ದೂರದಿಂದ ನೋಡಿದರೆ ಇದ್ಯಾವುದೋ ಖಾಸಗಿ ಶಾಲೆ ಇರಬೇಕೆಂದು ಕಾಣುತ್ತದೆ. ಹತ್ತಿರ ಹೋದರೆ, ʼವಾಹ್..ಅದೆಷ್ಟು ಸುಂದರ ಈ ಪುಟ್ಟ ಹಳ್ಳಿಯ ಸರ್ಕಾರಿ ಶಾಲೆʼ ಎಂದು ಚಕಿತಗೊಳಿಸುವಷ್ಟು ಬಣ್ಣದ ಚಿತ್ತಾರದಿಂದ ಸಿಂಗಾರಗೊಂಡಿದೆ.
ಆರು ದಶಕಗಳ ಹಿಂದೆ ಸ್ಥಾಪನೆಯಾದ ಔರಾದ್ ತಾಲ್ಲೂಕಿನ ಬೋರಳ ಗ್ರಾಮದ ʼಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯು ಕಾನ್ವೆಂಟ್‌ಗಳನ್ನು ಮೀರಿಸುವಂತೆ ಶಾಲೆಯ ನೂತನ ಕಟ್ಟಡ ಹೈಟೆಕ್ ಆಗಿ ನಿರ್ಮಾಣಗೊಂಡಿದೆ. 1965ರಲ್ಲಿ ಅಸ್ತಿತ್ವಕ್ಕೆ ಬಂದ ಶಾಲೆಗೆ ಈಗ ಜೀವಕಳೆ ಮೂಡಿದೆ. ಇದೀಗ ಲೋಕಾರ್ಪಣೆಗೆ ಸಿದ್ಧಗೊಂಡಿದೆ.
ಶಾಲೆಯು 1ರಿಂದ 7ನೇ ತರಗತಿಯವರೆಗೆ ಇದೆ. ಒಟ್ಟು 116 ಮಕ್ಕಳು ಓದುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕೆ ಪೂರಕವಾಗಿ ಶಾಲೆಯ ಅಭಿವೃದ್ಧಿಯಲ್ಲಿ ಶಿಕ್ಷಕ ಸತೀಶ ಮಜಗೆ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿಯ ಸದಸ್ಯರು, ದಾನಿಗಳು, ಗ್ರಾಮಸ್ಥರನ್ನು ಸಂಪರ್ಕಿಸಿ, ಹಣ ಸಂಗ್ರಹಿಸಿ ಶಾಲೆಗೆ ಆಧುನಿಕ ಸ್ಪರ್ಶ ನೀಡಿ, ಅಂದಗೊಳಿಸಲಾಗಿದೆ.

ಈ ಹಿಂದೆ ಇರುವ ಶಾಲೆಯ ಬಹುತೇಕ ಕೋಣೆಗಳು ಶಿಥಿಲಾವಸ್ಥೆಗೆ ತಲುಪಿದವು. ಇದರಿಂದ ಮಕ್ಕಳ ಕಲಿಕೆಗೆ ತೊಡಕಾಗುತ್ತಿತ್ತು. ಅದೇ ವೇಳೆಗೆ ವರ್ಗಾವಣೆಯಾಗಿ ಬಂದ ಶಿಕ್ಷಕ ಸತೀಶ ಮಜಗೆ ಅವರು ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಪ್ರಯತ್ನಿಸಿದರು. ಸಾಮೂಹಿಕ ಪ್ರಯತ್ನದಿಂದ ಶಾಲೆಗೆ ಈಗ ಹೊಸ ಕಾಯಕಲ್ಪ ಸಿಕ್ಕಿದೆ.
ಈ ಶಾಲೆಯ 7 ಜನ ಶಿಕ್ಷಕ ವೃಂದದ ಶ್ರಮ ಅಪಾರ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪೊರೆಯುವ ಅವರ ಕಾಯಕ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಮಕ್ಕಳ ಕಲಿಕೆಗೆ ಶಿಕ್ಷಕರ ಕೊರತೆಯಾಗದಂತೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಮುತುವರ್ಜಿ ವಹಿಸಿದೆ. ಬೋಧನಾ ಚಟುವಟಿಕೆಗಳಿಗೆ ಅಡೆತಡೆಯಾಗದಂತೆ ನೋಡಿಕೊಂಡು ಮಕ್ಕಳು ಗೈರಾಗದಂತೆ ಎಚ್ಚರವಹಿಸಿದ್ದಾರೆ.
ಕೆಕೆಆರ್‌ಡಿಬಿಯಿಂದ ₹80 ಲಕ್ಷ ಅನುದಾನ :
ಈ ಹಿಂದಿನ ಶಾಲಾ ಕಟ್ಟಡ ಹಳತಾಗಿ ಶಿಥಿಲಗೊಂಡಿತ್ತು. ಹೀಗಾಗಿ ಗ್ರಾಮದಲ್ಲಿ ಖಾಲಿ ಇರುವ ಸರ್ಕಾರಿ ಜಾಗದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಿ ಗ್ರಾಮಸ್ಥರು, ಶಿಕ್ಷಕರು ಸ್ಥಳೀಯ ಶಾಸಕ ಪ್ರಭು ಚವ್ಹಾಣ ಅವರ ಗಮನಕ್ಕೆ ತರಲಾಯಿತು. ಶಾಸಕರ ಮುತುವರ್ಜಿಯಿಂದ 2023-24ರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೈಕ್ರೊ ಯೋಜನೆಯಡಿ ₹80 ಲಕ್ಷ ಅನುದಾನ ಮಂಜೂರಾಗಿತ್ತು. ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕಾಮಗಾರಿ ಕೈಗೊಂಡು ಗ್ರಾಮಸ್ಥರ, ಶಿಕ್ಷಕರ ಕನಸಿನಂತೆ 5 ಸುಸಜ್ಜಿತ ಕೊಠಡಿಗಳು ನಿರ್ಮಿಸಿದ್ದಾರೆ.

ಸಹಭಾಗಿತ್ವದ ಮಂತ್ರ:
ಶಿಕ್ಷಕರ ಇಚ್ಛಾಶಕ್ತಿ, ಸಮುದಾಯದ ಸಹಭಾಗಿತ್ವ ಇದ್ದರೆ ಸರ್ಕಾರಿ ಶಾಲೆಯನ್ನು ಹೇಗೆ ಅಭಿವೃದ್ಧಿ ಪಡಿಸಬಹುದು ಎಂಬುದಕ್ಕೆ ಎಕಲಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬೋರಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯೇ ತಾಜಾ ಉದಾಹರಣೆ. ಇಲ್ಲಿನ ಶಿಕ್ಷಕರು ಹಳೆ ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪ್ ರಚಿಸಿ ಶಾಲಾಭಿವೃದ್ಧಿ ಕುರಿತು ಚರ್ಚಿಸಿದ್ದಾರೆ. ಹಳೆ ವಿದ್ಯಾರ್ಥಿಗಳಿಂದ ಇಲ್ಲಿವರೆಗೆ ಬರೋಬ್ಬರಿ ₹1.12 ಲಕ್ಷ ಹಣ ಸಂಗ್ರಹಿಸಲಾಗಿದೆ. ಜೊತೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಇಚ್ಚಾಶಕ್ತಿ ತೋರಿ ಶಾಲೆಗೆ ಹೊಸ ಕಾಂಪೌಂಡ್ ನಿರ್ಮಿಸಿದ್ದಾರೆ.
ಶಿಕ್ಷಕರು ಶಾಲೆಯನ್ನು ಬಣ್ಣಗಳಿಂದ ಸಿಂಗರಿಸಿ ಗೋಡೆಗಳ ಮೇಲೆ ಚಿತ್ತಾರ ಬರೆದು ಮಕ್ಕಳನ್ನು ಹುರುಪು ತುಂಬುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಅನೇಕ ಶಿಕ್ಷಕರು, ದಾನಿಗಳು, ಸಂಘ-ಸಂಸ್ಥೆಗಳು ಕೈಜೋಡಿಸಿದ್ದಾರೆ. ಎಲ್ಲರ ಸಹಭಾಗಿತ್ವದಿಂದ ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾ, ಶುದ್ಧ ಕುಡಿಯುವ ನೀರಿನ ಘಟಕ, ಇನ್ವೇಟರ್, ಬೆಂಚು, ಬೆಲ್, ಟೇಬಲ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಹೊಂದಿದೆ.

ಕಟ್ಟಡದ ಹೊರಗಡೆ ಹಾಗೂ ಕಾಂಪೌಂಡ್ ಗೋಡೆಗಳ ಮೇಲೆ ಸುಮಾರು ₹1.50 ಲಕ್ಷ ವೆಚ್ಚದಲ್ಲಿ ಬಣ್ಣಗಳಿಂದ ಅಂದಗೊಳಿಸಲಾಗಿದೆ. ಗೋಡೆಯ ಮೇಲೆ ಬೀದರ್ ಕೋಟೆ, ಗವಾನ್ ಮದರಸಾ, ಚೌಬಾರಾ ಹಾಗೂ ಬೀದರ್ ವಿಮಾನ ನಿಲ್ದಾಣ ಚಿತ್ರ ಆಕರ್ಷಿಸುತ್ತಿವೆ. ತರಗತಿ ಕೋಣೆ ಒಳಗಡೆ ಮೂಡಿಸಿರುವ ಕಲಿಕೆಗೆ ಪೂರಕವಾದ ಬಣ್ಣದ ವಿನ್ಯಾಸಗಳು ಕಣ್ಮನ ಸೆಳೆಯುತ್ತವೆ.
ಗುಣಮಟ್ಟ ಶಿಕ್ಷಣಕ್ಕೆ ಒತ್ತು:
ʼನಮ್ಮ ಶಾಲೆಯಲ್ಲಿ ಸದ್ಯ 116 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಳೆದ ಶೈಕ್ಷಣಿಕ ವರ್ಷ ಕೊನೆಯವರೆಗೆ ಈ ಹಿಂದೆ ಇರುವ ಹಳೆ ಶಾಲಾ ಕಟ್ಟಡದಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುತ್ತಿತ್ತು. ಇದೀಗ ಹೊಸ ಕಟ್ಟಡ ನಿರ್ಮಾಣಗೊಂಡಿದೆ. ಲೋಕರ್ಪಾಪಣೆ ಬಳಿಕ ಮಕ್ಕಳು ನೂತನ ಕೊಠಡಿಗಳಿಗೆ ಸ್ಥಳಾಂತರಗೊಳ್ಳಲಿದ್ದಾರೆʼ ಎಂದು ಶಿಕ್ಷಕ ಸತೀಶ ಮಜಗೆ ತಿಳಿಸಿದ್ದಾರೆ.

ʼಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ಮುತುವರ್ಜಿ, ಸ್ಥಳೀಯ ಜನಪ್ರತಿನಿಧಿಗಳ ಸಹಕಾರ, ದಾನಿಗಳ ಕೊಡುಗೆಯಿಂದ ಅತ್ಯುತ್ತಮ ಕಟ್ಟಡ ನಿರ್ಮಾಣಗೊಂಡಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಅಗತ್ಯ ಸೌಕರ್ಯ, ಆಧುನಿಕ ಸೌಲಭ್ಯಯಿದ್ದು, ಗುಣಮಟ್ಟ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆʼ ಎಂದರು.
ʼಎಲ್ಲರ ಸಹಕಾರದಿಂದ ನೂತನ ಕಟ್ಟಡ ನಿರ್ಮಾಣವಾಗಿದೆ. ಗ್ರಾಮಸ್ಥರ ಸಹಕಾರದಿಂದ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣವಿದೆ. ಶಾಲೆಗೆ ಅಡುಗೆ ಮನೆ, ಆಟದ ಮೈದಾನ ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಿದರೆ ಶಾಲೆಯ ಅಭಿವೃದ್ಧಿಗೆ ನೆರವಾಗಲಿದೆʼ ಎಂದು ಪ್ರಭಾರ ಮುಖ್ಯಶಿಕ್ಷಕ ರಾಜೇಂದ್ರ ಮುದಾಳೆ ಹೇಳಿದ್ದಾರೆ.
ಸರ್ಕಾರಿ ಶಾಲೆ ಅಭಿವೃದ್ಧಿಗೆ ಕೈಜೋಡಿಸಿ :
ʼಶಾಲೆಯ ಶಿಕ್ಷಕರ ಇಚ್ಚಾಶಕ್ತಿಯಿಂದ ನಮ್ಮೂರ ಶಾಲೆ ಆಧುನಿಕ ಸ್ಪರ್ಶದೊಂದಿಗೆ ಜಿಲ್ಲೆ ಅಷ್ಟೇ ಅಲ್ಲದೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಗ್ರಾಮೀಣ ಭಾಗದ ಬಡ ಪ್ರತಿಭಾವಂತ ಮಕ್ಕಳ ಶೈಕ್ಷಣಿಕ ಕಲಿಕಾಸಕ್ತಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರ ಆಸಕ್ತಿ, ಗ್ರಾಮಸ್ಥರ ಸಹಕಾರ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಚಾಶಕ್ತಿ ಅಗತ್ಯವಿದೆʼ ಎಂದು ಹಳೆ ವಿದ್ಯಾರ್ಥಿಗಳ ಸಂಘದ ನಂದಾದೀಪ ಬೋರಾಳೆ ಹೇಳುತ್ತಾರೆ.
ಇದನ್ನೂ ಓದಿ : ಲಿಂಗಾಯತರು ಸಾಂಸ್ಕೃತಿಕ ದಬ್ಬಾಳಿಕೆಗಳಿಗೆ ಬಲಿಯಾಗಬೇಡಿ : ಜೆ.ಎಸ್.ಪಾಟೀಲ್
ʼಖಾಸಗಿ ಶಾಲೆಗಳಿಗಿಂತ ನಾವೇನು ಕಮ್ಮಿ ಇಲ್ಲʼ ಎಂದು ನಮ್ಮೂರು ಸರ್ಕಾರಿ ಶಾಲೆಯ ಶಿಕ್ಷಕರು ತೋರಿಸಿಕೊಟ್ಟಿದ್ದಾರೆ. ಮನೆ-ಮನೆಗೆ ಭೇಟಿ, ಪೋಷಕರ ಸಭೆ, ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯ ಜೊತೆಗೆ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ಪರಿಣಾಮಾತ್ಮಕವಾಗಿ ಬೋಧಿಸುತ್ತಿದ್ದಾರೆ. ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ ನಮ್ಮೂರಿನ ಶಾಲೆ ಉಳಿಸಿ ಬೆಳೆಸಬೇಕುʼ ಎಂದು ಶಾಲೆಯ ಪೋಷಕರಾದ ದಿಲೀಪ ಪಾಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೀದರ್ ಜಿಲ್ಲೆಯ ಸುದ್ದಿಗಳಿಗಾಗಿ ʼಈದಿನʼ ನ್ಯೂಸ್ ಬೀದರ್ ಸಹಾಯವಾಣಿ ನಂಬರ್‌ಗೆ ಸಂಪರ್ಕಿಸಿ : 90350 53805

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.