ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ರಾಜ್ಯದಾದ್ಯಂತ 63 ದಿನಗಳ ಕಾಲ ಸಂಚರಿಸಲಿರುವ ʼಅಕ್ಷರ ಜ್ಯೋತಿʼ ಯಾತ್ರೆಗೆ ಪರಂಪರೆ ನಗರಿಯಲ್ಲಿ ಬೀದರ್‌ನ ಬಸವೇಶ್ವರ ವೃತ್ತದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಕನ್ನಡ ಧ್ವಜ ತೋರಿಸಿ ಯಾತ್ರೆಗೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ʼಶೈಕ್ಷಣಿಕ ಜಾಗೃತಿ ಹಾಗೂ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಯಾತ್ರೆಯ ಉದ್ದೇಶ ಸಫಲವಾಗಲಿʼ ಎಂದು ಶುಭ ಹಾರೈಸಿದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಮಾತನಾಡಿ, ʼಕಲ್ಯಾಣ ಕರ್ನಾಟಕ ಪ್ರತಿಷ್ಠಾನವು ಸುಸಂಸ್ಕೃತ ನಾಗರಿಕರನ್ನು ರೂಪಿಸಲು ಯಾತ್ರೆ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆʼ ಎಂದರು.
ಬಸವಣ್ಣ, ಮಹಮೂದ್ ಗವಾನ್ ಮೊದಲಾದ ಮಹಾ ಪುರುಷರು ನೆಲೆಸಿದ ಬೀದರ್ ಈ ಹಿಂದೆ ಶೈಕ್ಷಣಿಕ ಕೇಂದ್ರವಾಗಿತ್ತು. ದೇಶ, ವಿದೇಶದ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಇಲ್ಲಿಗೆ ಬರುತ್ತಿದ್ದರು. ಈ ನೆಲದಿಂದ ಹಮ್ಮಿಕೊಂಡ ಯಾತ್ರೆ ರಾಜ್ಯದಾದ್ಯಂತ ಅಕ್ಷರ ಜ್ಯೋತಿ ಬೆಳಗಿಸಲಿದೆ. ಪ್ರಸ್ತುತ ಶಿಕ್ಷಕರು, ಪಾಲಕರು ಹಾಗೂ ಸಮಾಜ ಸೇರಿ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕಿದೆ. ಶಿಕ್ಷಣದ ಅಡಿಪಾಯವನ್ನು ಗಟ್ಟಿಗೊಳಿಸಬೇಕಿದೆʼ ಎಂದರು.
ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಮಾತನಾಡಿ, ʼಇಂದು ದೇಶಕ್ಕೆ ಗಂಡಾಂತರವಿರುವುದು ವಿದ್ಯಾವಂತರಿಂದಲೇ ಹೊರತು ಅವಿದ್ಯಾವಂತರಿಂದಲ್ಲ. ಅವಿದ್ಯಾವಂತರಿಂದ ಸಣ್ಣ ಪುಟ್ಟ ತಪ್ಪುಗಳು ನಡೆಯುತ್ತಿದ್ದರೆ, ವಿದ್ಯಾವಂತರಿಂದ ದೊಡ್ಡ ದೊಡ್ಡ ಅನಾಹುತಗಳು ನಡೆಯುತ್ತಿರುವುದು ನಮ್ಮ ಕಣ್ಣು ಮುಂದೆಯೇ ಇದೆ. ಹೀಗಾಗಿ ಸನ್ನಡತೆ, ಸದ್ಗುಣ, ಸದ್ವಿಚಾರದ ವಿದ್ಯಾವಂತರ ಅವಶ್ಯಕತೆ ಇದೆ. ಯಾತ್ರೆ ಶಿಕ್ಷಣದ ಜಾಗೃತಿ ಜತೆಗೆ ಸದ್ಗುಣಗಳನ್ನು ಬಿತ್ತಲಿದೆ. ಸತ್ಪ್ರಜೆಗಳ ನಿರ್ಮಾಣಕ್ಕೆ ಪ್ರೇರಣೆ ನೀಡಲಿದೆʼ ಎಂದು ತಿಳಿಸಿದರು.

ಮಾತೆ ಮಾಣಿಕೇಶ್ವರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಲೋಕೇಶ ಉಡಬಾಳೆ ಮಾತನಾಡಿ, ʼಯಾತ್ರೆ ಶಿಕ್ಷಣ ಹಾಗೂ ಸಂಸ್ಕಾರದ ಮಹತ್ವವನ್ನು ಮನವರಿಕೆ ಮಾಡಿಕೊಡಲಿದೆʼ ಎಂದರು.
ಓಂ ಸಿದ್ಧಿ ವಿನಾಯಕ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸಿದ್ರಾಮ ಮಾತನಾಡಿ, ʼಧಾರ್ಮಿಕವಾಗಿ ಅನೇಕ ಯಾತ್ರೆಗಳು ನಡೆದಿದ್ದನ್ನು ಕಂಡಿದ್ದೇವೆ. ಆದರೆ, ಶಿಕ್ಷಣ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಯಾತ್ರೆ ಹಮ್ಮಿಕೊಂಡಿರುವುದು ವಿಶೇಷ. ಯಾತ್ರೆ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕುʼ ಎಂದು ಹೇಳಿದರು.
ಇದಕ್ಕೂ ಮುನ್ನ ಐತಿಹಾಸಿಕ ಕೋಟೆಯಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ಅಕ್ಷರ ಜ್ಯೋತಿ ಯಾತ್ರೆ ಕುರಿತಾದ ವಿಡಿಯೋ ಬಿಡುಗಡೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿಸಲು ಪಣ ತೊಟ್ಟ ರಾಜಕಾರಣಿಗಳ ಪಡೆಯಿದೆ : ವಿನಯಕುಮಾರ್
ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಹಾವಶೆಟ್ಟಿ ಪಾಟೀಲ, ಮಾಣಿಕಪ್ಪ ಗೋರನಾಳೆ, ಶಿವರಾಜ ಮದಕಟ್ಟಿ, ಸಿದ್ದಯ್ಯ ಕಾವಡಿ, ಗಣಪತಿ ಸೋಲಪುರೆ, ಶರಣು ಹಣಮಶೆಟ್ಟಿ, ಸಿದ್ರಾಮಪ್ಪ ನಿಡೋದೆ, ಶಂಭುಲಿಂಗ ಕಾಮಣ್ಣ, ಮಲ್ಲಮ್ಮ ಪಾಟೀಲ, ಮನೋಜ್ ಬುಕ್ಕಾ, ಮಂಜುನಾಥ ರೆಡ್ಡಿ ಸೇರಿದಂತೆ ನಗರದ ಗಣ್ಯರು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಯಾತ್ರೆಗೆ ಯಶಸ್ಸು ಕೋರಿ ಬೀಳ್ಕೊಟ್ಟರು.