ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಮತ್ತು ಸೇವೆ ಕಾಯಂಗೊಳಿಸುವಂತೆ ಭೀಮ ಆರ್ಮಿ ಏಕತಾ ಮಿಷನ್ ಒತ್ತಾಯಿಸಿದೆ.
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಭೀಮ್ ಆರ್ಮಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ತಹಶೀಲ್ದಾರ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ರಾಜ್ಯದ 430 ಕಾಲೇಜುಗಳಲ್ಲಿ ಕಳೆದ 20 ವರ್ಷಗಳಿಂದ ಅತಿಥಿ ಉಪನ್ಯಾಸಕರು ಕನಿಷ್ಠ ವೇತನ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಅವರಿಗೆ ಸೇವಾ ಭದ್ರತೆ ಒದಗಿಸದಿರುವುದು ಬೇಸರದ ಸಂಗತಿ. ಇದರಿಂದ ಹಲವರು ಹತಾಶೆಗೆ ಒಳಗಾಗಿ ಜೀವ ಕಳೆದುಕೊಂಡಿದ್ದಾರೆ. ಅವರ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ಮಕ್ಕಳಿಗೆ ಜ್ಞಾನಾರ್ಜನೆ ಮಾಡುವ ಶಿಕ್ಷಕರ ಬದುಕೇ ಇಂದು ಅತಂತ್ರವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಅತಿಥಿ ಉಪನ್ಯಾಸಕರು ಕಳೆದ ನ.23 ರಿಂದ ರಾಜ್ಯಾದಂತ ತರಗತಿಗಳು ಬಹಿಷ್ಕರಿಸಿ ಮುಷ್ಕರ ಕೈಗೊಂಡ ಪರಿಣಾಮ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದ್ದು ವಿದ್ಯಾರ್ಥಿಗಳಿಗೆ ಆತಂಕ ಕಾಡುತ್ತಿದೆ. ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿತ್ತು. ಇದೀಗ ರಾಜ್ಯದಲ್ಲಿ ಕಾಂಗ್ರೇಸ್ ನೇತ್ರತ್ವದ ಸರ್ಕಾರ ಬಂದಿದೆ. ಕೊಟ್ಟ ಮಾತಿನಂತೆ ಕಾಂಗ್ರೇಸ್ ನೇತ್ರತ್ವದ ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
“ಶಹಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ 3 ತಿಂಗಳಿಂದ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶಪಾಲರಿಗೆ ಮೌಖಿಕವಾಗಿ ಎಷ್ಟೇ ಕೇಳಿದರರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕರ್ನಾಟಕದವರು ಗುಲಾಮರಲ್ಲ, ಬಿಜೆಪಿ ಶಾಸಕಾಂಗ ಸಭೆಗೆ ಹೋಗಲ್ಲ : ಯತ್ನಾಳ್ ಕಿಡಿ
ಪ್ರತಿಭಟನೆಯಲ್ಲಿ ಭೀಮ ಆರ್ಮಿ ಸಂಘಟನೆ ತಾಲೂಕು ಅಧ್ಯಕ್ಷ ಶರಣ್ ಎಸ್ ಗೊಂದನವರ್, ವಿಧ್ಯಾರ್ಥಿ ಘಟಕ ಅಧ್ಯಕ್ಷ ಮಂಜು ದೊರನಹಳ್ಳಿ ಸೇರಿದಂತೆ ಪ್ರಮುಖರಾದ ಬಾಬು ಹೋತಪೇಠ, ದೇವು ದೊರನಹಳ್ಳಿ, ಗಿರೀಶ್, ಸಿದ್ದು ಬುಕ್ಕಲ್, ಮಂಜು ಹಳಿಸಗರ್, ಶಿವುಮಾಳು, ಚಂದು, ಮೌಲಾಲಿ ಹಾಗೂ ವಿಧ್ಯಾರ್ಥಿಗಳಾದ ಮಂಜುಳಾ, ಅಕ್ಷಯ, ಅಮಾತೆಪ್ಪ, ನಾಗರಾಜ್, ಚೈತ್ರ, ಅಪೂರ್ವ, ಮಾರುತಿ, ಅಮೋಘ ಇದ್ದರು.