ರಾಜ್ಯದಲ್ಲಿ ಬಾಲ್ಯ ವಿವಾಹ ನಿಷೇಧವಿದೆ. ಈ ಕುರಿತು ಎಲ್ಲ ಕಡೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಆದರೆ ಸಮಾಜ ಅತ್ಯಂತ ಗೌರವದಿಂದ ಗುರುತಿಸುವ ಸರ್ಕಾರಿ ಶಿಕ್ಷಕರೊಬ್ಬರು ಇಂಥ ಕೃತ್ಯದಲ್ಲಿ ಭಾಗಿಯಾಗಿರುವುದು ನೋವಿನ ಸಂಗತಿ. ಈ ಪ್ರಕರಣದಿಂದ ಇಡೀ ಶಿಕ್ಷಣ ಇಲಾಖೆ ತಲೆತಗ್ಗಿಸುವಂತಾಗಿದೆ. ಇದರಿಂದ ಪೋಷಕರು, ವಿದ್ಯಾರ್ಥಿಗಳೂ ಶಿಕ್ಷಕರನ್ನು ಅನುಮಾನದಿಂದ ನೋಡುವಂತಾಗಿದೆ.
ಮಕ್ಕಳಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಬೋಧಿಸಬೇಕಾಗಿರು ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗಡಿ ಗ್ರಾಮ ಹಲಸಿ ತುಗಾಂವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸಂದೀಪಕುಮಾರ ಅಜೂರೆ ಎಂಬುವರು ಅಪ್ರಾಪ್ತೆಯನ್ನು ವಿವಾಹವಾದ ಬಗ್ಗೆ ಭಾಲ್ಕಿ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ ಬಾಳುವಾಲೆ ಅವರು ಮೇಹಕರ್ ಪೋಲೀಸ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಆಗಸ್ಟ್ 5 ರಂದು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು 2023 ಜೂ. 6 ರಂದು ಶಿಕ್ಷಕ ಸಂದೀಪಕುಮಾರ ಅಜೂರೆ ಅವರ ಮದುವೆಗೆ ಸಂಬಂಧಿಸಿದ ಭಾವಚಿತ್ರ ಹಾಗೂ ವಿದ್ಯಾರ್ಥಿನಿ ಶಾಲಾ ದಾಖಲಾತಿಯನ್ನು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರಿಗೆ ನೀಡಿ, 2023 ಮಾರ್ಚ್ 29 ರ ಆಸುಪಾಸಿನಲ್ಲಿ ನಡೆದ ಈ ಮದುವೆಯ ಭಾವಚಿತ್ರ ನೋಡಿದರೆ ಸ್ಪಷ್ಟವಾಗಿ ಬಾಲ್ಯ ವಿವಾಹ ಆಗಿರುವುದು ಕಂಡು ಬರುತ್ತದೆ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಮೌಖಿಕವಾಗಿ ಹೇಳಿದರು.
ಶಿಕ್ಷಣಾಧಿಕಾರಿ ಜೂ.23ರಂದು ವರದಿ ನೀಡಿದ್ದು, ಶಿಕ್ಷಕ ಬಾಲ್ಯ ವಿವಾಹ ಆಗಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಕರಣ ಕೈಬಿಟ್ಟಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆಗಸ್ಟ್ 5 ರಂದು ಪ್ರಕರಣ ದಾಖಲಿಸಿದ್ದಾರೆ.
ರಾಜ್ಯದಲ್ಲಿ ಬಾಲ್ಯ ವಿವಾಹ ನಿಷೇಧವಿದೆ. ಈ ಕುರಿತು ಎಲ್ಲ ಕಡೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಆದರೆ ಸಮಾಜ ಅತ್ಯಂತ ಗೌರವದಿಂದ ಗುರುತಿಸುವ ಸರ್ಕಾರಿ ಶಿಕ್ಷಕರೊಬ್ಬರು ಇಂಥ ಕೃತ್ಯದಲ್ಲಿ ಭಾಗಿಯಾಗಿರುವುದು ನೋವಿನ ಸಂಗತಿ. ಈ ಪ್ರಕರಣದಿಂದ ಇಡೀ ಶಿಕ್ಷಣ ಇಲಾಖೆ ತಲೆತಗ್ಗಿಸುವಂತಾಗಿದೆ. ಇದರಿಂದ ಪೋಷಕರು, ವಿದ್ಯಾರ್ಥಿಗಳೂ ಶಿಕ್ಷಕರನ್ನು ಅನುಮಾನದಿಂದ ನೋಡುವಂತಾಗಿದೆ.

ಭಾಲ್ಕಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ ಬಾಳುವಾಲೆ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಪ್ರಕರಣ ಕುರಿತು ನನಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿದರು. ಸಂಬಂಧಪಟ್ಟ ಭಾವಚಿತ್ರ ಹಾಗೂ ದಾಖಲೆ ಕಳುಹಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೋಲೀಸರು ತನಿಖೆ ಮುಂದುವರಿಸಿದ್ದಾರೆ” ಎಂದು ಹೇಳಿದರು.
ರಾಜ್ಯ ಮಕ್ಕಳು ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಮೂಡಿಸುವ ಅಕ್ಷರಸ್ಥರಿಂದಲೇ ಬಾಲ್ಯ ವಿವಾಹ ನಡೆದಿರುವುದು ಅಕ್ಷಮ್ಯ ಅಪರಾಧ. ಇದು ತುಂಬಾ ಗಂಭೀರ ಪ್ರಕರಣವೂ ಹೌದು. ಸ್ಥಳೀಯ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಾದ ಪಿಡಿಒ, ಕಂದಾಯ ನಿರೀಕ್ಷಕರು, ಶಾಲಾ ಮುಖ್ಯಗುರು ಸೇರಿದಂತೆ ಬಿಇಒ ಅವರು ಈ ಕುರಿತು ಪ್ರಕರಣ ದಾಖಲು ಮಾಡಬೇಕಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸುವೆ” ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ? ಜೀವ ಸಂಪತ್ತಿಗೆ ಸಂಚಕಾರ ತಂದಿದೆ ಜೀವ ವೈವಿಧ್ಯ ತಿದ್ದುಪಡಿ ಮಸೂದೆ
“ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮಾತನಾಡಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದೇನೆ” ಎಂದು ಹೇಳಿದರು.
ಈ ಸಂಬಂಧ ಮಾಹಿತಿಗಾಗಿ ಭಾಲ್ಕಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಈ ದಿನ.ಕಾಮ್ ಸಂಪರ್ಕಿಸಿದ್ದು, ಯಾವುದೇ ಪ್ರತಿಕ್ರಿಯೆ ದಾರೆತಿಲ್ಲ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.