ಬೀದರ್ ನಗರದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ನಗರದ ಶೈಕ್ಷಣಿಕ ತೀವ್ರ ನಿಗಾ ಘಟಕ (ಎಐಸಿಯು)ಕ್ಕೆ ಕಲ್ಯಾಣ ಕರ್ನಾಟಕದ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚಿಸಲಾದ ಶಿಕ್ಷಣ ತಜ್ಞರ ಸಮಿತಿಯು ಬುಧವಾರ ಭೇಟಿ ನೀಡಿತು.
ಸಮಿತಿಯ ಅಧ್ಯಕ್ಷೆ ಛಾಯಾ ದೇಗಾಂವಕರ್, ಸದಸ್ಯರಾದ ಡಾ. ಅಬ್ದುಲ್ ಖದೀರ್, ಎನ್.ಬಿ. ಪಾಟೀಲ, ನಾಗಾಬಾಯಿ ಬಿ. ಬುಳ್ಳಾ ಹಾಗೂ ಮಲ್ಲಿಕಾರ್ಜುನ ಎಂ.ಎಸ್. ಅವರು ಘಟಕದಲ್ಲಿ ಕಲಿಕೆಯಲ್ಲಿ ಹಿಂದುಳಿದ ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಶೈಕ್ಷಣಿಕ ಮುಖ್ಯ ವಾಹಿನಿಗೆ ತರಲು ಅನುಸರಿಸುತ್ತಿರುವ ವಿಧಾನಗಳ ಬಗ್ಗೆ ಮಾಹಿತಿ ಪಡೆದರು.
ಘಟಕದ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಘಟಕಕ್ಕೆ ಬಂದ ಮೇಲೆ ಮೊಬೈಲ್ ವ್ಯಾಮೋಹದಿಂದ ಹೇಗೆ ಹೊರ ಬಂದೇವು, ಕಲಿಕೆಯಲ್ಲಿ ಹೇಗೆ ಆಸಕ್ತಿ ಹುಟ್ಟಿತು, ಶಿಕ್ಷಕರು ಆತ್ಮವಿಶ್ವಾಸ ವೃದ್ಧಿಸಿ ಬೇಸಿಕ್ ಸುಧಾರಣೆಗೆ ಹೇಗೆ ನೆರವಾದರು ಎನ್ನುವುದನ್ನು ವಿದ್ಯಾರ್ಥಿಗಳು ಎಳೆ ಎಳೆಯಾಗಿ ಬಿಡಿಸಿಟ್ಟರು.
ʼಶಾಹೀನ್ ಸಮೂಹದ ಶಾಲಾ, ಕಾಲೇಜುಗಳನ್ನು ಹಿಂದೆಯೇ ಟ್ಯೂಷನ್, ಮೊಬೈಲ್, ಆಟೊಮೊಬೈಲ್‍ನಿಂದ ಮುಕ್ತಗೊಳಿಸಲಾಗಿದೆ. ಮನೆ ಪಾಠದಿಂದ ಮುಕ್ತಗೊಳಿಸಿದಾಗ, ಹೆಚ್ಚಿನ ಕಾಳಜಿಯ ಅವಶ್ಯಕತೆ ಮನಗಂಡು ಶೈಕ್ಷಣಿಕ ತೀವ್ರ ನಿಗಾ ಘಟಕದ ಯೋಜನೆ ರೂಪಿಸಲಾಯಿತುʼ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರೂ ಆದ ಸಮಿತಿಯ ಸದಸ್ಯ ಡಾ. ಅಬ್ದುಲ್ ಖದೀರ್ ತಿಳಿಸಿದರು.
ʼಘಟಕದಲ್ಲಿ ಪ್ರತಿ ಆರು ವಿದ್ಯಾರ್ಥಿಗಳಿಗೆ ತಲಾ ಒಬ್ಬರು ಶಿಕ್ಷಕರು ಇದ್ದಾರೆ. ವಿದ್ಯಾರ್ಥಿಗಳು ಯಾವ ವಿಷಯಗಳಲ್ಲಿ ಬಲಹೀನ ಆಗಿದ್ದಾರೋ ಆ ವಿಷಯಗಳ ವಿಶೇಷ ತರಬೇತಿ ಕೊಟ್ಟು, ಸುಧಾರಿಸಿ, ಬಳಿಕ ಆಯಾ ತರಗತಿಗೆ ಕಳುಹಿಕೊಡಲಾಗುತ್ತದೆ. ಘಟಕದಲ್ಲಿ ಕಲಿಕೆಯಲ್ಲಿ ಹಿಂದುಳಿದ ಹಾಗೂ ಶಾಲೆ ಬಿಟ್ಟ ವಿದ್ಯಾರ್ಥಿಗಳ ಮೇಲೆ ನೇರ ನಿಗಾ ಇಡಲಾಗುತ್ತದೆ. ಹಂತ, ಹಂತವಾಗಿ ಅವರ ಶೈಕ್ಷಣಿಕ ಅಡಿಪಾಯ ಬಲಪಡಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ಕಲಿಕೆ ಬಹಳ ಸುಲಭವಾಗುತ್ತದೆʼ ಎಂದರು.
ಘಟಕದ ನೆರವಿನಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳೂ ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆಯುತ್ತಿದ್ದಾರೆ. ವಿವಿಧ ವೃತ್ತಿಪರ ಕೋರ್ಸ್ ಸೀಟು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಘಟಕದಲ್ಲಿ 1 ರಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ವರ್ಷವಿಡೀ ಪ್ರವೇಶ ಪಡೆಯಲು ಮುಕ್ತ ಅವಕಾಶ ಇದೆ. ಸದ್ಯ ಘಟಕದಲ್ಲಿ ದೇಶದ ವಿವಿಧ ರಾಜ್ಯಗಳ 800 ವಿದ್ಯಾರ್ಥಿಗಳು ಇದ್ದಾರೆ.
ಶೈಕ್ಷಣಿಕ ತೀವ್ರ ನಿಗಾ ಘಟಕ ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಶೇ 100ಕ್ಕೆ 100 ರಷ್ಟು ಪರಿಣಾಮಕಾರಿಯಾಗಿದೆ.ಕಲಿಕೆಯಲ್ಲಿ ಹಿಂದುಳಿಯುವುದು, ವಿಷಯ ಅರ್ಥವಾಗದಿರುವುದು ಮಕ್ಕಳು ಶಾಲೆ ಬಿಡಲು ಕಾರಣವಾಗುತ್ತದೆ. ಶೈಕ್ಷಣಿಕ ತೀವ್ರ ನಿಗಾ ಘಟಕದಿಂದ ಮಕ್ಕಳ ಬೆಸಿಕ್ ಬಲವಾಗುತ್ತದೆ. ಕಲಿಕೆಯಲ್ಲಿ ಆಸಕ್ತಿ ಹುಟ್ಟುತ್ತದೆ. ಶಾಲೆ ಬಿಡುವುದು ತಪ್ಪುತ್ತದೆ. ಶೈಕ್ಷಣಿಕ
ಪ್ರಗತಿಗೂ ನೆರವಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಕಳೆದ ಮೂರು ವರ್ಷದಲ್ಲಿ 39 ಬಾಲ ಕಾರ್ಮಿಕರ ರಕ್ಷಣೆ : ಬೇಕಿದೆ ಇನ್ನಷ್ಟು ಬಿಗಿ ಕ್ರಮ!
ಶಾಹೀನ್ ಶೈಕ್ಷಣಿಕ ತೀವ್ರ ನಿಗಾ ಘಟಕದ ಮುಖ್ಯಸ್ಥೆ ಮೇಹರ್ ಸುಲ್ತಾನಾ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಸಿಇಒ ತೌಸಿಫ್ ಮಡಿಕೇರಿ ಮತ್ತಿತರರು ಇದ್ದರು. ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಆಯುಕ್ತ ಡಾ. ಆಕಾಶ್ ಶಂಕರ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಲೀಂ ಪಾಶಾ ಅವರೂ ಶಾಹೀನ್ ಕಾಲೇಜಿಗೆ ಭೇಟಿ ನೀಡಿದರು.