ಬೀದರ್ ನಗರದ ಭಗತ್‌ಸಿಂಗ್ ವೃತ್ತದ ಸಮೀಪದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ಬೀದರ ಜಿಲ್ಲಾ ಮಂಡಳಿಯ 25ನೇ ಜಿಲ್ಲಾ ಸಮ್ಮೇಳನ ಜರುಗಿತು.
ಪಕ್ಷದ ಹಿರಿಯ ಮುಖಂಡ ಬಾಬುರಾವ ಹೊನ್ನಾ ಧ್ವಜಾರೋಹಣ ನೆರೆವೇರಿಸಿ ಮಾತನಾಡಿ, ʼಅಮೆರಿಕನ್ ಸಾಮ್ರಾಜ್ಯಶಾಹಿ ಹಾಗೂ ಪ್ರಸ್ತುತ ಭಾರತದ ಆರ್ಥಿಕ ನೀತಿಗಳನ್ನು ತೀವ್ರವಾಗಿ ಖಂಡಿಸಿದರು. ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೋಮುಗಲಭೆಗಳನ್ನು ಪ್ರಚೋದಿಸುತ್ತಿರುವುದನ್ನು ವಿರೋಧಿಸಿ, ಎಡಪಂಥೀಯ, ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ಶಕ್ತಿಗಳು ಒಂದಾಗಿ ಹೋರಾಡಬೇಕುʼ ಎಂದು ಕರೆ ನೀಡಿದರು.
ರಾಜ್ಯ ಸಹ ಕಾರ್ಯದರ್ಶಿ ಬಿ.ಅಮಜದ್ ಮಾತನಾಡಿ, ʼಅಮೆರಿಕದ ಡೋನಾಲ್ಡ್ ಟ್ರಂಪ್ ಭಾರತಕ್ಕೆ ನೀಡಿದ ಆರ್ಥಿಕ ಬೆದರಿಕೆಗಳನ್ನು ಉಲ್ಲೇಖಿಸಿ, ಬಿಜೆಪಿ ಸರ್ಕಾರ ಇದಕ್ಕೆ ಸಮರ್ಪಕ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಹೇಳಿದರು. ಸ್ವಾಮಿನಾಥನ್ ಆಯೋಗ ಶಿಫಾರಸ್ಸಿನಂತೆ ಎಂಎಸ್‌ಪಿ ಕಾನೂನು ಜಾರಿಗೆ ತರಬೇಕುʼ ಎಂದು ಒತ್ತಾಯಿಸಿದರು.
ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಅಧ್ಯಕ್ಷ ಮೌಲಾಮುಲ್ಲಾ ಅವರು ಬಂಡವಾಳದ ಕಾರ್ಪೋರೇಟ್ ಕಂಪನಿಗಳು ದೇಶವನ್ನು ಲೂಟಿ ಮಾಡುತ್ತಿರುವುದನ್ನು ಖಂಡಿಸಿದ ಅವರು, ಆಗಸ್ಟ್ 13 ರಂದು ನಡೆಯುವ ರಾಷ್ಟ್ರಮಟ್ಟದ ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟಕ್ಕೆ ಬೆಂಬಲ ಕೋರಿದರು.
ಸಮ್ಮೇಳನದಲ್ಲಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನಾರಂಭ, ರೈತರ ಸಾಲಮನ್ನಾ, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ, ವಿದ್ಯುತ್ ಖಾಸಗೀಕರಣ ನಿಲ್ಲಿಸುವುದು, ರೈತರಿಗೆ ಮಾಸಿಕ ಐದು ಸಾವಿರ ಗೌರವಧನ, ರೈತರ ಜಮೀನಿಗೆ ನರೇಗಾ ಯೋಜನೆಯಡಿ ರಸ್ತೆ ನಿರ್ಮಿಸುವುದು, ಕೃಷಿ ಕಾರ್ಮಿಕರ ಮಂಡಳಿ ರಚನೆ ಸೇರಿದಂತೆ 11 ಬೇಡಿಕೆಗಳ ಪಟ್ಟಿಯನ್ನು ಅಂಗೀಕರಿಸಲಾಯಿತು.
ಇದನ್ನೂ ಓದಿ : ಬೀದರ್ | ಬಸವತತ್ವ ವಿರೋಧಿ ‘ದಸರಾ ದರ್ಬಾರ್’ ಕಾರ್ಯಕ್ರಮ ಕೈಬಿಡಿ : ಬಸವರಾಜ ಧನ್ನೂರ
ಇದೇ ಸಂದರ್ಭದಲ್ಲಿ ಮೂರು ವರ್ಷಗಳ ಅವಧಿಗೆ 21 ಸದಸ್ಯರ ಜಿಲ್ಲಾ ಮಂಡಳಿ ರಚಿಸಲಾಯಿತು, ನಜೀರ್ ಅಹ್ಮದ್ (ಜಿಲ್ಲಾ ಕಾರ್ಯದರ್ಶಿ), ರಾಮಯ್ಯಾ ಮಠಪತಿ ಮತ್ತು ಎಂ.ಡಿ.ಶಫಾಯತ್ ಅಲಿ (ಸಹ ಕಾರ್ಯದರ್ಶಿ), ಜೈಶೀಲ್( ಖಜಾಂಚಿ) ಹಾಗೂ ಬಾಬುರಾವ ಹೊನ್ನಾ, ಸಿಂಧು ತಾಯಿ ಮಾನೆ, ಸೂರ್ಯಕಾಂತ ಮದಕಟ್ಟಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಯಿತು.