ಪ್ರಯಾಗರಾಜ್ ಕುಂಭಮೇಳಕ್ಕೆ ತೆರಳಿದ ವೇಳೆ ಉತ್ತರ ಪ್ರದೇಶದ ರುಪಾಪೂರ ಬಳಿ ಬೀದರ್ ನಗರದ ಲಾಡಗೇರಿಯ ಐವರು ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಲಾಡಗೇರಿಯ 14 ಜನರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಮತ್ತು ಲಾರಿಯೊಂದರ ನಡುವೆ ಶುಕ್ರವಾರ (ಫೆ.21) ರಂದು ಬೆಳಗಿನ ಜಾವ ಡಿಕ್ಕಿಯಾಗಿ 5 ಜನರು ಮೃತಪಟ್ಟು, ಇತರ 7 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಆಘಾತವಾಗಿದೆ. ಕೂಡಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ಮೃತರ ಪಾರ್ಥಿವ ಶರೀರವನ್ನು ಬೀದರ್‌ಗೆ ತರಲು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.
ʼಅಲ್ಲಿ ಕರ್ನಾಟಕದವರೇ ಆದ ಚನ್ನಪ್ಪ ಎಂಬ ಅಧಿಕಾರಿಯಿದ್ದು ಅವರೊಂದಿಗೆ ಮಾತನಾಡಿ, ʼಮೃತರ ಮತ್ತು ಗಾಯಾಳುಗಳ ಕುಟುಂಬಕ್ಕೆ ಸೂಕ್ತ ನೆರವು ದೊರಕಿಸಲು ತಿಳಿಸಲಾಗಿದೆ. ಈ ಸಂಕಷ್ಟದ ಸಮಯದಲ್ಲಿ ಸರ್ಕಾರ ಅವರೊಂದಿಗೆ ನಿಲ್ಲುತ್ತದೆ. ಮೃತರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ನೀಡಲಿ, ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಮೃತರ ಪರಿವಾರ ಅತ್ಯಂತ ಬಡ ಕುಟುಂಬ ಇದೆ, ಸರ್ಕಾರದ ವತಿಯಿಂದ ಸಾಂತ್ವನ ರೂಪದಲ್ಲಿ ತಲಾ ₹5 ಲಕ್ಷ ಪರಿಹಾರ ಕೊಡಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಯಾಗರಾಜ್ ಕುಂಭಮೇಳಕ್ಕೆ ತೆರಳಿದ ವೇಳೆ ಉತ್ತರ ಪ್ರದೇಶದ ರುಪಾಪೂರ ಬಳಿ ಬೀದರ್ ನಗರದ ಲಾಡಗೇರಿಯ ಐವರು ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪೌರಾಡಳಿತ ಸಚಿವ ರಹೀಂ ಖಾನ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಕುಂಭಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ : 5 ಜನ ಸಾವು, 7 ಜನರಿಗೆ ಗಾಯ
ʼಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ಜಿ ಹಾಗೂ ನಾನು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಮತ್ತು ಮೃತ ದೇಹಗಳನ್ನು ಬೀದರ್‌ಗೆ ತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇವೆ. ಮೃತರ ಕುಟುಂಬಗಳಿಗೆ ದೇವರು ದುಃಖ ಸಹಿಸುವ ಶಕ್ತಿಯನ್ನು ನೀಡಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆʼ ಎಂದು ತಿಳಿಸಿದ್ದಾರೆ.