ಬೀದರ್‌ | ಕನ್ನಡ ಭಾಷೆ ಬೆಳವಣಿಗೆಗೆ ಹೊಸ ಮಾರ್ಗ ಅನಿವಾರ್ಯ : ಡಾ.ವಿಷ್ಣು ಸಿಂಧೆ

Date:

Advertisements

ಆಧುನಿಕ ಜಗತ್ತಿನಲ್ಲಿ ಕನ್ನಡ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ ಎಂದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ. ವಿಷ್ಣು ಎಂ.ಸಿಂಧೆ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ಬೀದರ್ ತಾಲ್ಲೂಕಿನ ಆಣದೂರು ಗ್ರಾಮದ ಮಾಣಿಕಪ್ರಭು ದೇವಸ್ಥಾನದಲ್ಲಿ ಶನಿವಾರ ಆಯೋಜಿಸಿದ್ದ ಬೀದರ್ ತಾಲ್ಲೂಕು ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ʼಬದಲಾದ ಕಾಲ ಘಟ್ಟದಲ್ಲಿ ಜನ ತಂತ್ರಜ್ಞಾನದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಿದೆ. ಮೊಬೈಲ್‍ನಲ್ಲಿ ನೋಡುವುದು ಹಾಗೂ ಕೇಳುವುದನ್ನು ಇಷ್ಟಪಡುತ್ತಿದ್ದಾರೆ. ಹೀಗಾಗಿ ಜನರ ಆಸಕ್ತಿಯ ಮಾರ್ಗದಲ್ಲೇ ಅವರಿಗೆ ಸಾಹಿತ್ಯ ಕೊಡಬೇಕಾಗಿದೆʼ ಎಂದು ತಿಳಿಸಿದರು.

Advertisements
WhatsApp Image 2025 03 08 at 7.54.28 PM 2

ʼಸಾಹಿತ್ಯ ಪ್ರಸಾರಕ್ಕೆ ಆಡಿಯೊ ಕತೆ, ವಾಟ್ಸಾಪ್ ಚುಟುಕು, ಇ-ಪುಸ್ತಕ, ವೆಬ್‍ಪೇಜ್, ಯುಟ್ಯೂಬ್‍ನಂಥ ಮಾರ್ಗಗಳನ್ನು ಬಳಸಿಕೊಳ್ಳಬೇಕಿದೆ. ಕೃತಿಗಳ ಮಾರಾಟಕ್ಕಾಗಿ ಪುಸ್ತಕ ಸಂತೆಗಳನ್ನು ಹಮ್ಮಿಕೊಳ್ಳಬೇಕಿದೆ. ಕನ್ನಡಕ್ಕಾಗಿ ಕೆಲಸ ಮಾಡುವವರು ಹಾಗೂ ಬರಹಗಾರರನ್ನು ಪ್ರೋತ್ಸಾಹಿಸಬೇಕಿದೆ. ಪ್ರಸ್ತುತ ಅವಕಾಶಗಳಿಗಾಗಿ ಬಹು ಭಾಷೆಗಳನ್ನು ಕಲಿಯಬೇಕಾಗಿದೆ. ಕನ್ನಡವನ್ನು ಬುನಾದಿಯಾಗಿ ಇಟ್ಟುಕೊಂಡೇ ಹೊಸ ಭಾಷೆ ಜ್ಞಾನ ಪಡೆಯಬೇಕಾಗಿದೆʼ ಎಂದು ಹೇಳಿದರು.

ಕೃತಿ ಚೌರ್ಯ, ಪ್ರಶಸ್ತಿ ಲಾಬಿ ನಿಲ್ಲಲಿ :

ಸಮ್ಮೇಳನ ಸರ್ವಾಧ್ಯಕ್ಷ ಪಂಡಿತ ಬಸವರಾಜ ಮಾತನಾಡಿ, ʼರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳ ಮೇಲೆ ಶೇ60 ರಷ್ಟು ಭಾಗದಲ್ಲಿ ಕನ್ನಡ ನಾಮ ಫಲಕ ಅಳವಡಿಕೆಗೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಸಂಪೂರ್ಣ ಅನುಷ್ಠಾನ ಆಗಬೇಕು. ಪರಿಷತ್ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ಈ ದಿಸೆಯಲ್ಲಿ ಕಾರ್ಯ ನಿರ್ವಹಿಸಬೇಕುʼ ಎಂದು ತಿಳಿಸಿದರು.

ʼತಪ್ಪು ನಾಮಫಲಕಗಳನ್ನು ತಿದ್ದಿ ಸರಿಯಾಗಿ ಬರೆಯಲು ಹಾಗೂ ಅಳವಡಿಸಲು ದಿನಾಂಕವನ್ನು ನಿಗದಿಪಡಿಸಬೇಕು. ಕನ್ನಡ ಕೃತಿ ಚೌರ್ಯ, ಲಾಬಿ ಮಾಡಿ ಪ್ರಶಸ್ತಿ ಪಡೆಯುವುದು ನಿಲ್ಲಬೇಕುʼ ಎಂದು ಹೇಳಿದರು.

ಜಿಲ್ಲೆಯಲ್ಲಿ ಕನ್ನಡ ಶಾಲೆ ಮುಚ್ಚಲು ಬಿಡುವುದಿಲ್ಲ :

ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಎಲ್ಲರಿಗೂ ದೇಶ ಮೊದಲು ಆಗಬೇಕು. ಸ್ವಾರ್ಥಕ್ಕಾಗಿ ಪ್ರಾದೇಶಿಕತೆ, ಭಾಷೆ ಹೆಸರಲ್ಲಿ ದ್ವೇಷ ಹರಡುವ ಕೆಲಸ ಯಾರೂ ಮಾಡಬಾರದು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕಾರ್ಯ ಕ್ರಿಯಾಶೀಲವಾಗಿ ಮಾಡುತ್ತಿದೆʼ ಎಂದು ಶ್ಲಾಘಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ʼಜಿಲ್ಲೆಯ ಕನ್ನಡ ಶಾಲೆಯಲ್ಲಿ ಒಂದೇ ಒಂದು ಮಗು ಇದ್ದರೂ ಕನ್ನಡ ಶಾಲೆ ಮುಚ್ಚಲು ಬಿಡುವುದಿಲ್ಲ. ಕನ್ನಡ ಭಾಷೆ ನಮ್ಮ ತಾಯಿ ಭಾಷೆ. ಅದನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಸಬೇಕುʼ ಎಂದು ತಿಳಿಸಿದರು.

WhatsApp Image 2025 03 08 at 7.54.28 PM
ಕನ್ನಡಾಭಿಮಾನಿಗಳೊಂದಿಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೆಜ್ಜೆ ಹಾಕಿದರು.

ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಅಪ್ಪಾರಾವ್ ಸೌದಿ ಅವರಿಗೆ ʼಮಾಧ್ಯಮ ಭಾಸ್ಕರʼ ಹಾಗೂ ಬಿ.ಜಿ.ತಿಮ್ಮಯ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ ಅವರಿಗೆ ʼಮಾಧ್ಯಮ ರತ್ನʼ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಓಂಪ್ರಕಾಶ ದಡ್ಡೆ ಅವರು ಸಮ್ಮೇಳನಾಧ್ಯಕ್ಷ ಪಂಡಿತ ಬಸವರಾಜ ಅವರಿಗೆ ಪರಿಷತ್ತಿನ ಧ್ವಜ ಹಸ್ತಾಂತರಿಸಿದರು.

ತಾಯಿ ಭುವನೇಶ್ವರಿ, ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ :

ಬೀದರ್ ತಾಲ್ಲೂಕು ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಆಣದೂರು ಗ್ರಾಮದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಪಂಡಿತ ಬಸವರಾಜ ಅವರ ನೇತೃತ್ವದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಅದ್ಧೂರಿ ಮೆರವಣಿಗೆ ನಡೆಯಿತು.

ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಿಂದ ಆರಂಭವಾದ ಮೆರವಣಿಗೆ ಸಮ್ಮೇಳನ ಸ್ಥಳಕ್ಕೆ ತಲುಪಿ ಸಮಾರೋಪಗೊಂಡಿತು. ಇದಕ್ಕೂ ಮುಂಚೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಬೀದರ್ ತಾಲ್ಲೂಕು ಪಂಚಾಯಿತಿ ಇಒ ಕಿರಣ ಪಾಟೀಲ ಮೆರವಣಿಗೆಗೆ ಚಾಲನೆ ನೀಡಿದರು.

WhatsApp Image 2025 03 08 at 7.54.46 PM
ಸಮ್ಮೇಳನ ಸರ್ವಾಧ್ಯಕ್ಷ ಪಂಡಿತ ಬಸವರಾಜ ಅವರ ನೇತೃತ್ವದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಅದ್ಧೂರಿ ಮೆರವಣಿಗೆ ನಡೆಯಿತು.

ಅಲಂಕೃತ ರಥದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಪಂಡಿತ ಬಸವರಾಜ ಆಸೀನರಾಗಿದ್ದರು. ರಥದ ಮೇಲೆ ಕನ್ನಡ ತಾಯಿ ಭುವನೇಶ್ವರಿಯ ಬೃಹತ್ ಭಾವಚಿತ್ರ ಇಡಲಾಗಿತ್ತು. ಎತ್ತಿನ ಗಾಡಿಗಳಲ್ಲಿ ಹಿಂದಿನ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾದ ಎಂ.ಜಿ. ದೇಶಪಾಂಡೆ, ಸಾಧನಾ ರಂಜೋಳಕರ್, ಓಂಪ್ರಕಾಶ ದಡ್ಡೆ, ತಾಲ್ಲೂಕು ಯುವ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ನಿಜಲಿಂಗ ರಗಟೆ ಇದ್ದರು.

ಎತ್ತಿನ ಗಾಡಿಗಳು, ಕಲಾ ತಂಡಗಳು, ಮಹಾ ಪುರುಷರ ಪಾತ್ರಧಾರಿಗಳು, ಹಲಿಗೆ, ಬ್ಯಾಂಡ್, ಲೇಜಿಮ್ ಮೆರವಣಿಗೆ ಸಂಭ್ರಮ ಇಮ್ಮಡಿಗೊಳಿಸಿದವು. ಡಿಜೆದಲ್ಲಿ ಮೊಳಗಿದ ‘ಅವ್ವ ಕಣೋ ಕನ್ನಡ…’, ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…’ ಮೊದಲಾದ ಗೀತೆಗಳು ಕನ್ನಡಾಭಿಮಾನ ಉಕ್ಕಿಸಿದವು. ಯುವಕರು ಹಾಡುಗಳ ಸಂಗೀತಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಸೇರಿದಂತೆ ಕನ್ನಡಾಭಿಮಾನಿಗಳು ಹೆಜ್ಜೆ ಹಾಕಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರು, ಆಣದೂರು ವೈಶಾಲಿನಗರದ ಭಂತೆ ಧಮ್ಮಾನಂದ ಮಹಾಥೆರೋ ನೇತೃತ್ವ ವಹಿಸಿದ್ದರು. ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ನೆಲ್ಸನ್ ಸುಮಿತ್ರಾ ಸಮ್ಮುಖ ವಹಿಸಿದ್ದರು.

ಬಿಡಿಎ ಮಾಜಿ ಅಧ್ಯಕ್ಷ ಬಾಬುವಾಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಗುಮ್ತಾಪುರೆ, ಉಪಾಧ್ಯಕ್ಷೆ ಶ್ರೀದೇವಿ ಅಂಬಾದಾಸ ಸೋನಿ, ಬೀದರ್ ತಾಲ್ಲೂಕು ಕಸಾಪದ ಗೌರವ ಕಾರ್ಯದರ್ಶಿಗಳಾದ ವೀರಶೆಟ್ಟಿ ಚನಶೆಟ್ಟಿ ಉಮೇಶ, ಜಾಬಾ, ಖಜಾಂಚಿ ದೇವೇಂದ್ರ ಕರಂಜೆ, ಭದ್ರಪ್ಪ ಬಶೆಟ್ಟಿ, ಶಿವಪುತ್ರ ಡಾಕುಳಗಿ, ಕಸಾಪ ಜಿಲ್ಲಾ ಉಪಾಧ್ಯಕ್ಷ ಬಾಬುರಾವ್ ದಾನಿ, ಖಜಾಂಚಿ ಶಿವಶಂಕರ ಟೋಕರೆ, ಕಾರ್ಯಕಾರಿಣಿ ಸದಸ್ಯ ನಾಗೇಶ ಪ್ರಭಾ, ತಾಲ್ಲೂಕು ಗೌರವಾಧ್ಯಕ್ಷ ಗುರುನಾಥ ಅಕ್ಕಣ್ಣ, ಉಪಾಧ್ಯಕ್ಷ ಅಶೋಕ ದಿಡಗೆ, ಬೀದರ್ ದಕ್ಷಿಣ ಕಸಾಪ ಅಧ್ಯಕ್ಷ ಬಸವರಾಜ ಬಶೆಟ್ಟಿ, ಆಣದೂರು ವಲಯ ಕಸಾಪ ಅಧ್ಯಕ್ಷ ಚೇತನ್ ಸೋರಳ್ಳಿ, ಪ್ರಮುಖರಾದ ಸಂಜು ಅಲ್ಲೂರೆ, ಸಂತೋಷಕುಮಾರ ಮಂಗಳೂರೆ, ನರಸಾರೆಡ್ಡಿ, ಸಂತೋಷ ಜೋಳದಾಪಕೆ ಮೊದಲಾದವರು ಪಾಲ್ಗೊಂಡಿದ್ದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಒಂದೇ ಹಗ್ಗಕ್ಕೆ ಕೊರಳೊಡ್ಡಿ ಅಪ್ರಾಪ್ತ ಪ್ರೇಮಿಗಳ ಆತ್ಮಹತ್ಯೆ!

ಬೀದರ್ ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ಎಂ.ಮಚ್ಚೆ ಸ್ವಾಗತಿಸಿದರು. ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಬಸವರಾಜ ಬಶೆಟ್ಟಿ ನಿರೂಪಿಸಿದರು. ಬೀದರ್ ದಕ್ಷಿಣ ಯುವ ಘಟಕದ ಅಧ್ಯಕ್ಷ ಸಿದ್ಧಾರೂಢ ಭಾಲ್ಕೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X