್‌ಪೆಕ್ಟರ್ ದಿವಾಕರ ಹಾಗೂ ಪಿಎಸ್‌ಐ ನವೀನ್ ನಾಯ್ಕ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಆರೋಪಿಗಳಾದ ಮೊಹಮ್ಮದ್ ಫಾರಿಸ್, ಮೊಹಮ್ಮದ್ ಅರ್ಶದ್ ಮತ್ತು ವಿದ್ಯಾರ್ಥಿ ಅಮನ್ ಎಂಬುವವರನ್ನು ಪತ್ತೆಹಚ್ಚಿ ಬಂಧಿಸಿದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ
ಆಪರೇಷನ್ ಯಶಸ್ವಿಯಾಗಲು ಮಹೇಶ್ ಎಂ ಕೆ ಅವರ ಮಾರ್ಗದರ್ಶನ ದೊರೆತಿದ್ದು, ಠಾಣೆಯ ಸಿಬ್ಬಂದಿ ದಿನೇಶ್ ನಾಯಕ, ವಿನಾಯಕ ಪಾಟೀಲ್, ನಾಗರಾಜ ಮೊಗೇರ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗುಣಸಿ, ಲೊಕೇಶ ಕತ್ತಿ, ಮಹೇಶ್ ಅಮಗೋತ, ರಾಘವೇಂದ್ರ ಗೌಡ, ಜಗದೀಶ ನಾಯಕ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಬಬನ್ ಮತ್ತು ಉದಯ ಎಂಬುವವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.