ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮ ಶಾಲೆಗಳ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ‘ಶಾಹೀನ್ ವಿದ್ಯಾರ್ಥಿ ವೇತನ’ ಯೋಜನೆಯನ್ನು ಬೀದರ್ ನಗರದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ರಾಜ್ಯದ ತನ್ನ ಇನ್ನೂ 12 ಪದವಿಪೂರ್ವ ಕಾಲೇಜುಗಳಿಗೆ ವಿಸ್ತರಿಸಲು ತೀರ್ಮಾನಿಸಿದೆ.
ಹೊಸದಾಗಿ ವಿಜಯಪುರ ಶಾಖೆಯಲ್ಲಿ 35, ಕೋಲಾರ 25, ನಿಪ್ಪಾಣಿ, ಹೊಸಪೇಟೆ, ಶಿಕಾರಿಪುರ, ಬೆಳಗಾವಿ, ಹುಬ್ಬಳ್ಳಿ, ಸಿಂದಗಿ, ಮಂಗಳೂರು, ರಾಮನಗರ, ತುಮಕೂರು ತಲಾ 20 ಹಾಗೂ ಜೇವರ್ಗಿ ಶಾಖೆಯಲ್ಲಿ 10 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದ್ದಾರೆ.
‘ಈ ಹಿಂದೆ ಬೀದರ್ ಮುಖ್ಯ ಶಾಖೆ, ಕಲಬುರಗಿ, ರಾಯಚೂರು, ಬಳ್ಳಾರಿ, ಯಾದಗಿರಿ, ಔರಾದ್, ಬಸವಕಲ್ಯಾಣ, ಚಿಟಗುಪ್ಪ ಹಾಗೂ ಹುಮನಾಬಾದ್ ಸೇರಿ 9 ಶಾಖೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶೇ 75ರಷ್ಟು ಶುಲ್ಕ ವಿನಾಯಿತಿ ರೂಪದಲ್ಲಿ 250 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಉದ್ದೇಶಿಸಲಾಗಿತ್ತು. ಹೊಸ 12 ಶಾಖೆಗಳ 250 ವಿದ್ಯಾರ್ಥಿಗಳು ಸೇರಿದಂತೆ ಇದೀಗ ರಾಜ್ಯದ ಒಟ್ಟು 21 ಶಾಖೆಗಳಲ್ಲಿ 500 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲು ನಿರ್ಣಯಿಸಲಾಗಿದೆ’ ಎಂದು ಹೇಳಿದ್ದಾರೆ.
‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 90ಕ್ಕೂ ಅಧಿಕ ಅಂಕ ಪಡೆದ ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಮೇ 15ರ ಒಳಗೆ ಸಮೂಹದ ಆಯಾ ಶಾಖೆ ಅಥವಾ ಆನ್‌ಲೈನ್‌ನಲ್ಲಿ(www.shaheengroup.org) ಅರ್ಜಿ
ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 18ರಂದು ಆಯಾ ಶಾಖೆಗಳಲ್ಲಿ ಸಂದರ್ಶನದ ಮೂಲಕ ವಿದ್ಯಾರ್ಥಿಗಳ ಆಯ್ಕೆ ನಡೆಯಲಿದೆ. ಗ್ರಾಮೀಣ ಭಾಗದ, ಅಂಗವಿಕಲ ಹಾಗೂ ಅನಾಥ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ʼಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನ ಯೋಜನೆ ರೂಪಿಸಲಾಗಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವೈದ್ಯಕೀಯ ಕೋರ್ಸ್ ಕನಸು ನನಸಾಗಿಸಲು ಶಾಹೀನ್ ಹಿಂದಿನಿಂದಲೂ ನೆರವಾಗುತ್ತ ಬಂದಿದೆʼ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲ್ಯಾಣ ಕರ್ನಾಟಕದಲ್ಲಿ 21,381 ಶಿಕ್ಷಕರ ಹುದ್ದೆ ಖಾಲಿ : ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತಕ್ಕೆ ಕಾರಣಗಳೇನು?
ಶಿಷ್ಯವೇತನದ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9964763018 (ಬೀದರ್ ಮುಖ್ಯ ಕಚೇರಿ), 7666048172 (ಕಲಬುರಗಿ ಶಾಖೆ), 9916149428 (ಔರಾದ್), 9845058018 (ಬಸವಕಲ್ಯಾಣ), 8971222784 (ಚಿಟಗುಪ್ಪ), 7026951056 (ಹುಮನಾಬಾದ್), 9880539999 (ರಾಯಚೂರು), 9986670286 (ಯಾದಗಿರಿ) ಅಥವಾ 8553165562 (ಬಳ್ಳಾರಿ ಶಾಖೆ), ನಿಪ್ಪಾಣಿ- 9916823219, ಹೊಸಪೇಟೆ- 7026609451, ಶಿಕಾರಿಪುರ- 9880701143, ಬೆಳಗಾವಿ- 7618734756, ಮಂಗಳೂರು-7204009305, ರಾಮನಗರ- 7337750864, ಕೋಲಾರ-8553642075, ತುಮಕೂರು- 9886070083, ಹುಬ್ಬಳ್ಳಿ- 8553477566, ಸಿಂದಗಿ- 9483027530 ಮತ್ತು ವಿಜಯಪುರ ಶಾಖೆಯ ಮೊಬೈಲ್ ಸಂಖ್ಯೆ 9606335302 ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.